ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ಕುರಿಗಳಿಗೆ ಆಹಾರವಾದ ಎಲೆಕೋಸು

ಸಮೃದ್ಧ ತರಕಾರಿ ಬೆಳೆ ಇದ್ದರೂ ಕಂಗಾಲಾದ ರೈತರು
Last Updated 7 ಮಾರ್ಚ್ 2023, 9:25 IST
ಅಕ್ಷರ ಗಾತ್ರ

ಧರ್ಮಪುರ: ಧರ್ಮಪುರ ಹಾಗೂ ಹೋಬಳಿ ವ್ಯಾಪ್ತಿಯ ಶ್ರವಣಗೆರೆ, ಹರಿಯಬ್ಬೆ, ಮುಂಗುಸುವಳ್ಳಿ, ಬೆಟ್ಟಗೊಂಡನಹಳ್ಳಿ, ವೇಣುಕಲ್ಲುಗುಡ್ಡ, ಸಕ್ಕರ, ಪಿ.ಡಿ. ಕೋಟೆ ಗ್ರಾಮಗಳಲ್ಲಿ 200ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆದಿರುವ ಎಲೆಕೋಸು (ಕ್ಯಾಬೆಜ್) ದರ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ.

ದರ ಕುಸಿತದಿಂದಾಗಿ ಕೆಲವು ರೈತರು ಬೆಳೆ ಕಟಾವು ಮಾಡದೇ ಜಮೀನಿನಲ್ಲಿಯೇ ಬಿಟ್ಟಿದ್ದಾರೆ. ಇನ್ನೂ ಕೆಲವರು ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.

ಶ್ರವಣಗೆರೆ ರೈತ ಎಂ. ವೀರಪ್ಪ ಅವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಎಲೆಕೋಸು ನಾಟಿ ಮಾಡಿದ್ದು, ಸಮೃದ್ಧವಾಗಿ ಬೆಳೆ
ಬಂದಿದೆ. ಆದರೆ, ಕಟಾವು ಮಾಡಿ ಬೆಂಗಳೂರು ಇಲ್ಲವೇ ಮೈಸೂರು ಮಾರುಕಟ್ಟೆಗೆ ಸಾಗಿಸಬೇಕು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹ 4ರಷ್ಟು ದರವಿದೆ. ಇದರಿಂದ ಕೂಲಿ ಮತ್ತು ಸಾರಿಗೆ ವೆಚ್ಚವೂ ಸಿಗುವುದಿಲ್ಲ. ಅಂತೆಯೇ ಜಮೀನಿನಲ್ಲಿ ಬಿಟ್ಟಿದ್ದಾರೆ. ಬಿಸಿಲು ಹೆಚ್ಚಿರುವುದರಿಂದ ಈಗಾಗಲೇ ಕೋಸು ಒಣಗಿ ಹಾಳಾಗುತ್ತಿದೆ.

ಧರ್ಮಪುರ ಸಮೀಪದ ನೈಜಂತಿಯಲ್ಲಿ ಎಲೆ ಕೋಸು ಧಾರಣೆ ಕುಸಿತದಿಂದ ಕಂಗಾಲಾದ ರಮೇಶ್ ಗೌಡ ಅವರು ಎಲೆಕೋಸು ಕಟಾವು ಮಾಡದೇ ಕುರಿಗೆ ಮೇಯಲು ಬಿಟ್ಟಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ನೆರವು ನೀಡಲಿ: ‘ಈ ಭಾಗದಲ್ಲಿ ಮೊದಲು ಎಲೆಕೋಸು ಬೆಳೆಯುತ್ತಿರಲಿಲ್ಲ. ಪ್ರಯೋಗಕ್ಕೆ ಮುಂದಾಗಿ ಬೆಳೆದ ಬೆಳೆ ಸಮೃದ್ಧವಾಗಿದೆ. ಗೊಬ್ಬರ ಮತ್ತು ಔಷಧಕ್ಕೆ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಆದರೆ, ಈಗ ಸೂಕ್ತ ಬೆಲೆ ಇಲ್ಲದಿರು ವುದರಿಂದ ನಾವು ಮಾಡಿರುವ ಖರ್ಚು ಸಹ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹ 15ರಿಂದ ₹ 20 ಇದೆ. ಆದರೆ, ರೈತರಿಗೆ ಒಂದು ಕೆ.ಜಿ.ಗೆ ಕೇವಲ ₹ 4 ಸಿಗುತ್ತಿದೆ. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ರೈತರ ನೆರವಿಗೆ ಧಾವಿಸಬೇಕು. ಪರಿಹಾರ ಕೊಡಿಸಬೇಕು’ ಎಂದು ‌ಎಂದು ಶ್ರವಣಗೆರೆ ರೈತ ರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT