ಸೋಮವಾರ, ಜನವರಿ 17, 2022
21 °C
ಮಳೆ ಕೊರತೆಯಿಂದ ಮೂರೂವರೆ ಎಕರೆ ಅಡಿಕೆ ತೋಟ ನಾಶವಾದಾಗ ಕೈಹಿಡಿದ ಹೂವಿನ ಬೆಳೆ

ಕಡಿಮೆ ಖರ್ಚು, ಹೆಚ್ಚು ಲಾಭದ ‘ಪತ್ರೆ’ ಬೇಸಾಯ

ವಿ.ಎಂ. ಶಿವಪ್ರಸಾದ್ ಭರಮಸಾಗರ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಹೋಬಳಿಯ ನಲ್ಲಿಕಟ್ಟೆ ಗ್ರಾಮದ ರೈತರೊಬ್ಬರು 15 ಗುಂಟೆ ಜಾಗದಲ್ಲಿ ಪತ್ರೆ ಎಲೆ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ನಲ್ಲಿಕಟ್ಟೆಯ ಮಹೇಶ್ ತಮ್ಮ ಜಮೀನಿನಲ್ಲಿ ಎರಡು ಕೊಳವೆಬಾವಿ ಕೊರೆಸಿದ್ದರು. ಅದರಲ್ಲಿ ಉತ್ತಮ ನೀರು ಕೂಡ ಲಭ್ಯವಾಗಿತ್ತು. ಬಹಳಷ್ಟು ರೈತರಂತೆ ಇವರು ಕೂಡ ಬಹುವಾರ್ಷಿಕ ಬೆಳೆ ಹಾಗೂ ಹೆಚ್ಚು ಆದಾಯ ನೀಡುತ್ತದೆ ಎನ್ನುವ ಕಾರಣಕ್ಕೆ 4 ಎಕರೆ ಅಡಿಕೆ ತೋಟ ಮಾಡಿದ್ದರು. ಫಸಲು ಬರುವ ಹಂತದಲ್ಲಿ ಸತತ ನಾಲ್ಕೈದು ವರ್ಷ ಮಳೆ ಕೊರತೆಯಿಂದಾಗಿ ಅಂತರ್ಜಲ ಕುಸಿತ ಕಂಡಿತು. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಮೂರೂವರೆ ಎಕರೆ ಅಡಿಕೆ ತೋಟ ನಾಶವಾಗಿ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎನ್ನುವ ಪರಿಸ್ಥಿತಿ ಉಂಟಾಯಿತು. ಮೊದಲಿನಂತೆ ರಾಗಿ, ಜೋಳ, ಮೆಕ್ಕೆಜೋಳದಂತಹ ಮಳೆಯಾಶ್ರಿತ ಬೆಳೆ ಬೆಳೆಯುವುದು ಅನಿವಾರ್ಯವಾಯಿತು.

ಈ ವರ್ಷ ಉತ್ತಮ ಮಳೆಯಾದ ಕಾರಣ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿದೆ. ಬಯಲು ಸೀಮೆಯಲ್ಲಿ ದೀರ್ಘಾವಧಿ ಬೆಳೆ ಸಹವಾಸ ಬೇಡ ಎಂದು ನಿರ್ಧರಿಸಿದ ಮಹೇಶ್ ವಿವಿಧ ಮೂಲಗಳಿಂದ ಮಾಹಿತಿ ಪಡೆದು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೂವಿನ ಕೃಷಿಗೆ ಕೈ ಹಾಕಿ ಅರ್ಧ ಎಕರೆ ಪ್ರದೇಶದಲ್ಲಿ ಸೇವಂತಿಗೆ ಬೆಳೆದರು. ಸುಮಾರು ₹ 4.5 ಲಕ್ಷ ಆದಾಯ ಗಳಿಸಿದ್ದರು. ಹೂವಿನ ಜೊತೆ ಕಡಿಮೆ ಜಾಗದಲ್ಲಿ ಮತ್ತೆ ಬೇರೆ ಏನು ಬೆಳೆಯುವುದು ಎಂದು ಯೋಚಿಸಿದ ಅವರಿಗೆ ತೋಚಿದ್ದು ಪತ್ರೆ ಎಲೆಯ ಬೆಳೆ. ನಂತರ ನಾಯಕನಹಟ್ಟಿ ಸಮೀಪದ ದೇವರಹಟ್ಟಿಯಿಂದ ಉಚಿತವಾಗಿ ಪತ್ರೆ ಸೊಪ್ಪಿನ ಕಡ್ಡಿಗಳನ್ನು ತಂದು 15 ಗುಂಟೆ ಜಾಗದಲ್ಲಿ ನಾಟಿ ಮಾಡಿದ್ದಾರೆ. ಈಗ ಫಸಲು ಆರಂಭವಾಗಿದ್ದು, ನಿತ್ಯ ಅವರಿಗೆ ಪತ್ರೆ ಎಲೆಯಿಂದ ₹ 2,000 ಆದಾಯ ಸಿಗುತ್ತಿದೆ.

‘ಏನೋ ಬಿತ್ತಿದೆವು, ಏನೋ ಬೆಳೆದೆವು ಎನ್ನವ ಕಾಲ ಇದಲ್ಲ. ರೈತರಿಗೆ ವೈಜ್ಞಾನಿಕ ಚಿಂತನೆಯ ಜೊತೆಗೆ ವಾಣಿಜ್ಯ ಜ್ಞಾನ ಕೂಡ ಅವಶ್ಯಕ. ಏಕರೂಪದ ಬೆಳೆಯಿಂದ ನಷ್ಟಕ್ಕೊಳಗಾಗುವ ಸಾಧ್ಯತೆ ಇರುವುದರಿಂದ ರೈತರು ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು. ಇದರಿಂದ ಒಂದರಲ್ಲಿ ಆದ ನಷ್ಟವನ್ನು ಇನ್ನೊಂದರಲ್ಲಿ ಪಡೆಯಬಹುದು. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೃಷಿ ಮಾಡುವ ಅನಿವಾರ್ಯತೆ ಇದೆ’ ಎಂದು ತಿಳಿಸುತ್ತಾರೆ ಮಹೇಶ್.

‘ಪತ್ರೆ ಎಲೆ ಬೆಳೆಯುವ ಮೊದಲು ಹೊಲ ಹದ ಮಾಡಿಕೊಂಡು ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಬೇಕು. 3 ಅಡಿಗಳಿಗೊಂದು ಸಾಲು ಮಾಡಿ ಅಡಿಗೆ ಒಂದರಂತೆ ಪತ್ರೆ ಎಲೆ ಕಡ್ಡಿ ನಾಟಿ ಮಾಡಬೇಕು. ನಂತರ ಸಕಾಲದಲ್ಲಿ ತೇವಾಂಶ ಆರದಂತೆ ನೀರು ಪೂರೈಕೆ ಮಾಡಬೇಕು. ನಾಟಿ ಮಾಡಿದ ಮೂರು ತಿಂಗಳ ನಂತರ ಫಸಲು ಬರಲು ಆರಂಭವಾಗುತ್ತದೆ. ಆರು ತಿಂಗಳಾಗುವಷ್ಟರಲ್ಲಿ ಉತ್ತಮ ಇಳುವರಿ ಬರುತ್ತದೆ. 10ರಿಂದ 15 ಗುಂಟೆ ಜಾಗದಲ್ಲಿ ಪತ್ರೆ ಎಲೆ ಬೆಳೆದರೆ ನಿತ್ಯ ಅಂದಾಜು ₹ 2,000 ವರಮಾನ ಸಿಗುತ್ತದೆ. ಒಂದು ರೀತಿ ಸರ್ಕಾರಿ ನೌಕರನ ಸಂಬಳ ಇದ್ದಂತೆ. ಸಾಗಣೆ ವೆಚ್ಚವನ್ನು ಖರೀದಿದಾರರೇ ಭರಿಸುತ್ತಾರೆ. ಹೂವಿನ ಹಾರ ಮಾಡಲು ಬಳಸುವುದರಿಂದ ಇದಕ್ಕೆ ಬೇಡಿಕೆ ಇರುತ್ತದೆ. ಪ್ರತಿಭಟನೆ, ಲಾಕ್‍ಡೌನ್ ಸಂದರ್ಭ ಬಿಟ್ಟರೆ ನಿತ್ಯ ಇದನ್ನು ಖರೀದಿಸುತ್ತಾರೆ. 3 ವರ್ಷದವರೆಗೂ ಪತ್ರೆ ಎಲೆ ಬಿಡಿಸಿ ಮಾರಬಹುದು. ನಂತರ ಬೇರೆ ಜಾಗದಲ್ಲಿ ಇದರ ಕಡ್ಡಿಗಳನ್ನು ನಾಟಿ ಮಾಡಬೇಕು. ಕಡಿಮೆ ಖರ್ಚು, ಹೆಚ್ಚು ಆದಾಯ’ ಎಂದು ಅವರು ತಿಳಿಸಿದರು.

ಪತ್ರೆ ಎಲೆ ಬೆಳೆಯಲು ಇವರು ಇಂಗ್ಲೆಂಡ್ ಲ್ಯಾಟೆರಲ್ ಮಾದರಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. 15 ಗುಂಟೆಯಲ್ಲಿ ಈ ಪದ್ಧತಿಗೆ
₹ 2,000 ಸಾವಿರ ಖರ್ಚಾಗುತ್ತದೆ. ಇವರು ಖರೀದಿದಾರರೊಂದಿಗೆ ಕೆ.ಜಿ.ಗೆ ₹ 40ರಂತೆ ಒಪ್ಪಂದ ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿನ ದರದ ಏರಿಳಿತಕ್ಕೆ ಖರೀದಿದಾರರೇ ಹೊಣೆಯಾಗಿರುತ್ತಾರೆ. ಅಡಿಕೆ ತೋಟ ಮಾಡಿ ಅನುಭವಿಸಿದ ನಷ್ಟವನ್ನು ಹೂವಿನ ಮತ್ತು ಪತ್ರೆ ಎಲೆಯ ಬೆಳೆಯಲ್ಲಿ ಸರಿದೂಗಿಸಿಕೊಂಡು ಲಾಭ ಗಳಿಸಿದ್ದಾಗಿ
ತಿಳಿಸಿದ್ದಾರೆ.

ಮಳೆ ಹೆಚ್ಚಾದಾಗ ಈ ಬೆಳೆಗೂ ಬೆಂಕಿ ರೋಗ ಅಥವಾ ಚುಕ್ಕಿ ರೋಗ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ರೈತರು ಗಮನ ಹರಿಸಬೇಕಿದೆ.

....

ರೈತರು ಕೃಷಿಯನ್ನು ಉದ್ಯಮ ಎಂದು ಭಾವಿಸಬೇಕು. ಕಡಿಮೆ ಜಮೀನು ಹೊಂದಿದ್ದು, ನೀರಿನ ಸೌಲಭ್ಯ ಇರುವ ರೈತರು ಮಾರುಕಟ್ಟೆಯ ಬೇಡಿಕೆ ಅರಿತು ವಿವಿಧ ಬೆಳೆಗಳ ಬಗ್ಗೆ ಗಮನ ಹರಿಸಬೇಕು.

– ಮಹೇಶ್‌, ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು