ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ನಾಡಾಗಲಿದೆ ಕರ್ನಾಟಕ

ಜನತೆ ಮುಂದೆ ಕನಸು ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ
Last Updated 5 ಜೂನ್ 2022, 3:16 IST
ಅಕ್ಷರ ಗಾತ್ರ

ಧರ್ಮಪುರ: ರೈತರ ಬೆವರಿಗೆ ಗಂಗೆಯ ಹನಿ ಸೇರಿದರೆ ಭೂಮಿ ತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಅದಕ್ಕಾಗಿ ಕರ್ನಾಟಕವನ್ನು ನೀರಾವರಿ ನಾಡನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಮೀಪದ ಹರಿಯಬ್ಬೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದ ಎಚ್‌.ಎಲ್‌. ಗುಣ್ಣಯ್ಯ ವೇದಿಕೆಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಣ್ಣ ನೀರಾವರಿ ಇಲಾಖೆ, ಹಿರಿಯೂರು ತಾಲ್ಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ‘ಧರ್ಮಪುರ ಕೆರೆ ಹಾಗೂ ಇತರ ಏಳು ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆ’ಯ ಭೂಮಿಪೂಜೆ, ವಿವಿಧ ಇಲಾಖೆಗಳ ವತಿಯಿಂದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

‘ಈ ಭಾಗದ ರೈತರ ಬಹು ವರ್ಷದ ಕನಸಾದ ಕೆರೆಗಳಿಗೆ ನೀರು ತುಂಬಿಸುವ ₹ 90 ಕೋಟಿ ವೆಚ್ಚದ ಯೋಜನೆಗೆ ಮೊದಲ ಹಂತದಲ್ಲಿ ₹ 40 ಕೋಟಿ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳಿದ ಅನುದಾನವನ್ನು ತಿಂಗಳೊಳಗೆ ಬಿಡುಗಡೆ ಮಾಡಲಾಗುವುದು. ಯೋಜನೆಯಲ್ಲಿ ಬಿಟ್ಟುಹೋದ ಹರಿಯಬ್ಬೆ ಸೇರಿದಂತೆ ಇತರ ಕೆರೆಗಳನ್ನು ಸೇರಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

‘ಮಧ್ಯ ಕರ್ನಾಟಕದ ಪ್ರಮುಖ ಎರಡು ಯೋಜನೆಗಳಾದ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯನ್ನು ಪ್ರಾರಂಭ ಮಾಡುವ ಯೋಗ ನನ್ನದಾಗಿದೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ರಾಜ್ಯ ಸರ್ಕಾರದಿಂದ ಪೂರಕ ದಾಖಲೆ ಹಾಗೂ ಬೇಡಿಕೆ ಸಲ್ಲಿಸಲಾಗಿದೆ. ಪ್ರಧಾನ ಮಂತ್ರಿಗಳು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರ
₹ 13 ಸಾವಿರ ಕೋಟಿ ಮಂಜೂರು ಮಾಡಲಿದೆ’ ಎಂದು ಹೇಳಿದರು.

‘ಭದ್ರಾ ಯೋಜನೆ ಜಾರಿಗಾಗಿ ಈ ಭಾಗದ ಜನರು 50 ವರ್ಷಗಳ ಹೋರಾಟ ನಡೆಸಿದ್ದಾರೆ. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸರ್ಕಾರದಿಂದ ಅನುಮೋದನೆ ನೀಡಿದರು’ ಎಂದರು.

‘543 ದಿನಗಳ ಹೋರಾಟದ ದಿನಗಳಲ್ಲಿ ಅಂದಿನ ಸರ್ಕಾರದ ನೀರಾವರಿ ಖಾತೆ ಸಚಿವನಾಗಿ, ಹೋರಾಟಗಾರರ ಬಳಿ ಬಂದು ತಾಂತ್ರಿಕವಾಗಿ ಹೇಗೆ ಭದ್ರಾ ನದಿಯಿಂದ ನೀರು ತರಲಾಗುತ್ತದೆ ಎಂದು ವಿವರಿಸಿದ ಮೇಲೆ ಹೋರಾಟ ಅಂತ್ಯವಾಯಿತು. ಹೋರಾಟಗಾರರಿಗೆ ಮಾತು ಕೊಟ್ಟಂತೆ 15 ದಿನಗಳಲ್ಲಿ ಯೋಜನೆಯ ಟೆಂಡರ್ ಕರೆಯಲಾಯಿತು. ಈ ಭಾಗದ ಜನರು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಮತ್ತೆ 5 ಟಿಎಂಸಿ ಅಡಿ ನೀರು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

‘ಮನೆ ಮನೆಗೆ ಗಂಗೆ ಯೋಜನೆಯಡಿ ಚಿತ್ರದುರ್ಗದ ತಾಲೂಕಿನ 171 ಹಾಗೂ ಹಿರಿಯೂರು ತಾಲೂಕಿನ 131 ಹಳ್ಳಿಗೆ ಬಹುಗ್ರಾಮ ಯೋಜನೆ ಮಂಜೂರು ಮಾಡಲಾಗಿದೆ’ ಎಂದರು.

‘ವಿವಿ ಸಾಗರಕ್ಕೆ ಹೆಚ್ಚುವರಿ ನೀರು, ಧರ್ಮಪುರ ಹೋಬಳಿಯ 7 ಕೆರೆಗಳಿಗೆ ನೀರು ತುಂಬಿಸುವ ಕಾಯಕಕ್ಕೆ ಯಡಿಯೂರಪ್ಪ ಮತ್ತು ಬಸವರಾಜು ಬೊಮ್ಮಾಯಿಯವರ ಕೊಡುಗೆ ಅಪಾರ. ಬತ್ತಿ ಹೋಗಿದ್ದ ರೈತರ ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಶುರುವಾಗಿದ್ದು, ರೈತರು ಖುಷಿಯಿಂದ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ’ ಎಂದು ಶಾಸಕಿ ಪೂರ್ಣಿಮಾ
ಕೆ. ಶ್ರೀನಿವಾಸ್‌ ಹೇಳಿದರು.

2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ತಾಲ್ಲೂಕಿನ ಸೃಷ್ಟಿ, ಸಂಜನಾ, ಸೌಮ್ಯಾ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

ಕೇಂದ್ರ ಪಂಚಾಯತ್‌ ರಾಜ್‌ ರಾಜ್ಯ ಖಾತೆ ಸಚಿವ ಕಪಿಲ್‌ ಮೋನೇಶ್ವರ ಪಾಟೀಲ್‌, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಶಾಸಕರಾದ ಜಿ.ಎಚ್‌. ತಿಪ‍್ಪಾರೆಡ್ಡಿ, ಎಂ. ಚಂದ್ರಪ್ಪ, ಡಾ.ರಾಜೇಶ್‌ ಗೌಡ, ವಿಧಾನ ಪರಿಷತ್ ಮುಖ್ಯ ಸಚೇತಕ ವೈಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್‌. ನವೀನ್, ಚಿದಾನಂದ ಎಂ. ಗೌಡ, ಹರಿಯಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಅಬ್ಬಿನಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್. ಅನುಷಾ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ
ಇದ್ದರು.

..........

ಬರದ ನಾಡಿನ ಭಗೀರಥರಾಗಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಚಿತ್ರದುರ್ಗ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಕಂದಾಯ ಇಲಾಖೆಯ ಮೂಲಕ ರೈತರ ಮನೆ ಬಾಗಿಲಿಗೆ ಬಿಜೆಪಿ ಸರ್ಕಾರ ಬಂದಿದೆ.

– ಎ.ನಾರಾಯಣ ಸ್ವಾಮಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ

........

ನೂರು ವರ್ಷದ ರೈತರ ಹೋರಾಟಕ್ಕೆ ಬಿಜೆಪಿ ಸರ್ಕಾರ ಸ್ಪಂದಿಸುವ ಮೂಲಕ ರೈತರ ಸರ್ಕಾರ ಎನಿಸಿಕೊಂಡಿದೆ. ಕೃಷಿಕರಿಗೆ 90ರಷ್ಟು ಸಬ್ಸಿಡಿ ನೀಡಿ ರೈತ ಶಕ್ತಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ₹ 689 ಕೋಟಿಯಲ್ಲಿ ₹ 289 ಕೋಟಿ ಬೆಳೆ ವಿಮೆ ಬಿಡುಗಡೆಯಾಗಿದೆ.

– ಬಿ.ಸಿ.ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT