ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟದಲ್ಲಿಲ್ಲ ಸಾಮಾಜಿಕ ನ್ಯಾಯ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬೇಸರ

ಬಿಜೆಪಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬೇಸರ, ಭಾವುಕರಾಗಿ ಹೇಳಿಕೆ ನೀಡಿದ ಶಾಸಕ
Last Updated 5 ಆಗಸ್ಟ್ 2021, 14:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಕಾಣುತ್ತಿಲ್ಲ. ಜಾತಿ ಆಧಾರಿತ ಅವಕಾಶ ಕಲ್ಪಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಜಾತಿ ಭಾವನೆ ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ. ಸಣ್ಣ ಸಮುದಾಯ ಕೇವಲ ಮತ ಹಾಕಲು ಸೀಮಿತವಾಗಿದೆ. ಕೋಟಿ ಮೀರಿದ ಜನಸಂಖ್ಯೆ ಹೊಂದಿರುವ ಸಮುದಾಯದ ನಾಯಕರಿಗೆ ಮಾತ್ರ ಅಧಿಕಾರ ನೀಡುವುದು ಸರಿಯಲ್ಲ’ ಎಂದು ಆಕ್ಷೇಪ ಹೊರಹಾಕಿದರು.

‘ರಾಜ್ಯದಲ್ಲಿ ನಾವೂ 30 ಲಕ್ಷ ಜನಸಂಖ್ಯೆ ಹೊಂದಿದ್ದೇವೆ. ಯಾವ ಸಂದರ್ಭದಲ್ಲಿಯೂ ರಾಜಕಾರಣದಲ್ಲಿ ಜಾತಿ ಬೆರೆಸಿಲ್ಲ. ಬೇರೆ ಜಾತಿಯವರಿಗೆ ನೋವುಂಟು ಮಾಡಿಲ್ಲ. ಫಲಾನುಭವಿಗಳ ಜಾತಿಯನ್ನು ಎಂದೂ ಕೇಳುವುದಿಲ್ಲ. ಪ್ರೀತಿ ತೋರುವ ಬಡವರನ್ನು ಒಂದೇ ರೀತಿಯಲ್ಲಿ ಕಾಣುತ್ತೇನೆ’ ಎಂದು ಹೇಳಿದರು.

‘ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವಕಾಶ ವಂಚಿತನಾಗಿರುವ ನೋವು ಉಳಿದಿದೆ. ಸಚಿವ ಸ್ಥಾನಕ್ಕೆ ಹೈಕಮಾಂಡ್‌ ಮೊರೆ ಹೋಗಲಿಲ್ಲ. ಮತ್ತೊಬ್ಬರ ನೆರವು ಪಡೆಯುವ ಅಗತ್ಯವೂ ನನಗಿಲ್ಲ. ಪಕ್ಷದ ಬಹುತೇಕ ಮುಖಂಡರಿಗಿಂತ ಹೆಚ್ಚು ರಾಜಕೀಯ ಅನುಭವ ಹೊಂದಿದ್ದೇನೆ. ಪಕ್ಷವೇ ಮುಖ್ಯವಾಗಿರುವ ಕಾರಣಕ್ಕೆ ಬಡವರ ಪರವಾದ ಕೆಲಸ ಮುಂದುವರಿಸಲು ತೀರ್ಮಾನಿಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ತಂದೆ ಕೈಗಾರಿಕೋದ್ಯಮಿಯಾಗಿದ್ದರು. ಹತ್ತಿ ಗಿರಣಿ ಹೊಂದಿದ್ದ ಕುಟುಂಬ ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತು. ರಾಜಕೀಯಕ್ಕೆ ಬಂದು ಎಲ್ಲವನ್ನೂ ಕಳೆದುಕೊಂಡಿದ್ದೇನೆ. 52 ವರ್ಷ ರಾಜಕೀಯದಲ್ಲೇ ಕಳೆದಿದ್ದೇನೆ. ಪಕ್ಷದ ಹಿರಿಯ ಮುಖಂಡರಲ್ಲಿ ನಾನು ಮಾತ್ರ ಸಚಿವ ಸ್ಥಾನದಿಂದ ವಂಚಿತನಾಗಿದ್ದೇನೆ’ ಎಂದು ಭಾವುಕರಾದರು.

‘1972ರಿಂದ ನಮ್ಮ ಕುಟುಂಬ ವಿಧಾನಸಭೆಯಲ್ಲಿದೆ. ಸಹೋದರ ಅಶ್ವತ್ಥ್‌ ರೆಡ್ಡಿ ಏಳು ಬಾರಿ ಹಾಗೂ ನಾನು ಆರು ಬಾರಿ ಶಾಸಕನಾಗಿ ಗೆಲುವು ಸಾಧಿಸಿದ್ದೇವೆ. ಜಾತಿ ಮೇಲೆ ರಾಜಕೀಯ ಮಾಡಿದ್ದರೆ ಆರು ಬಾರಿ ಗೆಲ್ಲುತ್ತಿರಲಿಲ್ಲ. 1994 ರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದಾಗ ಎಲ್ಲ ವರ್ಗದ ಜನರು ಮತ ಹಾಕಿದರು. ದೊಡ್ಡ ಜನಸಂಖ್ಯೆ ಹೊಂದಿದ ಜಾತಿಯ ಅಭ್ಯರ್ಥಿಗಿಂತ ಹೆಚ್ಚು ಬೆಂಬಲಿಸಿದರು. ಜಾತಿ ಹೊರತಾದ ಅಭಿಮಾನ ನನ್ನ ಮೇಲಿದೆ’ ಎಂದು ಹೇಳಿದರು.

ಶಾಸಕರ ಬೆಂಬಲಿಗರ ಪ್ರತಿಭಟನೆ

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಗಾಂಧಿ ವೃತ್ತದಲ್ಲಿ ಜಮಾಯಿಸಿದ ಶಾಸಕರ ಬೆಂಬಲಿಗರು ಶಾಸಕರ ಪರ ಘೋಷಣೆ ಕೂಗಿದರು. ಅಲ್ಲಿಂದ ಮೆರವಣಿಗೆ ಹೊರಟು ಪ್ರವಾಸಿ ಮಂದಿರ ತಲುಪಿದರು. ಸಚಿವ ಸ್ಥಾನ ಕಲ್ಪಿಸದ ಹೈಕಮಾಂಡ್‌ ವಿರುದ್ಧ ಕಿಡಿಕಾರಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌, ನಗರಸಭೆ ಸದಸ್ಯ ಹರೀಶ್‌, ತಿಮ್ಮರಾಯಪ್ಪ, ಹನುಮಂತರೆಡ್ಡಿ ಇದ್ದರು.

ಇದು ಕೆಲವೇ ಜನಾಂಗದ ಸರ್ಕಾರವಲ್ಲವೇ ಎಂದು ಯುವಸಮೂಹ ಪ್ರಶ್ನಿಸುತ್ತಿದೆ. ಈ ಭಾವನೆಯನ್ನು ತೊಡೆದು ಹಾಕುವ ಕಾರ್ಯವನ್ನು ಹೈಕಮಾಂಡ್‌ ಮಾಡಲಿದೆ ಎಂಬ ವಿಶ್ವಾಸವಿದೆ.

- ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT