ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ ಪುರಸಭೆಗೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ

Last Updated 27 ಸೆಪ್ಟೆಂಬರ್ 2022, 4:17 IST
ಅಕ್ಷರ ಗಾತ್ರ

ಹೊಸದುರ್ಗ: ಕೇಂದ್ರ ಸರ್ಕಾರದ 2022ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಹೊಸದುರ್ಗ ಪುರಸಭೆ ಆಯ್ಕೆಯಾಗಿದೆ.

ಸ್ವಚ್ಛತೆಗಾಗಿ ಪುರಸಭೆಗೆ ದೊರೆತಿರುವ ಮೂರನೇ ಪ್ರಶಸ್ತಿ ಇದು. 2018, 2021ರಲ್ಲೂ ಪ್ರಶಸ್ತಿ ದೊರೆದಿತ್ತು. ಅಕ್ಟೋಬರ್‌ 1ರಂದು ನವೆದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

‘ಸ್ವಚ್ಛ ಭಾರತ್ ಮಿಷನ್ -2 ಅಡಿ ಪುರಸಭೆ ಆಯ್ಕೆಯಾಗಿದೆ. ಸಮೀಕ್ಷೆ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಸವನ್ನು ಅಂದೇ ವಿಂಗಡಿಸುತ್ತಿರುವ ಏಕೈಕ ಪುರಸಭೆ ಹೊಸದುರ್ಗ’ ಎಂದು ಪುರಸಭೆ ಅಧ್ಯಕ್ಷ ಶ್ರೀನಿವಾಸ
ಹೇಳಿದರು.

‘ಆಯಾ ದಿನವೇ ಮನೆಮನೆ ಕಸ ಸಂಗ್ರಹ, ವಿಂಗಡಣೆ, ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಹಸಿ ಕಸದಿಂದ ‘ಹೊಸದುರ್ಗ ಗೋಲ್ಡ್’ ಹೆಸರಿನ ಗೊಬ್ಬರ ತಯಾರಿಸಿ, ಕೆ.ಜಿ.ಗೆ ₹ 2ರಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ₹ 3 ಲಕ್ಷದವರೆಗೂ ಆದಾಯ ಬರುತ್ತಿದೆ. ಒಣಕಸವನ್ನು 10-15 ಭಾಗವನ್ನಾಗಿ ವಿಂಗಡಿಸಿ, ಅದರಲ್ಲಿನ ಪ್ಲಾಸ್ಟಿಕ್ ಅನ್ನು ಸಿಮೆಂಟ್ ಕಾರ್ಖಾನೆಯವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಉಳಿದ ಕಸದಿಂದ ₹ 7 ಲಕ್ಷದಿಂದ ₹ 8 ಲಕ್ಷ ಆದಾಯ ಬರುತ್ತಿದೆ’ಎಂದು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.

ಸನ್ಮಾನ: ಪುರಸಭೆಯಲ್ಲಿ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ವಿವಿಧ ಕಾರ್ಯಗಳ ಸಮೀಕ್ಷೆ ನಡೆಸಿದ ನಂತರ 6,000 ಅಂಕಗಳಲ್ಲಿ 3,800 ಅಂಕಗಳು. ಪೂರ್ಣ ಪ್ರಮಾಣದ ಅಂಕ ಪಡೆಯಲು ಮುಂದಿನ ದಿನಗಳಲ್ಲಿ ಶ್ರಮಿಸಬೇಕು. ಈ ಪ್ರಶಸ್ತಿ ಬರಲು ಸಾರ್ವಜನಿಕರು, ಪೌರಕಾರ್ಮಿಕರು ಹಾಗೂ ಪುರಸಭೆ ಅಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಎಂಜಿನಿಯರ್ ತಿಮ್ಮರಾಜು ತಿಳಿಸಿದರು.

‘ಕೆಲಸ ಮಾಡೋದು ನಾವು ಪ್ರಶಸ್ತಿ ಪಡಿಯೋದು ನೀವು’: ‘ಕೆಲಸ ಮಾಡಿ, ಪಟ್ಟಣದ ಸ್ವಚ್ಛತೆ ಕಾಪಾಡುವವರು ನಾವು, ಪ್ರಶಸ್ತಿ ಸ್ವೀಕರಿಸೋದು ನೀವು. ಈ ಬಾರಿ ಪ್ರಶಸ್ತಿ ಸ್ವೀಕರಿಸಲು ನಮ್ಮನ್ನು ದೆಹಲಿ ಕರೆದುಕೊಂಡು ಹೋಗಿ’ ಎಂದು ಪೌರಕಾರ್ಮಿಕರು ಪುರಸಭೆಯಲ್ಲಿ ಒತ್ತಾಯಿಸಿದರು.

‘ಕಳೆದ ಬಾರಿ ಸ್ವಚ್ಛತೆಗೆ ಪ್ರಶಸ್ತಿ ಬಂದಾಗಲೂ ನಮ್ಮನ್ನು ಕರೆಯಲಿಲ್ಲ. ಈ ಬಾರಿಯಾದರೂ ಇಬ್ಬರನ್ನಾದರೂ ಕರೆದುಕೊಂಡು ಹೋಗಿ’ ಎಂದರು.

‘ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಇಲ್ಲಿರುವ ಸೌಲಭ್ಯ ಎಲ್ಲೂ ಇಲ್ಲ. ಯಾವುದೇ ಸಮಸ್ಯೆಯಿದ್ದರೂ ಅಧಿಕಾರಿಗಳೊಂದಿಗೆ ಚರ್ಚಿಸಿ’ ಎಂದುಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಹೇಳಿದರು.

‘ಪೌರಕಾರ್ಮಿಕರಿಗೆ ಜಾಗ ಕಲ್ಪಿಸಿದ್ದೇವೆ’ ಎಂದು ಪುರಸಭೆ ಸದಸ್ಯರಾದ ದಾಳಿಂಬೆ ಗಿರೀಶ್, ನಾಗರಾಜ್ ಹೇಳಿದರು.

ಪುರಸಭೆ ಅಧ್ಯಕ್ಷ ಶ್ರೀನಿವಾಸ,ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT