ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ವೇದಿಕೆ ಸಜ್ಜು: ಬಿ.ಕೆ.ಹರಿಪ್ರಸಾದ್

Published 8 ಸೆಪ್ಟೆಂಬರ್ 2023, 4:32 IST
Last Updated 8 ಸೆಪ್ಟೆಂಬರ್ 2023, 4:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಜಾಪ್ರಭುತ್ವದಡಿ ಎಲ್ಲ ಸಮುದಾಯಗಳಿಗೆ ಸಮಾನ ಹಕ್ಕಿದೆ. ಯಾವುದೇ ಸರ್ಕಾರ ಇದ್ದರೂ ಪ್ರಬಲರು ಬಹುಪಾಲು ಸೌಲಭ್ಯ ತೆಗೆದುಕೊಳ್ಳುತ್ತಾರೆ.‌ ಈ ಎಲ್ಲ ವಿಚಾರವಾಗಿ ಚರ್ಚಿಸಲು ಸೆ.9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತಿ ಹಿಂದುಳಿದ ವರ್ಗದ ಸಮಾನ ಮನಸ್ಕರ ಸಮಾವೇಶದ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಅತಿ ಹಿಂದುಳಿದ ವರ್ಗದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲ ಸಮುದಾಯಕ್ಕೂ ಸಮಪಾಲು, ಸಮಬಾಳು ಸಿಗಬೇಕು. ಸಣ್ಣ ಸಣ್ಣ ಜಾತಿಗಳನ್ನು ಗುರುತಿಸಿ ಒಂದುಗೂಡಿಸುವುದು ಸಮಾನ ಮನಸ್ಕರ ಸಭೆಯ ಉದ್ದೇಶವಾಗಿದೆ. ತಳಸಮುದಾಯದ ಶೇ 50 ರಷ್ಟು ಜನ ಸರ್ಕಾರಕ್ಕೆ ಶೇ 64 ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ಈಡಿಗ ಜನಾಂಗದ ಜತೆ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಹಿಂದುಳಿದವರು ಒಂದಾಗಿ ಸರ್ಕಾರ ಮುಂದೆ ಶಕ್ತಿ ಪ್ರದರ್ಶನ ಮಾಡಬೇಕು’ ಎಂದರು.

‘ಬೆಂಗಳೂರಿನಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ರಾಜ್ಯದ ಎಲ್ಲ ಜಿಲ್ಲೆಯಿಂದಲೂ ಸಮುದಾಯದವರು ಬರಲಿದ್ದಾರೆ. ಎಲ್ಲ ಪಕ್ಷದ ಅತಿ ಹಿಂದುಳಿದ ಜಾತಿಯ ಜನರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅತಿ ಹಿಂದುಳಿದ ಸಮುದಾಯದವರು ಬೆಂಬಲಿಸಿ ಗೆಲ್ಲಿಸಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗ ಅಧಿಕಾರ ಕೇಳುವ ಹಕ್ಕು ನಮಗಿದೆ. ಎಲ್ಲ ಸಮುದಾಯದವರಿಗೂ ಅಧಿಕಾರ ಹಂಚಿಕೆಯಾಗಬೇಕು’ ಎಂದು ತಿಳಿಸಿದರು.

‘ಹಿಂದುಳಿದ ಸಮುದಾಯಗಳು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಯಾರನ್ನು ಬೇಕಾದರೂ ಸೋಲಿಸುವ ಶಕ್ತಿ ಸಣ್ಣ ಸಮುದಾಯಗಳಿಗೆ ಇದೆ. ಅಲ್ಪಸಂಖ್ಯಾತರು, ದಲಿತರು ಬದುಕುವುದು ಕಷ್ಟ ಎನ್ನಿಸಿದಾಗ ತೆಗೆದು ಕೊಂಡ ದೊಡ್ಡ ನಿರ್ಧಾರದಿಂದ ಬಿಜೆಪಿ ರಾಜ್ಯದಲ್ಲಿ ಸೋತಿದೆ. ಈ ತೀರ್ಮಾನವನ್ನು ಸಣ್ಣ ಸಮುದಾಯಗಳೂ ತೆಗೆದುಕೊಳ್ಳಬೇಕು. ಲೋಕಸಭಾ ಚುನಾವಣೆ ಒಳಗಾಗಿ ಶಕ್ತಿ ಪ್ರದರ್ಶನ ಮಾಡಬೇಕು. ಇಲ್ಲವಾದರೆ ಯಾರೂ ಮಾತನಾಡಿಸುವುದಿಲ್ಲ’ ಎಂದು ಹೇಳಿದರು.

‘ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಸಮಾಜಕ್ಕೆ ನಾಯಕತ್ವ ಕೊಟ್ಟಾಗ ಮಾತ್ರ ರಾಜಕೀಯ ಪಕ್ಷಗಳು ಮಾತು ಕೇಳುತ್ತವೆ. ಇಲ್ಲದಿದ್ದರೆ ಸಣ್ಣ ಸಮುದಾಯದವರೆಂದು ತಿರಸ್ಕಾರ ಮಾಡುತ್ತವೆ. ಈ ಸಂಬಂಧ ಜಾಗೃತಿ ಮೂಡಿಸುವುದಕ್ಕಾಗಿ ಬೆಂಗಳೂರಿನಲ್ಲಿ ನಡೆಯುವ ಸಮಾನ ಮನಸ್ಕರ ಸಮಾವೇಶದ ಪೂರ್ವಭಾವಿ ಸಭೆಗೆ ಹತ್ತರಿಂದ ಹದಿನೈದು ಸಾವಿರ ಜನ ಸೇರುವ ನಿರೀಕ್ಷೆಯಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಈಡಿಗ ಸಮಾಜ ಮತ್ತು ಇತರೆ ಸೋದರ ಸಮಾಜದವರು ತಪ್ಪದೆ ಭಾಗವಹಿಸುವಂತೆ’ ಮನವಿ ಮಾಡಿದರು.

ಚಿತ್ರದುರ್ಗ ಭಾಗದಲ್ಲಿ ಗೊಲ್ಲ ಸಮುದಾಯ ಹಿಂದುಳಿದ ಪ್ರಬಲ ಸಮುದಾಯವಾಗಿದೆ. ಇದೇ ರೀತಿ ಬೇರೆ ಬೇರೆ ಭಾಗಗಳಲ್ಲಿ ಒಂದೊಂದು ಸಣ್ಣ ಸಮುದಾಯ ಪ್ರಬಲವಾಗಿರುತ್ತದೆ. ಅವರ ನೇತೃತ್ವದಲ್ಲಿ ಇತರೆ ಹಿಂದುಳಿದ ಸಮುದಾಯಗಳು ಒಂದಾಗಿ ಸಂಘಟಿತರಾಗಬೇಕು.
ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ

ವಿಧಾನ ಪರಿಷತ್‌ ಮಾಜಿ ಸದಸ್ಯ ಶ್ರೀನಾಥ್ ಮಾತನಾಡಿ, ‘ಸಣ್ಣ ಸಮಯದಾಯಗಳ ಧ್ವನಿಯಾಗಿದ್ದ ಕಾಂಗ್ರೆಸ್‌ ಇದೀಗ ಪ್ರಭಾವಿ ಸಮುದಾಯಗಳ ಹಿಡಿತದಲ್ಲಿದೆ. ಈಗಾಗಲೇ ಅಹಿಂದ  ಹೋಗಿ ಮೋಸ ಆಗಿದೆ. ಹಿಂದುಳಿದವರ ನಾಯಕರಾಗಿ ಹರಿಪ್ರಸಾದ್‌ ಮಾತ್ರ ಕಾಣುತ್ತಿದ್ದಾರೆ. ಇವರಿಗೆ ನಾವು ಬೆಂಬಲವಾಗಿ ನಿಲ್ಲಬೇಕು’ ಎಂದರು.

‘ಸಣ್ಣ, ಅತೀ ಸಣ್ಣ ಸಮುದಾಯಗಳನ್ನು ಮುನ್ನಡೆಸಲು ನಾಯಕರಿಲ್ಲ. ಆದ್ದರಿಂದ ಎಲ್ಲರೂ ಬಹಿರಂಗವಾಗಿ ಹೊರಗೆ ಬರಬೇಕು. 9 ರಂದು ಅರಮನೆ ಮೈದಾನದಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ಶಕ್ತಿ ತುಂಬಿ’ ಎಂದು ಮನವಿ ಮಾಡಿದರು.

ವಕೀಲ ಎಚ್‌.ಓ.ಜಗದೀಶ್‌ ಗುಂಡೇರಿ, ರಾಷ್ಟ್ರೀಯ ಆರ್ಯ ಈಡಿಗ ಮಹಾಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಎಚ್‌.ವೈ.ಆನಂದಪ್ಪ, ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಪಿಟ್ಲಾಲಿ ಶ್ರೀನಿವಾಸ್‌, ನಾರಾಯಣಸ್ವಾಮಿ ಬ್ಯಾಡರಹಳ್ಳಿ, ಗುರುರಾಜ್‌, ಲಕ್ಷ್ಮಿಕಾಂತ್‌, ಪ್ರಸನ್ನ ಕುಮಾರ್‌, ದೊಡ್ಡರಂಗಪ್ಪ, ಬೆಸ್ತ ಸಮಾಜದ ವೇದಮೂರ್ತಿ, ವಿಶ್ವಕರ್ಮ ಸಮಾಜದ ಪಿ.ಪ್ರಸನ್ನ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT