ಮಂಗಳವಾರ, ನವೆಂಬರ್ 24, 2020
22 °C
ಸ್ವಪಕ್ಷ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾದ ಸಚಿವ, ಸಂಸದ

ಬಿಜೆಪಿ ವಶಕ್ಕೆ ಮೊಳಕಾಲ್ಮುರು ಪ.ಪಂ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸ್ವಪಕ್ಷ ಸದಸ್ಯರ ತೀವ್ರ ಪೈಪೋಟಿ ಮಧ್ಯೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಯಿತು.

ನೂತನ ಅಧ್ಯಕ್ಷರಾಗಿ 6ನೇ ವಾರ್ಡ್ ಸದಸ್ಯ ಟಿ.ಲಕ್ಷ್ಮಣ, ಉಪಾಧ್ಯಕ್ಷರಾಗಿ 5ನೇ ವಾರ್ಡ್ ಸದಸ್ಯೆ ಶುಭಾ ಪೃಥ್ವಿರಾಜ್ ಆಯ್ಕೆಯಾದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಟಿ.ಲಕ್ಷ್ಮಣ ಹಾಗೂ ಕಾಂಗ್ರೆಸ್‌ನ ಅಬ್ದುಲ್ಲಾ; ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶುಭಾ ಪೃಥ್ವಿರಾಜ್, ಪಕ್ಷೇತರ ಸದಸ್ಯ ಮಂಜಣ್ಣ ಮತ್ತು ಕಾಂಗ್ರೆಸ್‌ನಿಂದ ಚಿತ್ತಮ್ಮ ನಾಮಪತ್ರ ಸಲ್ಲಿಸಿದ್ದರು.

ಬಳಿಕ ಮಂಜಣ್ಣ ನಾಮಪತ್ರ ವಾಪಸ್ ಪಡೆದರು. ಚುನಾವಣೆಯಲ್ಲಿ ಲಕ್ಷ್ಮಣ ಹಾಗೂ ಶುಭಾ ಪೃಥ್ವಿರಾಜ್ ತಲಾ 11 (ಸಂಸದ ಎ.ನಾರಾಯಣಸ್ವಾಮಿ ಮತ ಸೇರಿ) ಮತ್ತು ಅಬ್ದುಲ್ಲಾ ಮತ್ತು ಚಿತ್ತಮ್ಮ ತಲಾ 6 ಮತ ಗಳಿಸಿದರು.

ತಹಶೀಲ್ದಾರ್ ಮಲ್ಲಿಕಾರ್ಜುನ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಂಸದ ಎ.ನಾರಾಯಣಸ್ವಾಮಿ ಇದ್ದರು.

ಹೈಡ್ರಾಮ: ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿದ್ದರಿಂದ ಬಿಜೆಪಿಯ ಎಲ್ಲ 8 ಮತ್ತು ಬೆಂಬಲ ನೀಡಿರುವ ಇಬ್ಬರು ಪಕ್ಷೇತರ ಸದಸ್ಯರು ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದರು. ಕೊನೆಯ ಹಂತದಲ್ಲಿ ಕೋರ್ ಸಮಿತಿಯಲ್ಲಿ ಚರ್ಚೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಮತ್ತು ಟಿ.ಟಿ.ರವಿಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಶುಭಾ ಪೃಥ್ವಿರಾಜ್, ರೂಪಾ ಮತ್ತು ಪಕ್ಷೇತರ ಸದಸ್ಯ ಮಂಜಣ್ಣ ಹೆಸರು ಅಂತಿಮ ಮಾಡಲಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಿಗ್ಗೆ ಕೆಳಗಳಹಟ್ಟಿ ಸಮೀಪದ ತೋಟವೊಂದರಲ್ಲಿ ಸಚಿವ ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ ಹೆಸರು ಅಂತಿಮ ಮಾಡುವ ಹೊಣೆ ತೆಗೆದುಕೊಂಡರು. ಈ ಸಮಯದಲ್ಲಿ ಲಕ್ಷ್ಮಣ್ ಹಾಗೂ ರವಿಕುಮಾರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಪ್ರಥಮ ಅವಧಿಗೆ ಹಿಂದುಳಿದ ವರ್ಗದ ಟಿ.ಲಕ್ಷ್ಮಣ ಅವರಿಗೆ ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಂಡಾಗ ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ನನ್ನನ್ನೇ ಆಯ್ಕೆ ಮಾಡಬೇಕು’ ಎಂದು ಒತ್ತಡ ಹೇರಿ ಮಾತಿನ ಚಕಮಕಿ ನಡೆಸಿದರು ಎನ್ನಲಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ವರಿಷ್ಠರು ಪಕ್ಷೇತರ ಸದಸ್ಯ ಮಂಜಣ್ಣ ಹೆಸರನ್ನು ಅಂತಿಮ ಮಾಡುವ ಸಾಧ್ಯತೆ ದಟ್ಟವಾಗಿತ್ತು. ನಂತರ ರೂಪಾ ಅವರ ಹೆಸರು ಕೇಳಿಬಂದರೂ ಅಚ್ಚರಿಯಾಗಿ ಶುಭಾ ಪೃಥ್ವರಾಜ್ ಹೆಸರು ಅಂತಿಮವಾಯಿತು. ಈ ವೇಳೆ ಬಿಜೆಪಿ ಸದಸ್ಯರ ಮಧ್ಯೆಯೇ ತೀವ್ರ ವಾಕ್ಸಮರ ನಡೆಯಿತು.

ಕೊನೆಗೆ ರವಿಕುಮಾರ್ ಅವರನ್ನು ಸಮಾಧಾನ ಮಾಡಿ ಚುನಾವಣೆ ಸ್ಥಳಕ್ಕೆ ನಾರಾಯಣಸ್ವಾಮಿ ಕರೆತಂದರು. ಆಯ್ಕೆ ಪ್ರಕಟಿಸಿ ಪಾಲಿಸುವಂತೆ ಹೇಳಿ ಸಚಿವ ಶ್ರೀರಾಮುಲು ತುರ್ತು ಕಾರ್ಯ ನಿಮಿತ್ತ ಹಾವೇರಿಗೆ ತೆರಳಿದರು ಎಂದು ಪ್ರತ್ಯಕ್ಷದರ್ಶಿ ಮುಖಂಡರೊಬ್ಬರು ಮಾಹಿತಿ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ ಯಾದವ್, ಕಾರ್ಯದರ್ಶಿ ಜಯಪಾಲಯ್ಯ, ಮಂಡಲಾಧ್ಯಕ್ಷ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಶ್ರೀರಾಮರೆಡ್ಡಿ, ಮುಖಂಡರಾದ ಆರ್.ಜಿ. ಗಂಗಾಧರಪ್ಪ, ಶಾಂತಾರಾಂ ಬಸಾಪತಿ, ಚಂದ್ರಶೇಖರ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು