ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಎತ್ತಿನಗಾಡಿ ಮೆರವಣಿಗೆ ನಡೆಸಿದ ರೈತರು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ, ಕಾರ್ಮಿಕ, ಕನ್ನಡಪರ ಸಂಘಟನೆಗಳ ಸಾಥ್‌
Last Updated 27 ಸೆಪ್ಟೆಂಬರ್ 2021, 14:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದ ಭಾರತ್‌ ಬಂದ್‌, ಜಿಲ್ಲೆಯಲ್ಲಿ ಸೋಮವಾರ ಪ್ರತಿಭಟನೆಗಷ್ಟೇ ಸೀಮಿತವಾಯಿತು. ಎತ್ತಿನಗಾಡಿಯ ಮೂಲಕ ನಗರದಲ್ಲಿ ಸಂಚರಿಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ರೈತರ ಹೋರಾಟಕ್ಕೆ ಎಡಪಕ್ಷಗಳ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿದವು. ಹಿರಿಯೂರು ನಗರದಲ್ಲಿ ಅಂಗಡಿಗಳ ಬಾಗಿಲು ಮುಚ್ಚುವಂತೆ ರೈತರು ಒತ್ತಾಯಿಸಿದರು. ಹೊಸದುರ್ಗದಲ್ಲಿ ಈರುಳ್ಳಿ ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ನಾಯಕನಹಟ್ಟಿ, ಚಳ್ಳಕೆರೆ, ಹೊಳಲ್ಕೆರೆಯಲ್ಲಿ ಪ್ರತಿಭಟನೆಗಳು ನಡೆದವು. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೋರಾಟಕ್ಕೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ಬಂದ್‌ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿದ್ದವು. ಆದರೆ, ಇದಕ್ಕೆ ಜನಬೆಂಬಲ ಸಿಗಲಿಲ್ಲ.

ಜಿಲ್ಲೆಯಲ್ಲಿ ವಾಹನ, ಬಸ್‌ಗಳು ಸಂಚಾರಿಸಿದವು. ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದವು. ಜನಸಂಚಾರ ಸಹಜವಾಗಿತ್ತು. ಶಾಲೆ–ಕಾಲೇಜು ಬಾಗಿಲು ತೆರೆದಿದ್ದವು. ಸರ್ಕಾರಿ ಕಚೇರಿ, ಬ್ಯಾಂಕ್‌ ಕಾರ್ಯನಿರ್ವಹಿಸಿದವು. ಹಮಾಲರು ಕೆಲಸದಿಂದ ಹೊರಗುಳಿದ ಪರಿಣಾಮ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿಲ್ಲ.

ಬೆಳಿಗ್ಗೆ 6ಕ್ಕೆ ಗಾಂಧಿ ವೃತ್ತದಲ್ಲಿ ಜಮಾಯಿಸಿದ ರೈತರು ಪ್ರತಿಭಟನೆ ಆರಂಭಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಸಾಥ್‌ ನೀಡಿದರು. ಸಿಪಿಐ ಸೇರಿದಂತೆ ಎಡ ಪಕ್ಷಗಳ ಸಂಘಟನೆಗಳು ಬಂದ್‌ ಬೆಂಬಲಿಸಿ ರಸ್ತೆಗೆ ಇಳಿದಿದ್ದವು. ವಾಹನ ಸಂಚಾರ ತಡೆಯಲು ಪ್ರಯತ್ನಿಸಿ ವಿಫಲರಾದರು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರು.

ಜಯ ಕರ್ನಾಟಕ ರಕ್ಷಣಾ ಸೇನೆಯ ಕಾರ್ಯಕರ್ತರು ಕೃಷಿ ಕಾಯ್ದೆಗಳು ಕಾರ್ಪೊರೇಟ್‌ ಕಂಪೆನಿಗಳ ಪರವಾಗಿವೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡಿ ಸಾಲದಿಂದ ಮುಕ್ತಿ ಮಾಡಬೇಕು ಎಂದು ಕೋರಿದರು. ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ, ಸಮೃದ್ಧಿ ಕರ್ನಾಟಕ, ಎಐಕೆಕೆಎಂಎಸ್, ಜಯ ಭಾರತ ರಕ್ಷಣಾ ವೇದಿಕೆ ಸೇರಿ ಹಲವು ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಂಡಿದ್ದವು.

ಮೋದಿ ಚಿತ್ರಕ್ಕೆ ಈರುಳ್ಳಿ ಹಾರ

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ರೈತರು ಈರುಳ್ಳಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ತಡೆಯಲು ಪ್ರಯತ್ನಿಸಿದಾದರೂ ರೈತರು ಭಾವಚಿತ್ರಕ್ಕೆ ಬೆಂಕಿ ಹಾಕಿದರು. ಅಣಕು ಅಂತ್ಯಕ್ರಿಯೆ ನೆರವೇರಿಸಿ ಅಸಮಾಧಾನ ಹೊರಹಾಕಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ಗಾಂಧಿ ವೃತ್ತದಲ್ಲಿ ಜಮಾಯಿಸಿದ ರೈತರು ಈರುಳ್ಳಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು–ರೈತರ ವಾಗ್ವಾದ

ಚಿತ್ರದುರ್ಗ ನಗರದಲ್ಲಿ ಬಂದ್‌ ಆಚರಿಸಲು ಎತ್ತಿನಗಾಡಿಯಲ್ಲಿ ಬರುತ್ತಿದ್ದ ರೈತರನ್ನು ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಳ್ಳಿಗಳಿಂದ ಹತ್ತಾರು ಎತ್ತಿನಗಾಡಿಯಲ್ಲಿ ನಗರಕ್ಕೆ ಲಗ್ಗೆಯಿಟ್ಟರು. ತುರುವನೂರು ಗೇಟ್‌ ಸಮೀಪ ಕರ್ತವ್ಯದಲ್ಲಿದ್ದ ಪೊಲೀಸರು ಗಾಡಿಗಳನ್ನು ತಡೆದರು. ನಗರ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮಾಹಿತಿ ತಿಳಿದು ರೈತ ಸಂಘದ ಮುಖಂಡರು ಸ್ಥಳಕ್ಕೆ ಧಾವಿಸಿದರು.

ರೈತರು ಆಕ್ರೋಶ ಹೆಚ್ಚಾಗುವುದನ್ನು ಮನಗಂಡ ಪೊಲೀಸರು ಬಳಿಕ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಒನಕೆ ಓಬವ್ವ ವೃತ್ತದಲ್ಲಿ ಸಂಚರಿಸಿದ ಎತ್ತಿನಗಾಡಿಗಳು ಪ್ರತಿಭಟನಕಾರರಲ್ಲಿ ಹುರುಪು ತುಂಬಿದವು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಟಿ.ನುಲೇನೂರು ಶಂಕರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‍ ಬಾಬು, ಸತ್ಯಕೀರ್ತಿ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ವೈ.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ಮಹಾಂತೇಶ್, ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್, ಸಮೃದ್ಧಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಮೇಶ್, ಜನಶಕ್ತಿ ಸಂಘಟನೆಯ ಶಫಿವುಲ್ಲಾ, ಎಸ್‌ಯುಸಿಐ ಮುಖಂಡ ರವಿಕುಮಾರ್ ಇದ್ದರು.

* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ರೈತರಿಗೆ ಗೌರವ ಕೊಡುವುದನ್ನು ಅವರು ಕಲಿಯಬೇಕು. ಪ್ರಧಾನಿ ವಿದೇಶ ಸುತ್ತುವ ಬದಲು ರೈತರೊಂದಿಗೆ ಚರ್ಚಿಸಲಿ.

–ಟಿ.ನುಲೇನೂರು ಶಂಕರಪ್ಪ,ರೈತ ಸಂಘದ ಪ್ರಧಾನ ಕಾರ್ಯದರ್ಶಿ

* ಪ್ರಧಾನಿ ಮೋದಿ ಅವರು ದೇಶದ ಆಸ್ತಿಯನ್ನು ಅಡ ಇಡುತ್ತಿದ್ದಾರೆ. ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಏರಿಸಬಲ್ಲರು ಎಂಬ ವಿಶ್ವಾಸದಿಂದ ಮತ ಹಾಕಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರೈತ ಹೋರಾಟ ಹತ್ತಿಕುತ್ತಿದ್ದಾರೆ.

– ಸಿ.ಶಿವು ಯಾದವ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT