ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಯುಷ್ಮಾನ್‌’ ಸೇವೆಯಲ್ಲಿ ಜಿಲ್ಲೆ ಪ್ರಥಮ

ಏಳು ಸಾವಿರ ಜನರಿಗೆ ಉಚಿತ ಚಿಕಿತ್ಸೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮೆಚ್ಚುಗೆ
Last Updated 26 ಜನವರಿ 2021, 4:35 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ’ (ಎಬಿಎಆರ್‌ಕೆ) ಯೋಜನೆಯಡಿ ರಾಜ್ಯದಲ್ಲಿಯೇ ಅತಿ ಹೆಚ್ಚು ರೋಗಿಗಳು ಚಿತ್ರದುರ್ಗದಲ್ಲಿ ಸೇವೆ ಪಡೆದಿದ್ದಾರೆ. ಸಕಾಲಕ್ಕೆ ಸ್ಪಂದಿಸಿದ ಜಿಲ್ಲಾ ಆಸ್ಪತ್ರೆ ಹಾಗೂ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಪರಿಶೀಲನೆಯಲ್ಲಿ ಸತತ ಎರಡು ಬಾರಿ ಚಿತ್ರದುರ್ಗ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ವರ್ಷ ಏಳು ಸಾವಿರ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಸೇವೆಯ ಸಂಯೋಜಿತ ಯೋಜನೆಯಾಗಿ ಎಬಿಎಆರ್‌ಕೆ ಅನುಷ್ಠಾನಕ್ಕೆ ಬಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಸೇರಿ ಎಲ್ಲ ಸರ್ಕಾರಿ ಆಸ್ಪತ್ರೆಗಳು ಯೋಜನೆಯ ವ್ಯಾಪ್ತಿಯಲ್ಲಿವೆ. ಜಿಲ್ಲೆಯ ಆರು ಖಾಸಗಿ ಆಸ್ಪತ್ರೆಗಳು ಕೂಡ ಈ ಯೋಜನೆಯಡಿ ಸೇವೆ ನೀಡುತ್ತಿವೆ. 2019ರಿಂದ ಈವರೆಗೆ ಜಿಲ್ಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ.

‘ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಅನೇಕ ಸರ್ಕಾರಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗೆ ಸೀಮಿತವಾಗಿದ್ದವು. ಆದರೆ, ಜಿಲ್ಲೆಯಲ್ಲಿ ಕೋವಿಡ್‌ ನಿರ್ವಹಣೆಯೊಂದಿಗೆ ಇತರ ಚಿಕಿತ್ಸೆಗೂ ಗಮನಹರಿಸ ಲಾಯಿತು. ಇದರಿಂದ ಅತಿ ಹೆಚ್ಚು ಜನರಿಗೆ ಸೇವೆ ಒದಗಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಎಬಿಎಆರ್‌ಕೆ ಜಿಲ್ಲಾ ಸಂಯೋಜಕ ಡಾ.ಚಂದ್ರಶೇಖರ ರಾಜು‌‌.

ಜಿಲ್ಲಾ ಆಸ್ಪತ್ರೆ ಆರು ಸಾವಿರ ಫಲಾನುಭವಿಗಳಿಗೆ ಚಿಕಿತ್ಸೆ ನೀಡಿದೆ. ಚಳ್ಳಕೆರೆ ತಾಲ್ಲೂಕು ಆಸ್ಪತ್ರೆ ಮೂರೂವರೆ ಸಾವಿರ ರೋಗಿಗಳಿಗೆ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ 500 ಜನರಿಗೆ ಸೇವೆ ಒದಗಿಸಿದೆ. ತಾಯಿ ಮತ್ತು ಶಿಶು ಆರೈಕೆ ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಜಿಲ್ಲಾ ಆಸ್ಪತ್ರೆಯ ಸೇವೆ ಗಣನೀಯವಾಗಿ ಸುಧಾರಣೆ ಕಂಡಿದೆ. ಈ ಎರಡು ವಿಭಾಗದಲ್ಲೇ ಅತಿ ಹೆಚ್ಚು ಫಲಾನುಭವಿಗಳು ಸೇವೆ ಪಡೆದಿದ್ದಾರೆ. ನರರೋಗ, ಕ್ಯಾನ್ಸರ್‌ ಸೇರಿದಂತೆ ಇತರ ಸೇವೆಗಳಿಗೆ ಹೊರ ಜಿಲ್ಲೆಯ ಸೂಕ್ತ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿದೆ. ಹೃದ್ರೋಗಕ್ಕೆ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿದೆ.

‘ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಕ್ಕೆ ವಾರ್ಷಿಕ ₹ 5 ಲಕ್ಷದವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್‌) ಕುಟುಂಬಕ್ಕೆ ವಾರ್ಷಿಕ ₹ 1.5 ಲಕ್ಷದವರೆಗೆ ಸೇವೆ ಒದಗಿಸಲಾಗುತ್ತಿದೆ. ಆರೋಗ್ಯ ಮಿತ್ರ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಡಾ.ಚಂದ್ರಶೇಖರ ರಾಜು‌.

ದೂರು ನೀಡಲು ಮನವಿ

ಎಬಿಎಆರ್‌ಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳು ಅರ್ಹ ಫಲಾನುಭವಿಗಳಿಗೆ ಸೇವೆ ನಿರಾಕರಿಸುವಂತಿಲ್ಲ. ಸರಿಯಾಗಿ ಸ್ಪಂದಿಸದ ಆಸ್ಪತ್ರೆಗಳ ವಿರುದ್ಧ ಸರ್ಕಾರ ಶಿಸ್ತುಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ, ಸಕಾಲಕ್ಕೆ ಸೇವೆಗಳು ಸಿಗುತ್ತಿದ್ದು, ದೂರುಗಳು ಕಡಿಮೆಯಾಗಿವೆ.

‘ಸೇವೆ ನಿರಾಕರಿಸಿದ ಯಾವುದೇ ದೂರು ಆರು ತಿಂಗಳಿಂದ ಕೇಳಿಬಂದಿಲ್ಲ. ಚಿಕಿತ್ಸೆ ಬಗ್ಗೆ ದೂರುಗಳಿದ್ದರೆ ಕುಂದು–ಕೊರತೆ ವಿಭಾಗಕ್ಕೆ ಸಲ್ಲಿಸಬೇಕು. ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಂದಣಿ ರದ್ದುಪಡಿಸಲಾಗುತ್ತದೆ’ ಎನ್ನುತ್ತಾರೆ ಚಂದ್ರಶೇಖರ್‌ ರಾಜ್‌.

ಎಬಿಎಆರ್‌ಕೆ ಯೋಜನೆಯಡಿ ಸರಿಸುಮಾರು ಎರಡು ಸಾವಿರ ಸೇವೆಗಳಿವೆ. ಅರ್ಹ ಫಲಾನುಭವಿಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಪಡೆಯಬಹುದು.

ಡಾ.ಚಂದ್ರಶೇಖರ ರಾಜು‌, ಜಿಲ್ಲಾ ಸಂಯೋಜಕ, ಎಬಿಎಆರ್‌ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT