ತಂಗಿಯ ಮೃತದೇಹ ಕೊಂಡೊಯ್ಯುವಾಗ ಸಂಭವಿಸಿದ ಅಪಘಾತದಲ್ಲಿ ಅಣ್ಣ ಸಾವು

ಆದಿವಾಲ (ಹಿರಿಯೂರು): ತಾಲ್ಲೂಕಿನ ಆದಿವಾಲ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡ ರಾತ್ರಿ ತಂಗಿಯ ಮೃತದೇಹವಿದ್ದ ಆಂಬುಲೆನ್ಸ್ ಹಿಂಬಾಲಿಸುತ್ತಿದ್ದ ಇನ್ನೊವಾ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಅಣ್ಣ ಕೂಡ ಮೃತಪಟ್ಟಿದ್ದಾರೆ.
ಹಿರೇಕೆರೂರು ತಾಲ್ಲೂಕಿನ ಹಿರೇಮೊರಬ ಗ್ರಾಮದ ರಾಮು ಮುದಿಗೌಡರ (56) ಮೃತಪಟ್ಟವರು. ರಾಮು ಅವರ ಸಹೋದರಿ ರೇಣುಕಾ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಅವರು ಮೃತಪಟ್ಟಿದ್ದರು. ಆಂಬುಲೆನ್ಸ್‌ನಲ್ಲಿ ಸಹೋದರಿಯ ಶವ ತೆಗೆದುಕೊಂಡು ಹಿರೇಕೆರೂರಿಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತರಾಗಿದ್ದ ರಾಮು ಅವರು ಹಿರೇಕೆರೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಂಡಳಿ ಸದಸ್ಯರಾಗಿ, ಹಿರೇಮೊರಬದ ವಿಎಸ್ಎಸ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕಾರಿನ ಚಾಲಕ ವಿಜಯಕುಮಾರ್ ಹಾಗೂ ಮಂಜುಳಾ ಅವರಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ ಎಂದು ಗ್ರಾಮಾಂತರ ಠಾಣೆ ಎಸ್ಐ ಪರಮೇಶ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.