ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅನಧಿಕೃತ ಒತ್ತುವರಿ ತೆರವಿಗೆ ಸೂಚನೆ

ಸಾರ್ವಜನಿಕ ರಸ್ತೆ, ಕೆರೆ ಒತ್ತುವರಿ ತೆರವು ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
Last Updated 8 ಜನವರಿ 2020, 14:53 IST
ಅಕ್ಷರ ಗಾತ್ರ

ಚಿತ್ರದುರ್ಗ: ‘2009 ಸೆಪ್ಟೆಂಬರ್ 29ರ ನಂತರ ಸಾರ್ವಜನಿಕ ರಸ್ತೆ, ಉದ್ಯಾನ, ಕೆರೆ, ಬಡಾವಣೆಗಳಲ್ಲಿನ ರಸ್ತೆ, ಚರಂಡಿ ಒತ್ತುವರಿ ಮಾಡಿದ್ದಲ್ಲಿ ತೆರವುಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡಿದಲ್ಲಿ ತೆರವುಗೊಳಿಸಲು ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳು, ರಸ್ತೆ ಹಾಗೂ ಕೆರೆ ಒತ್ತುವರಿಯಾಗಿದ್ದಲ್ಲಿ ಮುಲಾಜಿಲ್ಲದೇ ತೆರವುಗೊಳಿಸಿ’ ಎಂದು ತಾಕೀತು ಮಾಡಿದರು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಅನಧಿಕೃತವಾಗಿ ನಿರ್ಮಿಸಲಾಗಿರುವ ದೇವಸ್ಥಾನ, ಮಸೀದಿ, ಚರ್ಚ್ ಸೇರಿ ಯಾವುದೇ ಧಾರ್ಮಿಕ ಕಟ್ಟಡಗಳನ್ನು ಸರ್ವೆ ಆಧರಿತವಾಗಿ ನಿಯಮಾನುಸಾರ ತೆರವುಗೊಳಿಸಬೇಕು. ಈ ಎಲ್ಲಾ ವಿಷಯಗಳ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು. ಸರ್ವೆ ಮತ್ತು ತೆರವು ಕಾರ್ಯಾಚರಣೆ ಕಟ್ಟು ನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆಯಾದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಯಾಗುತ್ತಾರೆ’ ಎಂದು ಎಚ್ಚರಿಸಿದರು.

‘ಆಯಾ ತಾಲ್ಲೂಕಿನ ತಹಶೀಲ್ದಾರ್‌, ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಲೆಕ್ಕಿಗರು, ಪಿಡಿಒಗಳು, ಕರ ವಸೂಲಿಗಾರರನ್ನು ಒಳಗೊಂಡ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರಿಗಳ ತಂಡ ರಚಿಸಿ, ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು ಸರ್ವೆ ಕಾರ್ಯ ನಡೆಸಬೇಕು. ಜೊತೆಗೆ ಪೊಲೀಸರ ಭದ್ರತೆಯಲ್ಲಿ ತೆರವು ಕಾರ್ಯ ಕೈಗೊಳ್ಳಬೇಕು’ ಎಂದರು.

‘ಗ್ರಾಮ ಲೆಕ್ಕಾಧಿಕಾರಿಗಳು ಸರ್ವೆ ಕಾರ್ಯವನ್ನು ಕೈಗೊಂಡು ಜ. 31ರೊಳಗೆ, ತಹಶೀಲ್ದಾರ್‌ ಅಥವಾ ನಗರಸಭೆ ಆಯುಕ್ತರು ಫೆ. 28ರೊಳಗೆ ಮಾಹಿತಿ ಸಂಗ್ರಹಿಸಿ ಕ್ರೂಢೀಕರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡ ನಿರ್ಮಿಸಿರುವ ಕುರಿತು ಸಾರ್ವಜನಿಕರು ಸಹ ಮಾಹಿತಿ ನೀಡಬಹುದು. ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇಡಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿ. ಪ್ರಸನ್ನ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT