ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ| ಸರ್ಕಾರಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಸರ್ಕಾರಿ ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ
Last Updated 20 ಮಾರ್ಚ್ 2023, 6:28 IST
ಅಕ್ಷರ ಗಾತ್ರ

ಹೊಳಲ್ಕೆರೆ (ಚಿತ್ರದುರ್ಗ): ‘ನವ ಕರ್ನಾಟಕ ಕಟ್ಟಲು ಹಾಗೂ ನವ ಭಾರತದ ನಿರ್ಮಾಣಕ್ಕೆ ಮತದಾರರ ಆಶೀರ್ವಾದ ಬೇಕಿದೆ. ಹೊಳಲ್ಕೆರೆಯನ್ನು ಹೊಳೆಯುವಂತೆ ರೂಪಿಸಿದ ಶಾಸಕ ಎಂ. ಚಂದ್ರಪ್ಪ ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಇಲ್ಲಿನ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಫಲಾನುಭವಿಗಳ ಸಮಾವೇಶ ಹಾಗೂ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಅನೇಕರು ಇದ್ದಾರೆ. ಆದರೆ, ಅಧಿಕಾರಕ್ಕೆ ಬಂದಾಗ ಅವರು ಏನೂ ಮಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ನಿಜಲಿಂಗಪ್ಪ ಅವರ ಕಾಲದಿಂದ ಜಿಜ್ಞಾಸೆಯಲ್ಲಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಅನುಷ್ಠಾನಕ್ಕೆ ತಂದೆವು. ಈಗ ₹ 5,500 ಕೋಟಿ ಅನುದಾನ ಮೀಸಲು ಇಡಲಾಗಿದೆ. ಈ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಿ ಉದ್ಘಾಟನೆ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘ರಾಜ್ಯದಲ್ಲಿ ದೊಡ್ಡ ಬದಲಾವಣೆ ತಂದವರು ಬಿ.ಎಸ್. ಯಡಿಯೂರಪ್ಪ. ಅವರು ಮೊದಲು ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರ ಪ್ರಕಟಿಸಿದರು. ಕೆರೆ ತುಂಬಿಸುವ ಯೋಜನೆಯ ಫಲವಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದೆ’ ಎಂದರು.

‘ಜನಪ್ರಿಯ ಶಾಸಕರು ಅನೇಕರು ಇದ್ದಾರೆ. ಆದರೆ, ಜನೋಪಯೋಗಿ ಶಾಸಕರ ಸಂಖ್ಯೆ ಕಡಿಮೆ ಇದೆ. ಶಾಸಕ ಚಂದ್ರಪ್ಪ ಅವರು ಈ ಸಾಲಿಗೆ ಸೇರುತ್ತಾರೆ. ಹೊಳಲ್ಕೆರೆಗೆ ₹ 4,117 ಕೋಟಿ ಅನುದಾನ ತಂದು ಹಲವು ಬದಲಾವಣೆ ಮಾಡಿದ್ದಾರೆ. ಕೆರೆ ತುಂಬಿಸುವ
ಯೋಜನೆ ಸೇರಿ ಅನೇಕ ಯೋಜನೆ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್, ಎಸ್ಪಿ ಕೆ.ಪರಶುರಾಮ್, ಪುರಸಭೆ ಅಧ್ಯಕ್ಷ ಅಶೋಕ ಇದ್ದರು.

ಬಿಜೆಪಿ ಸಮಾವೇಶವಾದ ಸರ್ಕಾರಿ ಸಮಾರಂಭ

ಜಿಲ್ಲಾಡಳಿತದ ವತಿಯಿಂದ ಭಾನವಾರ ಇಲ್ಲಿ ಆಯೋಜಿಸಿದ್ದ ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಫಲಾನುಭವಿಗಳ ಸಮಾವೇಶ ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಬಿಜೆಪಿ ಸಮಾವೇಶವಾಗಿ ಪರಿವರ್ತನೆಗೊಂಡಿತು.

ಮುಖ್ಯಮಂತ್ರಿ ಅವರೊಂದಿಗೆ ಬಿಜೆಪಿ ಮುಖಂಡರು ವೇದಿಕೆ ಹಂಚಿಕೊಂಡರು. ಬಿ.ಎಸ್.ಯಡಿಯೂರಪ್ಪ ಪಕ್ಷದ ಶಾಲು ಹಾಕಿಕೊಂಡು ಅಸೀನರಾಗಿದ್ದರು. ಬಿಜೆಪಿ ಮುಖಂಡರನ್ನು ಸ್ವಾಗತಿಸಿದ ಸರ್ಕಾರಿ‌ ಅಧಿಕಾರಿಗಳು ಆಸೀನರಾಗಲು ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್ವರ, ಬಿಜೆಪಿ ಮುಖಂಡರಾದ ಎಸ್.ಲಿಂಗಮೂರ್ತಿ, ದಾವಣಗೆರೆ ಸಂಸದರ ಪುತ್ರ ಜಿ.ಎಸ್.ಅನಿತ್ ಕುಮಾರ್, ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘು ಚಂದನ್ ಸೇರಿ ಅನೇಕರು ವೇದಿಕೆಯಲ್ಲಿದ್ದರು. ಇದು ಸರ್ಕಾರಿ ಕಾರ್ಯಕ್ರಮವೊ ಅಥವಾ ಬಿಜೆಪಿ ಸಮಾವೇಶವೋ ಎಂಬ ಅನುಮಾನ ಮೂಡುವಂತೆ ಇತ್ತು. ಫಲಾನುಭವಿಗಳ ಸಮಾವೇಶದಲ್ಲಿ ಸಿನಿಮಾ ಹಾಡುಗಳ ಅಬ್ಬರ ತುಸು ಜೋರಾಗಿತ್ತು.

ಅಡಿಕೆಗೂ ಹನಿ ನೀರಾವರಿ ಸಹಾಯಧನ: ಪರಿಶೀಲನೆ

ಹನಿ ನೀರಾವರಿ ಪದ್ಧತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರದ ನೀಡುವ ಸಹಾಯಧನ (ಸಬ್ಸಿಡಿ) ಸೌಲಭ್ಯವನ್ನು ಬಯಲುಸೀಮೆ ಅಡಿಕೆ ಬೆಳೆಗಾರರಿಗೂ ವಿಸ್ತರಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವಂತೆ ಉತ್ತೇಜನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ 90ರಷ್ಟು ಹಾಗೂ ಉಳಿದ ವರ್ಗಕ್ಕೆ ಶೇ 75ರಷ್ಟು ಸಬ್ಸಿಡಿ ಸಿಗುತ್ತಿದೆ. ಇದನ್ನು ಬಯಲುಸೀಮೆ ಅಡಿಕೆ ಬೆಳೆಗಾರರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಆಲೋಚಿಸಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಭಿವೃದ್ಧಿ ಎಂಬುದು ಹಿಂದೆ ಕೆಲವರ ಮನೆಗೆ ಮಾತ್ರ ಸೀಮಿತವಾಗಿತ್ತು. ಬಿಜೆಪಿ ಬಂದ ಬಳಿಕ ಇದು ಬದಲಾಗಿದೆ. ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ರಸ್ತೆ ಸಿಂಗಪುರ ಮಾದರಿಯಲ್ಲಿ ಅಭಿವೃದ್ಧಿ ಆಗಿವೆ. ಚಂದ್ರಪ್ಪ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಿದ್ದಾರೆ.
–ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ

ಹೊಳಲ್ಕೆರೆ ತಾಲ್ಲೂಕಿನಲ್ಲಿ ಅಭಿವೃದ್ಧಿ ಹೊಳೆ ಹರಿದಿದೆ. ಕೆರೆ ತುಂಬಿಸುವ ಹಾಗೂ ರಸ್ತೆ ನಿರ್ಮಾಣದಲ್ಲಿ ಅಭೂತಪೂರ್ವ ಕೆಲಸ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬೇಕು.

–ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT