ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳೀಯ ಅಭ್ಯರ್ಥಿ’ ದಾಳಕ್ಕೆ ಸಿಗದ ಮನ್ನಣೆ

ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಕೂಗಿಗೆ ಕಿವಿಗೊಡದ ವರಿಷ್ಠರು
ಜಿ.ಬಿ.ನಾಗರಾಜ್‌
Published 24 ಮಾರ್ಚ್ 2024, 7:10 IST
Last Updated 24 ಮಾರ್ಚ್ 2024, 7:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಟಿಕೆಟ್‌ ಆಕಾಂಕ್ಷಿಗಳು ಉರುಳಿಸಿದ ದಾಳಕ್ಕೆ ಕಾಂಗ್ರೆಸ್‌ ಮನ್ನಣೆ ನೀಡಿಲ್ಲ. ಬಿಜೆಪಿ ಸಂಭಾವ್ಯರ ಪಟ್ಟಿ ಗಮನಿಸಿದರೆ ಕೇಸರಿ ಪಡೆ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದ್ದು ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ‘ಕೈ’ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ ಟಿಕೆಟ್‌ಗೆ ದಿನಗಣನೆ ಶುರುವಾಗಿದ್ದು, ಮಾಜಿ ಸಚಿವ ಗೋವಿಂದ ಎಂ.ಕಾರಜೋಳ ಅವರ ಹೆಸರು ಮುನ್ನೆಲೆಗೆ ಬಂದಿದೆ. ‘ಸ್ಥಳೀಯ ಅಭ್ಯರ್ಥಿ’ ಹೆಸರಿನಲ್ಲಿ ಅವಕಾಶ ಕೋರಿದ್ದವರ ನಡೆ ನಿಗೂಢವಾಗಿದೆ.

ತುಮಕೂರು ಜಿಲ್ಲೆಯ ಶಿರಾ, ಪಾವಗಡ ಮತ್ತು ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ‘ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಹೊರಗಿನವರು ಪ್ರತಿನಿಧಿಸಿದ್ದೇ ಹೆಚ್ಚು’ ಎಂಬ ಆರೋಪ ಕೇಳಿಬಂದಿತ್ತು. ಕ್ಷೇತ್ರ ಪ್ರತಿನಿಧಿಸುತ್ತಿರುವ ಸಂಸದ ಎ.ನಾರಾಯಣಸ್ವಾಮಿ ಹಾಗೂ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಅವರ ಹೆಸರನ್ನು ಉಲ್ಲೇಖಿಸಿ ಬಹಿರಂಗ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಇದಕ್ಕೆ ಎರಡು ಪಕ್ಷಗಳ ವರಿಷ್ಠರು ಕಿವಿಗೊಟ್ಟಿಲ್ಲ.

ವಿಧಾನಸಭಾ ಚುನಾವಣೆ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ‘ಕೈ’ ಪಾಳೆಯದ ಬಹುತೇಕರ ಕಣ್ಣು ಲೋಕಸಭೆಯತ್ತ ನೆಟ್ಟಿತ್ತು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು ಆಕಾಂಕ್ಷಿಗಳಲ್ಲಿ ಹುಮ್ಮಸ್ಸು ಮೂಡಿಸಿತ್ತು. ಮತ ಹಂಚಿಕೆ ಪ್ರಮಾಣ, ಜಾತಿ, ಹಣ ಪ್ರಾಬಲ್ಯದ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡ ಟಿಕೆಟ್‌ ಗಿಟ್ಟಿಸಿಕೊಳ್ಳಲು ಪೈಪೋಟಿಗೆ ಇಳಿದರು. ಕ್ಷೇತ್ರವನ್ನು ಸುತ್ತಾಡಿ ಬೆಂಬಲಿಗರ ಸಭೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದರು.

2009ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ಬಿ.ತಿಪ್ಪೇಸ್ವಾಮಿ ಮತ್ತೊಂದು ಅವಕಾಶಕ್ಕೆ ಎಲ್ಲರಿಗಿಂತ ಮೊದಲು ಅಖಾಡಕ್ಕೆ ಇಳಿದಿದ್ದರು. ‘ಸ್ಥಳೀಯ ಅಭ್ಯರ್ಥಿ’ಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕ್ಷೇತ್ರ ಸಂಚಾರ ನಡೆಸಿದ್ದರು. ಅಲ್ಲಲ್ಲಿ ಬೆಂಬಲಿಗರ ಸಭೆ ನಡೆಸಿ ತಾವು ಉರುಳಿಸಿದ ದಾಳಕ್ಕೆ ಪುಷ್ಠಿ ಸಿಗುವಂತೆ ನೋಡಿಕೊಂಡರು. ಪ್ರತಿಭಟನೆ, ಬಲ ಪ್ರದರ್ಶನಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆ ರಾಮಪ್ಪ ಕೂಡ ‘ಸ್ಥಳೀಯ ಅಭ್ಯರ್ಥಿ’ಯಾಗಿ ಟಿಕೆಟ್‌ ನಿರೀಕ್ಷಿಸಿದ್ದರು.

ಇದೇ ದಾಳವನ್ನು ಬಿಜೆಪಿಯ ಕೆಲವರು ಸಂಸದ ಎ.ನಾರಾಯಣಸ್ವಾಮಿ ವಿರುದ್ಧ ಉರುಳಿಸಿದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌, ಮಾಜಿ ಸಂಸದ ಜನಾರ್ದನಸ್ವಾಮಿ, ಸೂರನಹಳ್ಳಿ ವಿಜಯಕುಮಾರ್‌ ಸೇರಿ ಅನೇಕರು ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದರು. ರಘುಚಂದನ್‌ ಅವರು ಬೆಂಬಲಿಗರ ಪಡೆಯನ್ನು ಕಟ್ಟಿ ಕ್ಷೇತ್ರದಲ್ಲಿ ಸುತ್ತಾಡಿ ಸಹಮತ ಪಡೆಯಲು ಯತ್ನಿಸಿದರು. ಬಿಜೆಪಿ ವರಿಷ್ಠರು ಇದಕ್ಕೆ ಅಷ್ಟಾಗಿ ಒಲವು ವ್ಯಕ್ತಪಡಿಸಿದಂತೆ ತೋರುತ್ತಿಲ್ಲ.

..
..

ಬಿಜೆಪಿ ಟಿಕೆಟ್‌ಗೆ ಪಟ್ಟು ಸಂಸದ ಎ.ನಾರಾಯಣಸ್ವಾಮಿ ಅವರ ಬದಲಿಗೆ ಮಾಜಿ ಸಚಿವ ಗೋವಿಂದ ಕಾರಜೋಳ ಅವರನ್ನು ಅಭ್ಯರ್ಥಿ ಮಾಡಲು ಬಿಜೆಪಿ ಒಲವು ತೋರಿದ್ದು ಗೊತ್ತಾಗುತ್ತಿದ್ದಂತೆ ಎಂ.ಸಿ.ರಘುಚಂದನ್‌ ಬೆಂಬಲಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಬಿಜೆಪಿ ಕಚೇರಿಗೆ ನುಗ್ಗಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಚಿತ್ರದುರ್ಗದ ಸ್ವಾಭಿಮಾನದ ಪ್ರಶ್ನೆ ಸ್ಥಳೀಯರು ಬೇಕು’ ಎಂಬ ಭಿತ್ತಿಚಿತ್ರ ಪ್ರದರ್ಶಿಸಿ ಸ್ಥಳೀಯರಿಗೆ ಟಿಕೆಟ್‌ ನೀಡುವಂತೆ ಪಟ್ಟುಹಿಡಿದಿದ್ದಾರೆ. ಟಿಕೆಟ್ ಕೈತಪ್ಪಿದರೆ ‘ಸ್ಥಳೀಯ ಅಭ್ಯರ್ಥಿ’ ಹೆಸರಿನಲ್ಲಿ ಪಕ್ಷೇತರ ಹುರಿಯಾಳು ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT