ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದಾಹ ತಣಿಸಲು ಅರವಟ್ಟಿಗೆ

ಸುದೀಪ್ ಚಾರಿಟಬಲ್ ಟ್ರಸ್ಟ್ ಬಳಗದಿಂದ ಕುಡಿಯುವ ನೀರಿನ ವ್ಯವಸ್ಥೆ
Last Updated 1 ಏಪ್ರಿಲ್ 2022, 5:05 IST
ಅಕ್ಷರ ಗಾತ್ರ

ಚಳ್ಳಕೆರೆ: ನಗರದ ಜನರ ಬಿಸಿಲ ಬೇಗೆ ತಣಿಸಲು ಸುದೀಪ್ ಚಾರಿಟಬಲ್ ಟ್ರಸ್ಟ್ ಗೆಳೆಯರ ಬಳಗ ಇಲ್ಲಿನ ಚಿತ್ರದುರ್ಗ ರಸ್ತೆ ಬಿಇಒ ಕಚೇರಿ ಮುಂಭಾಗ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಲು ಅರವಟ್ಟಿಗೆಯನ್ನು ತೆರೆದಿದೆ. ಈ ಮೂಲಕ ನೂರಾರು ಜನರಿಗೆ ನೀರು ವಿತರಣಾ ಸೇವೆಯಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದೆ.

ಸ್ವಯಂ ಪ್ರೇರಣೆಯಿಂದಲೇ ಗೆಳೆಯರ ಬಳಗದವರು ತಲಾ ಇಂತಿಷ್ಟು ಹಣವನ್ನು ಸೇರಿಸಿ ಬಿದಿರಿನ ಹೊಸ ತಡಿಕೆ ಮತ್ತು ಗಳಗಳಿಂದ ಮುಖ್ಯ ರಸ್ತೆ ಬದಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಆ ಶೆಡ್ ಒಳಗೆ 10ರಿಂದ 12 ಮರಳಿನ ರಾಶಿ ಮಾಡಿ ಆ ರಾಶಿಯ ಮೇಲೆ 20ರಿಂದ 25 ಲೀಟರ್ ನೀರು ಸಂಗ್ರಹದ ಹೊಸ ಮಣ್ಣಿನ ಮಡಕೆಯನ್ನು ಇಟ್ಟಿದ್ದಾರೆ.

ಆ ಮಡಕೆಯಲ್ಲಿ ಪ್ರತಿದಿನ ನೂರಾರು ಲೀಟರ್ ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ನೀರನ್ನು ಬಿದಿರ ಕೊಳವೆಗೆ ಹೊಯ್ಯುತ್ತಾರೆ. ಆ ಕೊಳವೆಯ ಮೂಲಕ ಹರಿದು ಬರುವ ತಂಪಾದ ನೀರನ್ನು ಬಾಯಾರಿ ಬಂದ ಜನರು ಹಿಡಿದು ಕುಡಿಯಲು ಮಣ್ಣಿನ ಲೋಟದ ವ್ಯವಸ್ಥೆಯನ್ನು ಮಾಡಿದ್ದಾರೆ.

‘ಮೊದಲು ಮಾನವನಾಗು’, ‘ಕಾಡು ಬೆಳೆಸಿ ನಾಡು ಉಳಿಸಿ’, ‘ಹಸಿರು– ಜೀವನದ ಉಸಿರು’, ‘ನೀರು ಜೀವ ದ್ರವ’ ಮುಂತಾದ ಸಂದೇಶವನ್ನು ಬಿದಿರಿನ ಶೆಡ್ ಹಾಗೂ ಫ್ಲೆಕ್ಸ್‌ಗಳ ಮೇಲೆ ಬರೆಯಲಾಗಿದೆ. ನೀರನ್ನು ವಿತರಿಸಲು ನಾಲ್ವರು ಯುವಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

‘ಬಿಸಿಲು ಹೆಚ್ಚು ಇರುವುದರಿಂದ ಕೆಲಸಕ್ಕಾಗಿ ಬಂದ ಗ್ರಾಮೀಣ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿರುತ್ತಾರೆ. ಆ ಜನರ ದಾಹ ಹೇಳತೀರದು. ಹೋಟೆಲ್‌ಗಳಲ್ಲಿ ತಿಂಡಿ, ಟೀ, ಕಾಫಿ ತೆಗೆದುಕೊಂಡರೆ ಮಾತ್ರ ನೀರು ಕೊಡುತ್ತಾರೆ. ಗ್ರಾಮೀಣ ಜನರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಟ್ರಸ್ಟ್ ವತಿಯಿಂದ ಶುದ್ಧ, ತಂಪಾದ ಕುಡಿಯುವ ನೀರನ್ನು ವರ್ಷದಲ್ಲಿ 3ರಿಂದ 4 ತಿಂಗಳು ನಿರಂತರವಾಗಿ ವಿತರಿಸುವ ಸಂಕಲ್ಪವನ್ನು ಮಾಡಿದ್ದೇವೆ’ ಎನ್ನುತ್ತಾರೆ ಗೆಳೆಯರ ಬಳಗದ ಸದಸ್ಯರಾದ ಹರೀಶ್, ವಿಕಾಸ್, ಮಂಜು, ಹರ್ಷ, ಗಿರಿ.

‘ಶಾಲಾ – ಕಾಲೇಜು ವಿದ್ಯಾರ್ಥಿಗಳು ಸೇರಿ ಪ್ರತಿ ದಿನ ನೂರಾರು ಜನರು ನೀರು ಕುಡಿದು ಸಂತೋಷದಿಂದ ಹೋಗುತ್ತಾರೆ. ನಗರದಲ್ಲಿ ಕುಡಿಯಲು ಹನಿ ನೀರು ಸಿಗುವುದಿಲ್ಲ. ದಾಹ ತೀರಿಸಿಕೊಳ್ಳಲು ತೊಂದರೆಯಾಗುತ್ತಿತ್ತು. ಆದರೆ ಸುದೀಪ್ ಟ್ರಸ್ಟ್‌ ಬಳಗ ಕುಡಿಯುವ ನೀರಿನ ಅರವಟ್ಟಿಗೆ ತೆರೆದು ತುಂಬಾ ಒಳ್ಳೆಯ ಕೆಲಸ ಮಾಡಿದೆ. ಇನ್ನುಳಿದ ನಗರದ ಪ್ರಮುಖ ರಸ್ತೆಯಲ್ಲಿ ಅರವಟ್ಟಿಗೆ ತೆರೆದು ನೀರು ವಿತರಣೆ ಮಾಡಬೇಕು’ ಎಂದು ತ್ಯಾಗರಾಜ ನಗರದ ಸುಪ್ರೀತ್ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT