ಭಾನುವಾರ, ಫೆಬ್ರವರಿ 28, 2021
23 °C
ಅಜ್ಜಂಪುರ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಒತ್ತು

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನಾ ಪ್ರದೇಶಕ್ಕೆ ಸಂಸದ ಎ. ನಾರಾಯಣಸ್ವಾಮಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಬಯಲು ಸೀಮೆಯ ಜನರ ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಅಜ್ಜಂಪುರ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಸಂಸದ ಎ. ನಾರಾಯಣಸ್ವಾಮಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಶನಿವಾರ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ರಾಘವನ್, ಅಧೀಕ್ಷಕ ಎಂಜಿನಿಯರ್ ವೇಣುಗೋಪಾಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಮೈಸೂರು ವಿಭಾಗದ ರೈಲ್ವೆ ಇಲಾಖೆ ಅಧಿಕಾರಿಗಳಾದ ರವಿಚಂದ್ರನ್ ಹಾಗೂ ವೆಂಕಟರಾಜು ಅವರೊಂದಿಗೆ ಕಾಮಗಾರಿ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ  ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಯಶವಂತರಾಜು ಮಾಹಿತಿ ನೀಡಿದರು.

ಅಜ್ಜಂಪುರ ರೈಲ್ವೆ ಸೇತುವೆ ಕಾಮಗಾರಿ ಹಿಂದಿನ ವರ್ಷ ಜೂನ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ರೈಲು ನಿಲುಗಡೆ ಸೇರಿ ವಿವಿಧ ಕಾರಣಗಳಿಂದ ಅಪೂರ್ಣಗೊಂಡಿತ್ತು. ಕಾಮಗಾರಿ ಸಂಬಂಧ ಸಂಸದರು ಬೆಂಗಳೂರು, ಮೈಸೂರಿನಲ್ಲಿ ಭದ್ರಾ ಮೇಲ್ದಂಡೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. 

ಲಾಕ್‌ಡೌನ್ ಕಾರಣಕ್ಕೆ ಪ್ರಯಾಣಿಕರ ರೈಲುಗಳು ಸಂಚರಿಸುತ್ತಿಲ್ಲ. ಆದರೆ ಗೂಡ್ಸ್ ವಾಹನಗಳು ಸಂಚರಿಸುತ್ತಿರುವ ಕಾರಣ ಸೇತುವೆ ಕಾಮಗಾರಿ ಕಷ್ಟ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ‘ರೈಲು ನಿಲ್ಲಿಸುವ ಕೆಲಸ ಮಾಡಿಸುತ್ತೇನೆ, ನೀವು ಗುತ್ತಿಗೆದಾರರ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಳ್ಳಿ’ ಎಂದು ಸೂಚಿಸಿದರು.

‌ಬಳಿಕ ರೈಲ್ವೆ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿ ಮಾಡಿ, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ. ಸಿಂಗ್ ಅವರಿಗೆ ಮೇ 15 ರಿಂದ 25 ರವರೆಗೆ ರೈಲು ನಿಲುಗಡೆ ಮಾಡಿಸುವ ಆದೇಶವನ್ನು ತಲುಪಿಸಿದರು. ಇದರಿಂದ ಸೇತುವೆ ಕಾಮಗಾರಿಗೆ ಇದ್ದ ಅಡಚಣೆ ನಿವಾರಣೆ ಆಗಿದೆ. ಮೇ 25 ರ ಒಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ  ಎಂದು ಯಶವಂತರಾಜು ವಿವರಿಸಿದರು.

ಎಂ.ಆರ್. ಸ್ವಾಮಿ, ಭೋಜರಾಜು, ಹಾಲಪ್ಪ, ಉಮಾಪತಿ, ಡಾ.ನಾಗೇಶ್, ಮಲ್ಲಿಕ್ ಸಾಬ್ ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು