ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಖಾಸಗಿ ಬಸ್‌ ಪ್ರಯಾಣಿಕರಿಗೂ ಸಿಗಲಿ ಸೌಲಭ್ಯ

Published 9 ಜೂನ್ 2023, 6:10 IST
Last Updated 9 ಜೂನ್ 2023, 6:10 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ‘ಶಕ್ತಿ’ ಯೋಜನೆಯ ಫಲಾನುಭವಿ ಆಗಬೇಕು ಎಂಬ ಅಪೇಕ್ಷೆ ನನಗೂ ಇದೆ. ಆದರೆ, ನಮ್ಮ ಹಳ್ಳಿಗೆ ಖಾಸಗಿ ಬಸ್‌ ಮಾತ್ರ ಸೇವೆ ಒದಗಿಸುತ್ತಿದೆ. ಇದೇ ಸೌಲಭ್ಯವನ್ನು ಖಾಸಗಿ ಬಸ್‌ ಪ್ರಯಾಣಿಕರಿಗೂ ಕಲ್ಪಿಸಿದರೆ ಅನುಕೂಲ...’

ಚಿತ್ರದುರ್ಗ ತಾಲ್ಲೂಕಿನ ಕೊಣನೂರು ಗ್ರಾಮದ ಗೃಹಿಣಿ ರಶ್ಮಿ ಅವರ ಆಗ್ರಹಪೂರ್ವಕ ಮಾತಿದು. ಸರ್ಕಾರಿ ಬಸ್‌ ಸೇವೆ ಕಾಣದ ಗ್ರಾಮಗಳ ಬಹುತೇಕ ಮಹಿಳೆಯರು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

ಚಿತ್ರದುರ್ಗ ಜಿಲ್ಲೆಯಲ್ಲಿ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇವೆ ಒದಗಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಬಸ್‌ ಸೇವೆ ಪರಿಣಾಮಕಾರಿಯಾಗಿದೆ. ಜಿಲ್ಲೆಯಲ್ಲಿ 450ಕ್ಕೂ ಅಧಿಕ ಖಾಸಗಿ ಬಸ್‌ಗಳು ಸುಮಾರು 400 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಬಹುತೇಕ ಮಾರ್ಗಗಳಲ್ಲಿ ಸರ್ಕಾರಿ ಬಸ್‌ ಸೇವೆ ಲಭ್ಯವಿಲ್ಲ.

‘ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಇದರಿಂದ ಅನುಕೂಲವಾಗುತ್ತದೆ. ನಮ್ಮ ಊರುಗಳಿಗೆ ಸರ್ಕಾರಿ ಬಸ್‌ ಸೇವೆ ಇಲ್ಲ. ಲ್ಲಿಗೆ ಸರ್ಕಾರಿ ಬಸ್‌ ಬಿಡಿ ಇಲ್ಲವೇ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗೂ ಈ ಯೋಜನೆ ವಿಸ್ತರಿಸಿ’ ಎಂದು ರಶ್ಮಿ ಒತ್ತಾಯಿಸುತ್ತಾರೆ.

‘ಚಳ್ಳಕೆರೆ ಹಾಗೂ ಚಿತ್ರದುರ್ಗ ಮಧ್ಯದಲ್ಲಿರುವ ನಮ್ಮ ಗ್ರಾಮಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್‌ ಸೇವೆ ಇದೆ. ಉಚಿತ ಸೌಲಭ್ಯ ಕಲ್ಪಿಸಿದ್ದರಿಂದ ಸರ್ಕಾರಿ ಬಸ್‌ಗೆ ಆದ್ಯತೆ ನೀಡುತ್ತೇವೆ. ಅಗತ್ಯ ಕೆಲಸಗಳಿಗೆ ನಗರಕ್ಕೆ ಬಂದು ಹೋಗಲು ಈ ಸೌಲಭ್ಯ ನೆರವಾಗಲಿದೆ’ ಎನ್ನುತ್ತಾರೆ ಚಿತ್ರದುರ್ಗ ತಾಲ್ಲೂಕಿನ ಕಲ್ಲಹಳ್ಳಿಯ ಶೋಭಾ.

ಸರ್ಕಾರಿ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಸರ್ಕಾರದ ನಡೆಗೆ ಖಾಸಗಿ ಬಸ್‌ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಡೀಸೆಲ್‌ ಬೆಲೆ ಏರಿಕೆ ಮತ್ತು ತೆರಿಗೆಯ ಭಾರಕ್ಕೆ ಖಾಸಗಿ ಬಸ್‌ಗಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರಿ ಬಸ್‌ ಪ್ರಯಾಣಿಕರಿಗೆ ಮಾತ್ರ ಸೌಲಭ್ಯ ಕಲ್ಪಿಸಿದರೆ ಇನ್ನಷ್ಟು ತೊಂದರೆಗೆ ಸಿಲುಕುವುದು ನಿಶ್ಚಿತ. ಖಾಸಗಿ ಬಸ್‌ಗಳಲ್ಲಿ ಕೆಲಸ ಮಾಡುವವರು ಬೀದಿಗೆ ಬೀಳಬೇಕಾಗುತ್ತದೆ’ ಎಂದು ಖಾಸಗಿ ಬಸ್‌ ಸ್ಟ್ಯಾಂಡ್‌ ಏಜೆಂಟ್‌ ರುದ್ರಮುನಿ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಖಾಸಗಿ ಬಸ್‌ ಸೇವೆ ಪಡೆಯುತ್ತಿರುವ ಮಹಿಳೆ.
ಚಿತ್ರದುರ್ಗದಲ್ಲಿ ಖಾಸಗಿ ಬಸ್‌ ಸೇವೆ ಪಡೆಯುತ್ತಿರುವ ಮಹಿಳೆ.
ರಶ್ಮಿ
ರಶ್ಮಿ
ಶೋಭಾ
ಶೋಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT