ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ತೆಂಗಿನ ಮರಕ್ಕೆ ಕಪ್ಪುತಲೆ ಹುಳು ಕಂಟಕ: ಕಲ್ಪವೃಕ್ಷ ನಾಡಲ್ಲಿ ಕಾರ್ಮೋಡ

Published 4 ಡಿಸೆಂಬರ್ 2023, 7:52 IST
Last Updated 4 ಡಿಸೆಂಬರ್ 2023, 7:52 IST
ಅಕ್ಷರ ಗಾತ್ರ

ಹೊಸದುರ್ಗ: ಒಂದು ವರ್ಷದ ಹಿಂದೆ ತಾಲ್ಲೂಕಿನ ರೈತರ ತೆಂಗಿನ ತೋಟಗಳಲ್ಲಿ ಸಣ್ಣದಾಗಿ ಆರಂಭವಾಗಿದ್ದ ಕಪ್ಪುತಲೆ ಹುಳು ಬಾಧೆ ಇದೀಗ ಕಲ್ಪವೃಕ್ಷಕ್ಕೆ ಕಂಟಕವಾಗಿ ಪರಿಣಿಮಿಸಿದೆ.

ಕೃಷಿ ವಿಜ್ಞಾನಿಗಳು ರೋಗ ಗುರುತಿಸಿ, ಔಷಧದ ಮಾಹಿತಿ ನೀಡಿ, ರೈತರಿಗೆ ಮಾರ್ಗದರ್ಶನ ನೀಡುವ ವೇಳೆಗಾಗಲೇ ಸುತ್ತಲಿನ ತೋಟಗಳಿಗೆ ಆವರಿಸಿದ್ದ ರೋಗ, ಇದೀಗ ತಾಲ್ಲೂಕಿನ ಬಹುತೇಕ ತೋಟಗಳಿಗೆ ವಿಸ್ತರಿಸಿದೆ. ಕಲ್ಪವೃಕ್ಷವನ್ನೇ ನೆಚ್ಚಿಕೊಂಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ಈ ಸಮಯದಲ್ಲೇ, ತೆಂಗಿಗೆ ರೋಗ ಹೆಚ್ಚಾಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೊಸದುರ್ಗ ‘ಕಲ್ಪವೃಕ್ಷದ (ತೆಂಗಿನ) ನಾಡು’ ಎಂದೇ ಪ್ರಸಿದ್ಧಿ. ಇಲ್ಲಿನ ಜನರ ಆದಾಯದ ಮೂಲವೇ ತೆಂಗು, ಕೊಬ್ಬರಿ, ಎಳನೀರು. ಈಗ ಕಪ್ಪುತಲೆ ಹುಳು ಬಾಧೆ ಒಂದು ಮರದಿಂದ ಮತ್ತೊಂದು ಮರಕ್ಕೆ ಬಹುಬೇಗ ಹರಡಿ, ಅಟ್ಟಹಾಸ ಮೆರೆಯುತ್ತಿದೆ.

ಕಸಬಾ, ಮತ್ತೋಡು, ಶ್ರೀರಾಂಪುರ, ಮಾಡದಕೆರೆ ಹೋಬಳಿಯಲ್ಲಿ ಹೆಚ್ಚಾಗಿ ತೆಂಗು ಬೆಳೆಯಲಾಗಿದೆ. ಈ ರೋಗದಿಂದಾಗಿ ಕೇವಲ ಒಂದು ಮರವಲ್ಲ, ಇಡೀ ತೋಟವೇ ಸುಟ್ಟಂತೆ ಕಾಣುತ್ತದೆ. ಫಸಲು ದೊರೆಯದ ಕಾರಣ ಕೆಲ ರೈತರು ಬೇಸರದಿಂದ ತೋಟಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ.

ಜಿಲ್ಲೆಯಾದ್ಯಂತ 60,699 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗಿದೆ. ಈ ಪೈಕಿ ಹೊಸದುರ್ಗ 1,000, ಹೊಳಲ್ಕೆರೆ 800, ಹಿರಿಯೂರು 450 ಹಾಗೂ ಚಿತ್ರದುರ್ಗ 7 ಹೆಕ್ಟೇರ್‌ ಸೇರಿ ಒಟ್ಟು 2,257 ಹೆಕ್ಟೇರ್‌ ತೋಟ ಕಪ್ಪುತಲೆ ಹುಳುಬಾಧೆಗೆ ತುತ್ತಾಗಿದೆ.

ಕಪ್ಪುತಲೆ ಹುಳು ಜತೆಗೆ ಬಿಳಿ ನೊಣ ಹುಳು ಬಾಧೆ ಸಹ ಮಾರಕವಾಗಿ ಪರಿಣಮಿಸುತ್ತಿದೆ. ಬಿಳಿ ನೊಣಗಳು ಗರಿಯನ್ನು ತಿನ್ನುವಾಗ ಅದರ ಕೆಳಭಾಗದಲ್ಲಿ ಅಂಟುದ್ರವದ ರೀತಿಯ ತ್ಯಾಜ್ಯ ವಿಸರ್ಜನೆಯಾಗುತ್ತದೆ. ಅದರ ಮೇಲೆ ಬೂಸ್ಟ್‌ ಬೆಳೆದು ಗರಿಯೆಲ್ಲಾ ಕಪ್ಪಾಗಿ ಕಾಣುತ್ತದೆ. ಇದರಿಂದ ತೆಂಗಿನ ಮರದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಈ ಹಿಂದೆ ರುಬೋಸ್‌ ಜಾತಿಯ ಹುಳುಗಳು ಹೆಚ್ಚಾಗಿದ್ದವು. ಇತ್ತೀಚೆಗೆ ಬಿಳಿ ನೋಣಗಳ ಬಾಧೆಯಿಂದಲೂ ಸಹ ತೋಟಗಳು ನಾಶವಾಗುತ್ತಿವೆ.

ತೆಂಗಿನ ಗರಿಗಳ ಹಿಂಭಾಗದಲ್ಲಿ ಕುಳಿತು ಎಲೆಯ ಹಿಂಭಾಗವನ್ನು ಕಪ್ಪುತಲೆ ಹುಳುಗಳು ತಿನ್ನುತ್ತವೆ. ಕೆಲ ದಿನಗಳ ನಂತರ ಹಸಿರಾಗಿದ್ದ ಎಲೆಗಳು ಬಣ್ಣ ಕಳೆದುಕೊಂಡು ಸುಟ್ಟಂತೆ ಕಾಣುತ್ತವೆ. ಈ ರೋಗವು ಬಿಸಿಲಿನ ವಾತಾವರಣದಲ್ಲಿ ಅಧಿಕವಾಗಿರುತ್ತದೆ. ಒಂದು ಹದವಾದ ಗುಡುಗು ಸಹಿತ ಮಳೆಯಾದಲ್ಲಿ ಎಲೆ ಮೇಲಿರುವ ಹುಳುಗಳು ಮಳೆ ನೀರಿನಲ್ಲಿ ಹೋಗುವುದರಿಂದ ರೋಗದ ಪ್ರಮಾಣ ಕಡಿಮೆಯಾಗುತ್ತದೆ.

ರೋಗದಿಂದಾಗಿ ಗುಳ್ಳು (ಆಗ ತಾನೆ ತೆಂಗು ಚಿಕ್ಕದಾಗಿ ಬಿಡಲು ಆರಂಭಿಸುವುದು) ಉದುರುತ್ತವೆ. ರೋಗ ಬಂದು 3ರಿಂದ 6 ತಿಂಗಳೊಳಗೆ ಗರಿಗೆ ಸುಳಿಬಿದ್ದು, ಇಡೀ ಮರದ ಬೆಳವಣಿಗೆ ಕುಂಠಿತವಾಗುತ್ತದೆ.  ರೈತರು ಇಲಾಖೆ ತಜ್ಞರ ಸಲಹೆ ಪಡೆದು, ಮಾರ್ಗಸೂಚಿ ಪಾಲಿಸಿದರೆ ರೋಗ ನಿಯಂತ್ರಿಸಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಹುಳುಗಳು ಮರದಲ್ಲಿ ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲೇ ಒಂದೆರಡು ತೆಂಗಿನ ಗರಿಗಳನ್ನು ಕತ್ತರಿಸಿ ಸುಟ್ಟು ಹಾಕಬೇಕು. 10 ಮಿಲಿ ಮಾನೋಕ್ರೋಟಪಸ್ ಕೀಟನಾಶಕವನ್ನು 10 ಮಿಲಿ ನೀರಿಗೆ ಬೆರೆಸಿ, ಬೇರಿಗೆ ಕಟ್ಟಬೇಕು. ತೆಂಗಿನ ಮರದ ಸುತ್ತ 6-7 ಅಡಿ ಮಣ್ಣು ಅಗೆದು ಪೆನ್ಸಿಲ್‌ ಗಾತ್ರದ ಬೇರು ಬಿಡಿಸಬೇಕು. ಆ ಬೇರಿನ ತುದಿಭಾಗದಲ್ಲಿ ಓರೆಯಾಗಿ ಕಟ್ಟಬೇಕು. ಅದರ ಮೇಲೆ ಗರಿ ಅಥವಾ ಕಸ ಹಾಕಿ ಮುಚ್ಚಬೇಕು. ಒಂದೆರಡು ದಿನ ಬಿಟ್ಟು ನೋಡಿದಾಗ ಔಷಧಿಯನ್ನು ಬೇರು ಎಳೆದು ಕೊಂಡಿದ್ದರೆ ಸಮರ್ಪಕವಾಗಿ ಕಟ್ಟಿದ್ದೇವೆ ಎಂದರ್ಥ.

ಮಾನೋಕ್ರೋಟಪಸ್‌ ಅತ್ಯಂತ ವಿಷಕಾರಿ ಕೀಟನಾಶಕ ಆಗಿರುವ ಕಾರಣ, ಅದನ್ನು ಬೇರಿಗೆ ಕಟ್ಟಿದ ನಂತರ 2 ತಿಂಗಳ ಕಾಲ ತೆಂಗಿನ ಕಾಯಿ ಅಥವಾ ಎಳನೀರು ಬಳಸಬಾರದು. ಕಪ್ಪು ತಲೆ ಹುಳುಗಳ ಹರಡುವಿಕೆ ಕಂಡುಬಂದ ಪ್ರಾರಂಭಿಕ ಹಂತದಲ್ಲೇ ಔಷಧಿ ಕಟ್ಟಬೇಕು. ಮರವನ್ನೆಲ್ಲಾ ಆವರಿಸಿದಾಗ ಔಷಧಿ ಕಟ್ಟಿದರೆ ಉಪಯೋಗವಾಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಜೈವಿಕ ಹತೋಟಿ ಕ್ರಮದಲ್ಲಿ, ಒಂದು ಮರಕ್ಕೆ 10-15 ಪರೋಪ ಜೀವಿಗಳನ್ನು ಬಿಡುಬೇಕು. ಇವು ತೆಂಗಿನ ಮರದ ಎಲೆ ಮೇಲಿರುವ ಕಪ್ಪು ತಲೆ ಹುಳುವಿನ ಮೊಟ್ಟೆಗಳನ್ನು ತಿಂದು ಅವುಗಳ ಸಂತತಿ ಬೆಳೆಯದಂತೆ ನೋಡಿಕೊಳ್ಳುತ್ತವೆ ಎನ್ನುತ್ತಾರೆ ಹಿರಿಯೂರು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಙಾನಿ ಡಾ.ಎಸ್‌.ಓಂಕಾರಪ್ಪ.

ರೋಗಕ್ಕೆ ತುತ್ತಾಗಿರುವ ತೋಟದಲ್ಲಿನ ಗರಿ ಅಥವಾ ಸಸಿಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಬಾರದು. ಅದರಿಂದ ರೋಗ ಇನ್ನಷ್ಟು ಕಡೆ ಹರಡುವ ಸಾಧ್ಯತೆ ಇರುತ್ತದೆ. ರಾಸಾಯನಿಕ ಅಥವಾ ಜೈವಿಕ ವಿಧಾನ ಅನುಸರಿಸಿದರೆ ಕೀಟ ಬಾಧೆಯನ್ನು ಹತೋಟಿಗೆ ತರಬಹುದು. 

₹ 2.60 ಕೋಟಿ ಬಿಡುಗಡೆ

ಹೊಸದುರ್ಗದ ಶ್ರೀರಾಂಪುರ ಹೊಳಲ್ಕೆರೆ ರಾಮಗಿರಿ ಹಾಗೂ ಹಿರಿಯೂರಿನ ಜೆ.ಜೆ ಹಳ್ಳಿ ಹೋಬಳಿಗಳಿಗೆ ತೆಂಗು ಪುನಃಶ್ಚೇತನ ಕಾರ್ಯಕ್ರಮದಡಿ ₹ 2.60 ಕೋಟಿ ಬಿಡುಗಡೆಯಾಗಿದೆ. ಹೊಸದುರ್ಗ ಕಸಬಾ ಹೊಳಲ್ಕೆರೆ ಮತ್ತು ಹಿರಿಯೂರು ಕಸಬಾದಲ್ಲಿ ಪುನಃಶ್ಚೇತನ ಕಾರ್ಯಕ್ರಮಕ್ಕೆ ಮನವಿ ಸಲ್ಲಿಸಲಾಗಿದೆ. ತೆಂಗು ಪುನಃಶ್ಚೇತನ ಕಾರ್ಯಕ್ರಮದಡಿ ನೀಡಿರುವ ಅನುದಾನದಲ್ಲಿ ಸಂಪೂರ್ಣ ಒಣಗಿದ ಒಂದು ಮರ ತೆರವುಗೊಳಿಸಿದರೆ ₹ 1000ದಂತೆ ಗರಿಷ್ಠ 32 ಮರಗಳನ್ನು ತೆರವು ಮಾಡಲು ಅವಕಾಶವಿದೆ. ಮರು ನಾಟಿ ಮಾಡಲು ಒಂದು ಸಸಿಗೆ ₹ 40ರಂತೆ 100 ಸಸಿಗೆ ನೆರವು ನೀಡಲು ಕಾರ್ಯಕ್ರಮದಡಿ ಅವಕಾಶವಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ.

ಕಳೆಗುಂದಿದ ಕೊಬ್ಬರಿ ಆವಕ

ರವಿಕುಮಾರ ಸಿರಿಗೊಂಡನಹಳ್ಳಿ

ಶ್ರೀರಾಂಪುರ: ಕೊಬ್ಬರಿ ಆವಕದಿಂದ ಸದಾ ಗಿಜುಗುಡುತ್ತಿದ್ದ ಶ್ರೀರಾಂಪುರದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ನಿರಂತರ ಬೆಲೆ ಇಳಿಕೆ ರೋಗಬಾಧೆ ಹಾಗೂ ಬರಗಾಲದಿಂದ ದೀಪಾವಳಿ ಬಳಿಕ ಕಳೆಗುಂದಿದೆ. ಕಳೆದ ವರ್ಷದ ತೆಂಗಿನಕಾಯಿಯಿಂದ ದೊರೆಯುತ್ತಿರುವ ಕೊಬ್ಬರಿಯ ಆವಕ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಆಗುತ್ತಿದೆ. ಆದರೆ ತೆಂಗು ಬೆಳೆಗೆ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡ ಪರಿಣಾಮ ಇಳುವರಿ ಕುಂಠಿತವಾಗಿದೆ. ಇದರಿಂದ ಮುಂದಿನ ವರ್ಷ ಕೊಬ್ಬರಿ ಆವಕ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಇಲ್ಲಿಯ ಉಪ ಮಾರುಕಟ್ಟೆಗೆ ಒಂದು ವಾರಕ್ಕೆ ಸುಮಾರು 1000 ದಿಂದ 1200 ಚೀಲಗಳವರೆಗೆ ಕೊಬ್ಬರಿ ಆವಕವಾಗುತ್ತಿತ್ತು. ಅಷ್ಟೇ ಪ್ರಮಾಣದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ಮಾರುಕಟ್ಟೆಗಳಿಗೆ ಸಾಗಣೆಯಾಗುತ್ತಿತ್ತು. ಹೊಳಲ್ಕೆರೆ ತಾಲ್ಲೂಕಿನ ಕೆಲ ಭಾಗಗಳಿಂದ ಇಲ್ಲಿಯ ಮಾರುಕಟ್ಟೆಗೆ ಕೊಬ್ಬರಿ ಬರುತ್ತಿತ್ತು. ಇತ್ತೀಚೆಗೆ ಕೆಲವರು ನೇರವಾಗಿ ರೈತರ ಮನೆಬಾಗಿಲಿಗೆ ಹೋಗಿ ಚಿಪ್ಪು ಸಮೇತ ಕೊಬ್ಬರಿಯನ್ನು ಎಣಿಕೆ (ಉಂಡೆ ಎಣಿಕೆ) ಮೂಲಕ ಖರೀದಿಸುತ್ತಿದ್ದಾರೆ. ಕೊಬ್ಬರಿ ದರ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಮತ್ತು ಒಂದು ಸಾವಿರ ತೆಂಗಿನಕಾಯಿಗೆ ₹ 13000ದಿಂದ ₹ 14000ದವರೆಗೆ ದರ ಇರುವುದರಿಂದ 9 ತಿಂಗಳು ಕೊಬ್ಬರಿ ಬರುವವರೆಗೆ ಕಾದು ನಂತರ ಕಡಿಮೆ ಬೆಲೆಗೆ ಮಾರಾಟ ಮಾಡುವ ಬದಲು ರೈತರು ನೇರವಾಗಿ ತೆಂಗಿನ ಕಾಯಿಯನ್ನೇ ಮಾರಾಟ ಮಾಡುತ್ತಿದ್ದಾರೆ. ‘ಕಳೆದ ವರ್ಷದ ಬೆಳೆಯಿಂದ ಈ ವರ್ಷ ತಕ್ಕಮಟ್ಟಿಗೆ ಕೊಬ್ಬರಿ ಮಾರುಕಟ್ಟೆಗೆ ಬರುತ್ತಿದೆ. ದೀಪಾವಳಿಯಿಂದೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿ ಆವಕ ಅರ್ಧದಷ್ಟು ಕಡಿಮೆಯಾಗಿದೆ’ ಎನ್ನುತ್ತಾರೆ ಕೊಬ್ಬರಿ ವರ್ತಕ ಶೈಲೇಂದ್ರ. ನಿರಂತರವಾಗಿ ಬೆಲೆ ಕುಸಿಯುತ್ತಿದ್ದು ಉತ್ತಮ ಬೆಲೆ ಸಿಗುವ ಭರವಸೆ ಕಳೆದುಕೊಂಡಿರುವ ರೈತರು ಸಿಕ್ಕಷ್ಟು ದರಕ್ಕೆ ಕೊಬ್ಬರಿ ಮಾರಾಟ ಮಾಡುತ್ತಿದ್ದಾರೆ. ಉತ್ತಮ ಬೆಲೆ ಸಿಗುತ್ತದೆಂದು ಬಹಳ ದಿನಗಳವರೆಗೆ ಕೊಬ್ಬರಿ ಇಟ್ಟುಕೊಂಡರೆ ಅದರ ಗುಣಮಟ್ಟ ಹಾಳಾಗುತ್ತದೆ. ಹಾಗಾಗಿ ಈಗ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.

ಎಳನೀರು ಇಳುವರಿ ಕುಸಿತ; ದರ ಏರಿಕೆ

ಕೆ.ಪಿ.ಓಂಕಾರಮೂರ್ತಿ

ಚಿತ್ರದುರ್ಗ: ಅಕಾಲಿಕ ಮಳೆ ಬರ ಕಪ್ಪುತಲೆ ಹುಳು ಬಾಧೆ ಬತ್ತಿದ ಅಂತರ್ಜಲ. ಹೀಗೆ ಸಾಲುಸಾಲು ಕಾರಣಗಳಿಂದ ಜಿಲ್ಲೆಯಲ್ಲಿ ಎಳನೀರು ಇಳುವರಿಯಲ್ಲಿ ಭಾರಿ ಕುಸಿತ ಕಂಡಿದ್ದು ದರ ಏರಿಕೆಯಾಗಿದೆ. ನಾಲ್ಕೈದು ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಳನೀರಿನ ದರ ಏರಿಕೆ ಸಾಮಾನ್ಯ. ಆದರೆ ಈ ವರ್ಷ ಈಗಾಗಲೇ ದರ ಏರಿಕೆಯಾಗಿದ್ದು ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ. ಸಾಮಾನ್ಯ ದಿನಗಳಲ್ಲಿ ₹ 25ರಿಂದ ₹ 30ರವರೆಗೆ ಇರುತ್ತಿದ್ದ ದರ ಈಗ ₹ 35ರಿಂದ ₹ 40ಕ್ಕೆ ಹೆಚ್ಚಳವಾಗಿದೆ. ಚಿತ್ರದುರ್ಗ ನಗರದಲ್ಲಿ ಅಂದಾಜು 50 ಸ್ಥಳಗಳಲ್ಲಿ ಎಳನೀರು ಮಾರಾಟ ಮಾಡಲಾಗುತ್ತಿದೆ. ಶಿವಗಂಗಾ ಚಿತ್ರಹಳ್ಳಿ ಅನ್ನೇಹಾಳ್‌ ಹೊಸದುರ್ಗ ಜಾನಕೊಂಡ ಈಚಲನಾಗೇನಹಳ್ಳಿ ಮಲ್ಲಾಪುರ ಭಾಗದಿಂದ ನಿತ್ಯ ಇಲ್ಲವೇ ಎರಡು ದಿನಕ್ಕೊಮ್ಮೆ ಚಿತ್ರದುರ್ಗ ಮಾರುಕಟ್ಟೆಗೆ ಎಳನೀರು ಬರುತ್ತದೆ. ಬೀದಿ ಬದಿಗಳಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಎಳನೀರು ವ್ಯಾಪಾರ ಬೆಲೆ ಏರಿಕೆ ಕಾರಣಕ್ಕೆ ಗಣನೀಯವಾಗಿ ತಗ್ಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಳನೀರು ಖರೀದಿಸುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮರದಿಂದ ಎಳನೀರು ಇಳಿಸುವ ಕಾರ್ಮಿಕರು ಸಕಾಲಕ್ಕೆ ಸಿಗುತ್ತಿಲ್ಲ. ಸಿಕ್ಕರೂ ದುಬಾರಿ ಕೂಲಿ ಕೇಳುತ್ತಿದ್ದಾರೆ. ಒಂದು ಎಳನೀರು ಇಳಿಸಲು ಐದಾರು ರೂಪಾಯಿ ನೀಡಬೇಕು. ದೊಡ್ಡ ಮರವಾದರೆ ಇನ್ನೂ ಹೆಚ್ಚು ಕೂಲಿ ಕೇಳುವುದು ಮಾಮೂಲಿಯಾಗಿದೆ. ಎಳನೀರು ಇಳಿಸಲು ಕೂಲಿ ಸಾಗಣೆ ವೆಚ್ಚ ಕಳೆದು ಲಾಭ ಕಾಣುವುದು ವ್ಯಾಪಾರಿಗಳಿಗೆ ಕಷ್ಟವಾಗಿದೆ. ತೆಂಗಿನ ತೋಟದಿಂದ ಮಾರುಕಟ್ಟೆಗೆ ತಲುಪುವುದರೊಳಗೆ ಪ್ರತೀ ಎಳನೀರಿಗೆ ₹ 25 ಖರ್ಚು ಬರುತ್ತಿದೆ. ವಿಧಿ ಇಲ್ಲದೇ ದರ ಏರಿಸಬೇಕಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಹೊಸದುರ್ಗ ಭಾಗದಲ್ಲಿ 1000 ಹೆಕ್ಟೇರ್‌ ವ್ಯಾಪ್ತಿಯಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿದೆ. ರೈತರಿಗೆ ಜಾಗೃತಿ ಮೂಡಿಸಲಾಗಿದ್ದು ಪುನಃಶ್ಚೇತನ ಕಾರ್ಯಕ್ರಮದಡಿ ₹ 2.60 ಕೋಟಿ ಬಿಡುಗಡೆಯಾಗಿದೆ
ಜಿ.ಸವಿತಾ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ
ಹುಳದ ಕಾಟಕ್ಕೆ ತೆಂಗಿನ ತೋಟಗಳು ಸಂಪೂರ್ಣ ಹಾಳಾಗುತ್ತಿವೆ. ಯಾವ ಔಷಧಿ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ನಮ್ಮ ಆದಾಯದ ಮೂಲವೇ ತೆಂಗಿನ ತೋಟವಾಗಿತ್ತು. ಪರಿಸ್ಥಿತಿ ಹೀಗೆ ಸಾಗಿದರೆ ಜೀವನ ಕಷ್ಟವಾಗಲಿದೆ.
ಲವಕುಮಾರ್‌ ಪಿ.ಬುರುಡೇಕಟ್ಟೆ ರೈತ
ಕಪ್ಪುತಲೆ ಹುಳ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಹಾಯ ನೀಡಲು ಸರ್ಕಾರ ಮುಂದಾಗಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು. ತೆಂಗು ಪುನಃಶ್ಚೇತನ ಕಾರ್ಯಕ್ರಮದಡಿ ಸರ್ಕಾರ ಸಹಕಾರ ನೀಡಬೇಕು
ಬಿ.ಬೋರೇಶ್‌, ಅಧ್ಯಕ್ಷ, ರೈತ ಸಂಘ ತಾಲ್ಲೂಕು ಘಟಕ ಹೊಸದುರ್ಗ
ಸಕಾಲಕ್ಕೆ ಮಳೆಯಾಗದ ಕಾರಣ ತೆಂಗಿನ ಮರಗಳಲ್ಲಿ ಇಳುವರಿ ಕುಸಿದಿದೆ. ಬೇರೆ ಕಡೆಯಿಂದ ಎಳನೀರು ತರಿಸದೇ ಚಿತ್ರದುರ್ಗದ ಹಳ್ಳಿಯಿಂದಲೇ ಖರೀದಿಸುತ್ತಿದ್ದೇವೆ. ದರ ಏರಿಕೆ ಅನಿವಾರ್ಯ. ಸಮಸ್ಯೆಗಳಿದ್ದರೂ ಎಳನೀರಿನ ವ್ಯಾಪಾರವನ್ನೇ ನೆಚ್ಚಿಕೊಂಡು ಜೀವನ ಮಾಡುತ್ತಿದ್ದೇವೆ
ಎಸ್‌.ನಾಗರಾಜ್‌, ಎಳನೀರು ವ್ಯಾಪಾರಿ, ಚಿತ್ರದುರ್ಗ
ತೆಂಗಿನ ಗರಿಯಲ್ಲಿ ಕಪ್ಪುತಲೆ ಹುಳು
ತೆಂಗಿನ ಗರಿಯಲ್ಲಿ ಕಪ್ಪುತಲೆ ಹುಳು
ಶ್ರೀರಾಂಪುರದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ
ಶ್ರೀರಾಂಪುರದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ
ಚಿತ್ರದುರ್ಗದ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಎಳನೀರು ಮಾರಾಟ ಮಾಡುತ್ತಿರುವ ವ್ಯಾಪಾರಿ
ಚಿತ್ರದುರ್ಗದ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಎಳನೀರು ಮಾರಾಟ ಮಾಡುತ್ತಿರುವ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT