ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಸಮೀಪ ಬಸ್‌ಗೆ ಬೆಂಕಿ: ಪತ್ತೆಯಾಗದ ಬೆಂಕಿ ಕಿಡಿಯ ಜಾಡು

Last Updated 12 ಆಗಸ್ಟ್ 2020, 16:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಲಿಸುತ್ತಿದ್ದ ಬಸ್‌ ಬೆಂಕಿಗೆ ಆಹುತಿಯಾಗಲು ಕಾರಣವಾದ ಕಿಡಿ ಹೊತ್ತಿದ್ದು ಎಲ್ಲಿ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬೆಂಕಿ ಕಿಡಿಯ ಜಾಡು ಹಿಡಿದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ತನಿಖೆ ಆರಂಭಿಸಿವೆ.

ಬಸ್‌ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಬಸ್‌ ಚಾಲಕ ಮಾತ್ರ ಇದನ್ನು ಅಲ್ಲಗಳೆಯುತ್ತಿದ್ದಾರೆ. ಪ್ರಯಾಣಿಕರು ಕೂರುವ ಆಸನದ ಸಮೀಪವೇ ಬೆಂಕಿ ಕಾಣಿಸಿಕೊಂಡಿರುವುದಾಗಿ ಚಾಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಸ್‌ ಎಂಜಿನ್‌ ಸುಸ್ಥಿತಿಯಲ್ಲಿದ್ದು, ಯಾವುದೇ ತೊಂದರೆ ಉಂಟಾಗಿಲ್ಲ ಎಂಬುದನ್ನು ಆರ್‌ಟಿಒ ಖಚಿತಪಡಿಸಿದ್ದಾರೆ. ಡೀಸೆಲ್‌ ಟ್ಯಾಂಕ್‌, ಸೈಲೆನ್ಸರ್‌ ಕೂಡ ಸುರಕ್ಷಿತವಾಗಿವೆ. ಹೀಗಾಗಿ, ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದರ ಮೇಲೆ ತನಿಖಾಧಿಕಾರಿಗಳು ಗಮನ ಕೇಂದ್ರೀಕರಿಸಿದ್ದಾರೆ.

‘ಬೆಂಗಳೂರು ನೋಂದಣಿ ಹೊಂದಿರುವ ಬಸ್‌, ವರ್ಷದ ಹಿಂದೆಯಷ್ಟೇ ರಸ್ತೆಗೆ ಇಳಿದಿತ್ತು. ಹೊಸ ಬಸ್‌ ಸುಸ್ಥಿತಿಯಲ್ಲೇ ಇದೆ. ಎಂಜಿನ್‌ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಪಡುವಂತಹ ಯಾವುದೇ ಸುಳಿವು ಲಭ್ಯವಾಗಿಲ್ಲ. ಬೆಂಕಿಗೆ ಕಾರಣವಾಗಿರುವ ಹಲವು ಆಯಾಮಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌.ಹೆಗಡೆ ತಿಳಿಸಿದರು.

ಬಸ್‌ ಲಗೇಜ್‌ ಬಾಕ್ಸಿನ ಬಹುತೇಕ ಭಾಗವನ್ನು ನಿಂಬೆಹಣ್ಣು ಆವರಿಸಿತ್ತು. ಅವಘಡ ಸಂಭವಿಸಿದ ಸ್ಥಳದಲ್ಲಿ ನಿಂಬೆಹಣ್ಣು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಗ್ನಿ ಅವಘಡಕ್ಕೆ ನಿಂಬೆ ಹಣ್ಣು ಕಾರಣವಾಗಲಾರದು ಎಂಬುದನ್ನು ಆರ್‌ಟಿಒ ಸ್ಪಷ್ಟಪಡಿಸಿದ್ದಾರೆ.

ಅವಘಡದಿಂದ ಪಾರಾಗಲು ಪ್ರಯಾಣಿಕರ ನೆರವಿಗೆ ನಿರ್ಮಿಸಿದ ತುರ್ತು ನಿರ್ಗಮನದ ಬಾಗಿಲು ತೆರೆದಿತ್ತೇ ಎಂಬುದರ ಬಗ್ಗೆ ಸ್ಪಷ್ಟತೆಗೆ ಬರಲು ತನಿಖಾಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸಕಾಲಕ್ಕೆ ಬಾಗಿಲು ತೆರೆಯಲಿಲ್ಲವೆಂದು ಪ್ರಯಾಣಿಕರು ಹೇಳಿಕೆ ನೀಡಿದ್ದಾರೆ. ತುರ್ತು ನಿರ್ಗಮನದ ಬಾಗಿಲು ತೆರೆಯದಂತಹ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂಬುದು ಆರ್‌ಟಿಒ ಅಭಿಪ್ರಾಯ.

ಪಾರಾಗಲು ಇತ್ತು ಕಾಲಾವಕಾಶ

‘ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಯಾಣಿಕರೆಲ್ಲರೂ ಎಚ್ಚರಗೊಂಡಿದ್ದಾರೆ. ಕ್ಯಾಬಿನ್‌ ಬಾಗಿಲು ತೆರೆಯುವಂತೆ ಚಾಲಕನಿಗೆ ಕೂಗಿಕೊಂಡಿದ್ದಾರೆ. ಚಾಲಕನಿಗೆ ಪ್ರಯಾಣಿಕರ ಧ್ವನಿ ಕೇಳಿಸಿಲ್ಲ. ಹೊಗೆ ದಟ್ಟವಾಗಿ ಆವರಿಸಿಕೊಂಡ ಬಳಿಕ ಚಾಲಕ ಬಸ್‌ ನಿಲುಗಡೆ ಮಾಡಿ ಕ್ಯಾಬಿನ್‌ ಬಾಗಿಲು ತೆರೆದಿದ್ದಾರೆ. ಮುಂಬಾಗಿಲು ಮೂಲಕ ಹೊರಗೆ ಬರಲು ಪ್ರಯಾಣಿಕರಿಗೆ ಏಕೆ ಸಾಧ್ಯವಾಗಿಲ್ಲ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

ಹೊರಗೆ ಹೋಗುವ ತವಕದಲ್ಲಿ ಅನೇಕರು ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ತೆರೆದ ಕಿಟಕಿಯ ಮೂಲಕವೂ ಕೆಲವರು ಹೊರಗೆ ಜಿಗಿದಿದ್ದಾರೆ. ಬೆಂಕಿ ಏಕಾಏಕಿ ಇಡೀ ಬಸ್‌ಗೆ ವ್ಯಾಪಿಸದೇ ಇರುವುದರಿಂದ ಪ್ರಯಾಣಿಕರು ಕೆಳಗೆ ಇಳಿಯಲು ಸಾಕಷ್ಟು ಕಾಲವಾಕಾಶವಿತ್ತು ಎಂಬುದು ಪೊಲೀಸರ ಅಭಿಪ್ರಾಯ. ದಟ್ಟ ಹೊಗೆ ಆವರಿಸಿಕೊಂಡು ಉಸಿರಾಟದ ಸಮಸ್ಯೆಯಿಂದ ಪ್ರಜ್ಞೆತಪ್ಪಿದರೆ ಎಂಬ ಶಂಕೆಯೂ ಅವರನ್ನು ಕಾಡುತ್ತಿದೆ.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರ್‌ಟಿಒ ಅನುಮಾನಗಳೇನು

* ಪ್ರಯಾಣಿಕ ಅಥವಾ ಚಾಲಕ ಸಿಗರೇಟು ಸೇದಿ ಬಿಸಾಡಿದ ಸಾಧ್ಯತೆ ಇದೆ.

* ಎಂಜಿನ್‌ ಮೇಲಿಟ್ಟ ಸ್ಯಾನಿಟೈಸರ್‌ ಉಷ್ಣತೆ ಹೆಚ್ಚಾಗಿ ಬೆಂಕಿ ಸ್ವರೂಪ ಪಡೆದಿರಬಹುದು.

* ಬಸ್‌ ಒಳಗೆ ಚಾರ್ಜ್‌ಗೆ ಹಾಕಿದ್ದ ಮೊಬೈಲ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು.

* ಬಸ್ಸ್‌ ಒಳಗೆ ಲಗೇಜಿನಲ್ಲಿದ್ದ ವಸ್ತುವಿನಿಂದ ಅವಘಡ ಸಂಭವಿಸಿತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT