ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಭೂಪಟದಲ್ಲಿ ‘ವಿಜ್ಞಾನ ನಗರಿ’ಯ ಮಿಂಚು

Published 30 ಆಗಸ್ಟ್ 2023, 11:43 IST
Last Updated 30 ಆಗಸ್ಟ್ 2023, 11:43 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆ ಎಂದರೆ ಕೋಟೆ-ಕೊತ್ತಲುಗಳು, ಪಾಳೆಯಗಾರರ ಆಳ್ವಿಕೆ, ಐತಿಹಾಸಿಕ ಜಾತ್ರೆಗಳು, ಬುಡಕಟ್ಟು ಸಂಸ್ಕೃತಿಯ ನಾಡು, ಎಣ್ಣೆ ಕಾರ್ಖಾನೆಗಳ ಬೀಡು, ಹೀಗೆ ಹಲವು ಅನ್ವರ್ಥಗಳಿಂದ ಗುರುತಿಸಲಾಗುತ್ತಿತ್ತು. ಒಂದು ದಶಕದಿಂದ ದೇಶ, ವಿದೇಶದಲ್ಲಿ ಕೋಟೆನಾಡಿನ ಕುದಾಪುರ ‘ವಿಜ್ಞಾನ ನಗರಿ’ಯಾಗಿ ಅಸ್ಮಿತೆ ಸೃಷ್ಟಿಸಿದೆ.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಸಮೀಪದಲ್ಲಿ ನಿರ್ಮಾಣವಾಗಿರುವ ವಿಜ್ಞಾನ ಸಂಶೋಧನಾ ಸಂಸ್ಥೆಗಳು ಜಿಲ್ಲಾ ಕೇಂದ್ರದಿಂದ 35ಕಿಮೀ ದೂರದಲ್ಲಿವೆ. ಸುಮಾರು 10,500 ಎಕರೆಯ ವಿಶಾಲ ಭೂಪ್ರದೇಶದಲ್ಲಿ ದೇಶದ ಪ್ರತಿಷ್ಠಿತ ವಿಜ್ಞಾನ ಸಂಶೋಧನಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ (ಐಐಎಸ್‌ಸಿ), ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಬಾಬಾ ಅಣು ಸಂಶೋಧನಾ ಕೇಂದ್ರ (ಬಿಎಆರ್‍ಸಿ) ಇವೆ. ಈ ಸಂಸ್ಥೆಗಳು ಭವಿಷ್ಯ ಭಾರತದ ರಕ್ಷಣೆ, ವಿಜ್ಞಾನ, ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಸೇರಿ ವಿವಿಧ ಕ್ಷೇತ್ರಗಳ ಬಲವರ್ಧನೆ ಹಾಗೂ ಜಾಗತಿಕ ಮಟ್ಟದಲ್ಲಿ ವೈಜ್ಞಾನಿಕ ಸ್ವಾವಲಂಬನೆ ಹೊಂದಲು ಭದ್ರ ಬನಾದಿ ಹಾಕುತ್ತಿದೆ.

ಹೊಸ ಸಂಶೋಧನೆಗಳಿಗೆ, ಗುಣಾತ್ಮಕ ತರಬೇತಿ ಹಾಗೂ ತಂತ್ರಜ್ಞಾನದ ಆವಿಷ್ಕಾರಕ್ಕೆ ಹೆಸರಾದ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಸಂಸ್ಥೆಯ ವಿಸ್ತರಣಾ ಕೇಂದ್ರ ಕುದಾಪುರದ 1,800 ಎಕರೆ ಪ್ರದೇಶದಲ್ಲಿದೆ. ಪಂಡಿತ್ ಮದನ್‍ಮೋಹನ್ ಮಾಳವೀಯ ಫೌಂಡೇಷನ್ ಅಡಿಯಲ್ಲಿ ‘ಪ್ರತಿಭಾ ಅಭಿವೃದ್ಧಿ ತರಬೇತಿ ಕೇಂದ್ರ’ವನ್ನು ನಡೆಸಲಾಗುತ್ತಿದೆ. ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಾಧ್ಯಾಪಕರು, ಶಿಕ್ಷಕರಿಗೆ ಮೂಲ ವಿಜ್ಞಾನದ ಪರಿಚಯ, ಗಣಿತ, ರಸಾಯನ ವಿಜ್ಞಾನ, ಭೌತ ವಿಜ್ಞಾನ ಸೇರಿ ಶುದ್ಧ ವಿಜ್ಞಾನದ ಮಾದರಿ ಮತ್ತು ಪ್ರಯೋಗಗಳ ತರಬೇತಿ ನೀಡಲಾಗುತ್ತಿದೆ. ಇತರೆ ರಾಜ್ಯ ಕೇಂದ್ರೀಯ ವಿಶ್ವವಿದ್ಯಾಲಯ, ನವೋದಯ ಶಾಲೆಯ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಜ್ಞಾನದಾಹವಿರುವ ಪ್ರತಿಯೊಬ್ಬರಿಗೂ ಕೌಶಲ ತರಬೇತಿಯನ್ನು ನೀಡಲಾಗುತ್ತದೆ. ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಮಾದರಿಗಳ ತಯಾರಿ, ಗುಣಾತ್ಮಕ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಸ್ವತಂತ್ರವಾಗಿ ಉದ್ಯೋಗಗಳನ್ನು ಕೈಗೊಳ್ಳುವ ಭರವಸೆ ಮೂಡುತ್ತದೆ. ಇಲ್ಲಿ ತರಬೇತಿ ಪಡೆದವರು ದೇಶದ ಯಾವುದೇ ಭಾಗದಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಹುದ್ದೆಯನ್ನು ಪಡೆಯಲು ಅರ್ಹತೆ ಸಾಧಿಸುತ್ತಾರೆ.

ರಕ್ಷಣಾ ಕ್ಷೇತ್ರದ ಮೈಲುಗಲ್ಲು:

ದೇಶದ ರಕ್ಷಣಾ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಸಾಧಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರಬಲ ರಕ್ಷಣಾ ವ್ಯವಸ್ಥೆ ಹೊಂದಲು ಹಾಗೂ ತಮ್ಮದೆ ತಂತ್ರಜ್ಞಾನದ ಮೂಲಕ ರಕ್ಷಣಾ ವ್ಯವಸ್ಥೆಯ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಹಲವು ವೈಮಾನಿಕ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ.

ಡಿಆರ್‌ಡಿಒ ಸಂಸ್ಥೆಯ ವಿಸ್ತಾರಿತ ಪರಿಕ್ಷಾರ್ಥ ವಾಯುನೆಲೆ ಸ್ಥಾಪನೆ ಮಾಡಲಾಗಿದ್ದು, ದೇಶದ ಮಿಲಿಟರಿಯಲ್ಲಿ ಯುದ್ಧ ವಿಮಾನಗಳು ಮಹತ್ತರವಾದ ಪಾತ್ರ ನಿರ್ವಹಿಸುತ್ತವೆ. ಹೊಸ ತಂತ್ರಜ್ಞಾನದ ಮೂಲಕ ಮಾನವ ರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸಲು ಸುಮಾರು 4,290 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಾಯುನೆಲೆಯನ್ನು ನಿರ್ಮಾಣ ಮಾಡಲಾಗಿದೆ. ನೂರಾರು ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಮಹತ್ವದ ತಪಸ್-201 ಮಾನವ ರಹಿತ ಯುದ್ಧ ವಿಮಾನ 200ನೇ ಹಾರಾಟ ನಡೆಸಿ ಮಹತ್ತರ ಮೈಲಿಗಲ್ಲು ಸಾಧಿಸಿ ಹೊಸ ಭರವಸೆ ಮೂಡಿಸಿದೆ. ಭಾರತದ ಭವಿಷ್ಯದ ಮಾನವ ರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟಗಳು ಇಲ್ಲಿ ನಡೆಯಲಿವೆ.

ಇಸ್ರೊ ಹೆಗ್ಗಳಿಕೆ:

ಚಂದ್ರಯಾನ-3 ಮೂಲಕ ಚಂದ್ರನ ದಕ್ಷಿಣ ದೃವದತ್ತ ನೌಕೆಯನ್ನು ಕಳುಹಿಸಿ ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ ಇಸ್ರೊ ಸಂಸ್ಥೆಯು ಚಳ್ಳಕೆರೆ ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ಸಮೀಪದಲ್ಲಿ ಚಂದ್ರಯಾನ-2 ಪ್ರಯೋಗಗಳ ಸಿದ್ಧತೆಯನ್ನು ನಡೆಸಿತ್ತು. ತಾತ್ಕಾಲಿಕ ಚಂದ್ರನ ಮೇಲ್ಮೈ ಗುಳಿಗಳನ್ನು ನಿರ್ಮಾಣ ಮಾಡಿತ್ತು. ಹೈದರಾಬಾದ್‍ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿಯಂತೆ ಸರಿಸಮಾನವಾದ ರಿಮೋಟ್ ಸೆನ್ಸಿಂಗ್ ಕೇಂದ್ರವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಅಮೆರಿಕ ಹಾಗೂ ಯೂರೋಪ್‍ ದೇಶಗಳಲ್ಲಿ ಇರುವ ಅತ್ಯಾಧುನಿಕ ಸ್ಯಾಟಲೈಟ್‍ಗಳ ಮೂಲಕ ವೇಗವಾದ ಮತ್ತು ಗುಣಮಟ್ಟದ ಡೇಟಾ ಸಂಗ್ರಹ ಮಾಡುವಂತೆ ನಮ್ಮ ದೇಶದಲ್ಲೂ ಅದಕ್ಕೆ ಸರಿಸಮಾನವಾದ ಗುಣಮಟ್ಟದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದುವ ಉದ್ದೇಶ ಇದೆ. ಅದಕ್ಕಾಗಿ 473 ಎಕರೆ ಪ್ರದೇಶದಲ್ಲಿ ವಿವಿಧ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದ ಎರಡನೇ ಪ್ರಮುಖ ಅಣು ಸಂಶೊಧನಾ ಸಂಸ್ಥೆ ದೊಡ್ಡಉಳ್ಳಾರ್ತಿ ಗ್ರಾಮದ ಸಮೀಪದಲ್ಲಿ ನಿರ್ಮಾಣವಾಗುತ್ತಿದೆ. ಇದು ರಾಷ್ಟ್ರದ ಶಕ್ತಿ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ. ಜತೆಗೆ ಪ್ರಮುಖ ಖನಿಜ ಸಂಪನ್ಮೂಲಗಳಾದ ಯುರೇನಿಯಂ, ತೋರಿಯಂಗಳ ಸಂಸ್ಕರಣೆಯ ಮೂಲಕ ಅಣು ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮುಂದಾಗಿದೆ.

ಈ ವಿಜ್ಞಾನ ಸಂಸ್ಥೆಗಳು ಯುವ ವಿಜ್ಞಾನಿಗಳನ್ನು ತಯಾರು ಮಾಡುವ ಹೊಣೆಗಾರಿಕೆ ಹೊತ್ತಿವೆ. ಜತೆಗೆ ಪರಿಸರ ಜಾಗೃತಿ, ಪ್ರಾಣಿ ಸಂಕುಲ ರಕ್ಷಣೆ, ನೀರಿನ ಮಹತ್ವವನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಿದೆ. ‘ನಾವು ವಿಜ್ಞಾನ ನಗರಿಯವರು’ ಎಂದು ಈ ಭಾಗದ ಪ್ರತಿಯೊಬ್ಬರೂ ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಹತ್ತಿರದಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT