ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು ದುಃಸ್ಥಿತಿಗೆ ಕಾಂಗ್ರೆಸ್ ಕಾರಣ: ಸಚಿವ ಬಿ. ಶ್ರೀರಾಮುಲು

₹ 68 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ
Last Updated 1 ಮೇ 2022, 4:19 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಮೊಳಕಾಲ್ಮುರು ಕ್ಷೇತ್ರವು ಅತ್ಯಂತ ಹಿಂದುಳಿಯಲು ಮತ್ತು ಕೇತ್ರದ ಜನರು ಬರಗಾಲವನ್ನು ಎದುರಿಸಲು ಗುಳೆ ಹೋಗುವುದಕ್ಕೆ ಕ್ಷೇತ್ರದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ ಶಾಸಕರೇ ಕಾರಣ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ಪಟ್ಟಣದ ತೇರುಬೀದಿಯಲ್ಲಿ ಶನಿವಾರ ನಡೆದ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1952ರ ನಂತರ ಮೊಳಕಾಲ್ಮುರು ಕ್ಷೇತ್ರಕ್ಕೆ ನನ್ನ ಮೂಲಕ ಸಚಿವ ಸ್ಥಾನ ದೊರೆತಿದೆ. ನಾನು ಅಧೀಕಾರ ಸ್ವೀಕರಿಸಿದ ದಿನದಿಂದ ಕ್ಷೇತ್ರದಲ್ಲಿ ನೂರಾರು ಕೆಲಸಗಳನ್ನು ನಿರ್ವಹಿಸುತ್ತಿದ್ದೇನೆ. ಕ್ಷೇತ್ರದ ನಾಲ್ಕು ಹೋಬಳಿಗಳ 78 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ನೀರುಣಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ತುಂಗಭದ್ರಾ ಹಿನ್ನೀರಿನಿಂದ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್ ಅಳವಡಿಕೆ ಕಾರ್ಯ ಮುಕ್ತಾಯವಾಗಿದೆ. ಪ್ರತಿ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸಲು ಸಾಕಷ್ಟು ಶ್ರಮವಹಿಸಿದ್ದೇನೆ. ಇಂದು ಸಹ ಕ್ಷೇತ್ರದ ನಾಯಕನಹಟ್ಟಿ ಮತ್ತು ತಳಕು ಹೋಬಳಿಗಳಲ್ಲಿ ₹ 68 ಕೋಟಿ ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ಕಾಂಗ್ರೆಸ್ ಹಾಗೂ ನನ್ನ ವಿರೋಧಿಗಳು ಕ್ಷುಲ್ಲಕ ಭಾಷೆಯಲ್ಲಿ ಟೀಕೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಮೊಳಕಾಲ್ಮುರು ಕ್ಷೇತ್ರವು ಅತ್ಯಂತ ಹಿಂದುಳಿಯಲು, ಕ್ಷೇತ್ರದ ಜನರು ಕಷ್ಟಗಳನ್ನು ಅನುಭವಿಸಲು ಕ್ಷೇತ್ರವನ್ನು ಆಳಿದ ಹಿಂದಿನ ಶಾಸಕರು ಮತ್ತು ಕಾಂಗ್ರೆಸ್ ಪಕ್ಷವೇ ಕಾರಣ. ಆಗ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಕಾಂಗ್ರೆಸ್ ಶಾಸಕರು ಕತ್ತೆ ಕಾಯುತ್ತಿದ್ದರಾ? ಅಂದು ಕ್ಷೇತ್ರವನ್ನು, ಕ್ಷೇತ್ರದ ಜನತೆಯನ್ನು ನಿರ್ಲಕ್ಷ್ಯ ಮಾಡಿ ಇಂದು ನನ್ನ ವಿರುದ್ಧ ಆರೋಪ ಮಾಡುತ್ತಿದ್ದೀರಾ, ಕಳೆದ ಅವಧಿ ಸೇರಿದಂತೆ ಹಿಂದಿನ ಶಾಸಕರು ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಏನು ಎಂಬುದಕ್ಕೆ ದಾಖಲೆಗಳನ್ನು ನೀಡುತ್ತೇನೆ. ಈ ಅವಧಿಯಲ್ಲಿ ನಾನು ಮೊಳಕಾಲ್ಮುರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಅಂದಾಜು ಮೊತ್ತ ₹ 2,164 ಕೋಟಿ ಎಂದು ಸರ್ಕಾರದ ದಾಖಲೆಗಳೇ ಹೇಳುತ್ತವೆ. ನಾನು ಕೈಗೊಂಡಿರುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಿಂದಿನ ಯಾವ ಶಾಸಕರಾದರೂ ಮಾಡಿದ್ದು ತೋರಿಸಿದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಕಿಡಿಗೇಡಿಗಳಿಂದ ಸುಳ್ಳು ಆರೋಪ: ‘ಕ್ಷೇತ್ರದ ಕೆಲ ಕಾಂಗ್ರೆಸ್ ಕಿಡಿಗೇಡಿಗಳು ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಕ್ಷೇತ್ರದ ಸಾವಿರಾರು ಬಡ ಫಲಾನುಭವಿಗಳ ನೇರ ಸಾಲ, ಸ್ವಸಹಾಯ ಸಂಘಗಳ ಪ್ರೋತ್ಸಾಹ ಧನದ ಅನುದಾನವನ್ನು ಬಳಸಿಕೊಂಡಿದ್ದೇನೆ ಎಂದು ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾನು ಸಮಾಜಕಲ್ಯಾಣ ಮಂತ್ರಿಯಾಗಿದ್ದಾಗ ₹ 28 ಸಾವಿರ ಕೋಟಿ ಅನುದಾನದಲ್ಲಿ ರಾಜ್ಯದಾದ್ಯಂತ 50 ಸಾವಿರ ಬಡಜನರಿಗೆ ನೇರ ಸಾಲ ಮಂಜೂರು ಮಾಡಿದ್ದೇನೆ. ಯಾರೋ ಕೆಲ ಅಧಿಕಾರಿಗಳು ನನ್ನ ಹೆಸರಿಗೆ ಧಕ್ಕೆ ತರಲು ನೇರ ಸಾಲ ಯೋಜನೆಯಲ್ಲಿ ಗೋಲ್‌ಮಾಲ್‌ ಮಾಡಿದ ಕಾರಣ ಅಂತಹ ಅಧಿಕಾರಿಗಳನ್ನು ಶಿಸ್ತುಕ್ರಮಕ್ಕೆ ಒಳಪಡಿಸಿ ವರ್ಗಾವಣೆ ಮಾಡಲಾಗಿದೆ. ಮತ್ತು ನಿಜ ಫಲಾನುಭವಿಗಳಿಗೆ ನ್ಯಾಯ ಒದಗಿಸಲಾಗಿದೆ’ಎಂದರು.

‘ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಕಾಂಗ್ರೆಸ್ ನಲುಗಿದೆ. ಕಾಂಗ್ರೆಸ್‌ನ ರಾಜ್ಯ ಮತ್ತು ರಾಷ್ಟ್ರ ನಾಯಕರು ಚುನಾವಣೆಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟು ತಲೆಮರೆಸಿಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂಬ ಜೋಡೆತ್ತುಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೊರಟಿವೆ. ಹಾಗೆಯೇ ಮೊಳಕಾಲ್ಮುರು ಕ್ಷೇತ್ರದಲ್ಲಿ ಇಬ್ಬರು ಕಾಂಗ್ರೆಸ್‌ ನಾಯಕರು ವಿರುದ್ಧ ದಿಕ್ಕಿನಲ್ಲಿದ್ದಾರೆ. ಇಂಥವರು ನನ್ನ ಎದುರು ಸ್ಪರ್ಧಿಸಿ ಗೆಲ್ಲುತ್ತಾರೆಯೇ’ ಎಂದು ವ್ಯಂಗ್ಯವಾಡಿದರು.

ತಹಶೀಲ್ದಾರ್ ಎನ್. ರಘುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕ್ಷೇತ್ರದಲ್ಲಿ 72 ಸರ್ಕಾರಿ ಶಾಲೆಗಳ ಕಟ್ಟಡಗಳು ದುಃಸ್ಥಿತಿಯಲ್ಲಿವೆ. ಸಚಿವರ ಶಿಫಾರಸಿನ ಮೇರೆಗೆ 32 ಶಾಲಾ ಕಟ್ಟಡಗಳ ದುರಸ್ತಿ ಮತ್ತು ನೂತನ ಕೊಠಡಿಗಳ ನಿರ್ಮಾಣ ಸಾಧ್ಯವಾಗುತ್ತಿದೆ. ಇಂದು ಕೋಡಿಹಳ್ಳಿ ಮತ್ತು ಓಬಳಾಪುರ ಗ್ರಾಮದಲ್ಲಿ ಜಿಂದಾಲ್ ಕಂಪನಿಯ ಸಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ತಲಾ ₹ 1.28 ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ತಾಲ್ಲೂಕು ಆಡಳಿತದಿಂದ 32 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳಾಗಿ ಘೋಷಿಸಲಾಗಿದೆ. ಹಾಗೇ ಚಳ್ಳಕೆರೆ ತಾಲ್ಲೂಕಿನ ಎಲ್ಲ ಗ್ರಾಮಗಳನ್ನು ಇನ್ನೂ ಒಂದು ವರ್ಷದ ಅವಧಿಯಲ್ಲಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರಳಿ, ಕಾರ್ಯದರ್ಶಿ ಜಯಪಾಲಯ್ಯ, ಪಿ. ಶಿವಣ್ಣ, ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ. ಮಂಜುನಾಥ, ಇ. ರಾಮರೆಡ್ಡಿ, ಎನ್. ಮಹಾಂತಣ್ಣ, ಶ್ರೀನಿವಾಸ್, ಮಲ್ಲೇಶ್, ಬೋರಸ್ವಾಮಿ, ಗೋವಿಂದ, ರಾಜುಇದ್ದರು.

ನಾಯಕನಹಟ್ಟಿ ಹೋಬಳಿಯ ಕಾಮಗಾರಿಗಳು

ಮನುಮೈನಹಟ್ಟಿ ಮತ್ತು ಬೋಸೆದೇವರಹಟ್ಟಿ ಗ್ರಾಮಗಳಲ್ಲಿ ತಲಾ ₹ 12 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆ, ಪಟ್ಟಣದ 2, 5, 7 ಮತ್ತು 14ನೇ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಭೂಮಿಪೂಜೆ, ಪಟ್ಟಣದ ಒಳಮಠದ ಸುತ್ತಲೂ ಹಾಗೂ ಹಟ್ಟಿಮಲ್ಲಪ್ಪನಾಯಕ ವೃತ್ತದಿಂದ ಒಳಮಠಕ್ಕೆ ಸಾಗುವ ಮಣ್ಣಿನ ರಸ್ತೆ ತೆಗೆದು ₹ 6 ಕೋಟಿ ವೆಚ್ಚದಲ್ಲಿ ಸಿ.ಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಗಳು ನಡೆದವು.

ತಳಕು ಹೋಬಳಿಯ ಕಾಮಗಾರಿ ವಿವರ

ಕೋಡಿಹಳ್ಳಿ ಮತ್ತು ಓಬಳಾಪುರ ಗ್ರಾಮಗಳ ಸರ್ಕಾರಿ ಶಾಲೆಯ ಆವರಣದಲ್ಲಿ ತಲಾ ₹ 1.28 ಕೋಟಿ ವೆಚ್ಚದ 4 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ, ಗಿರಿಯಮ್ಮನಹಳ್ಳಿ ಗ್ರಾಮದಲ್ಲಿ ₹ 40 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ 145 ಹಳ್ಳಿಗಳಿಗೆ ನಲ್ಲಿಗಳ ಮೂಲಕ ನೀರು ಪೂರೈಕೆ ಕಾಮಗಾರಿಗೆ ಭೂಮಿಪೂಜೆ, ತಳಕು ಗ್ರಾಮದಲ್ಲಿ ರೈತರಿಗೆ ಕೃಷಿ ಉಪಕರಣಗಳ ವಿತರಣೆ, 40 ಪರಿಶಿಷ್ಟ ಪಂಗಡದ ಕಾಲೊನಿಗಳಲ್ಲಿ ₹ 2 ಕೋಟಿ ವೆಚ್ಚದಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ ಉದ್ಘಾಟನೆ, ತಿಮ್ಮಣ್ಣನಹಳ್ಳಿಯಲ್ಲಿ ₹ 16 ಲಕ್ಷ ವೆಚ್ಚದಲ್ಲಿ ಹೈಟೆಕ್ ಅಂಗನವಾಡಿ ಕಟ್ಟಡ ಉದ್ಘಾಟನೆ, ವಲಸೆ ಗ್ರಾಮದಲ್ಲಿ ₹ 16 ಲಕ್ಷ ವೆಚ್ಚದಲ್ಲಿ ಹೈಟೆಕ್ ಅಂಗನವಾಡಿ ಕಟ್ಟಡ ಮತ್ತು ₹ 20 ಲಕ್ಷ ವೆಚ್ಚದ ಅಂಬೇಡ್ಕರ್ ಭವನ ಕಟ್ಟಡ ಉದ್ಘಾಟನೆ, ಚಿತ್ರನಾಯಕನಹಳ್ಳಿಯಲ್ಲಿ ₹ 80 ಲಕ್ಷ ವೆಚ್ಚದ ಡಾಂಬರ್‌ ರಸ್ತೆ ಉದ್ಘಾಟನೆ, ₹ 2 ಕೋಟಿ ವೆಚ್ಚದಲ್ಲಿ 15 ಶಾಲಾ ಕೊಠಡಿಗಳ ದುರಸ್ತಿ ಮತ್ತು ನಿರ್ಮಾಣಕ್ಕೆ ಚಾಲನೆ, ಮೈಲನಹಳ್ಳಿ ಗ್ರಾಮದಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಎಎನ್‌ಎಂ ವಸತಿ ಗೃಹ, ₹ 14 ಕೋಟಿ ವೆಚ್ಚದಲ್ಲಿ ರೇಣುಕಾಪುರದಿಂದ ದೊಡ್ಡ ಉಳ್ಳಾರ್ತಿಗ್ರಾಮದವರೆಗೂ ಡಾಂಬರ್‌ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ, ಓಬಳಾಪುರ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿ.ಸಿ ರಸ್ತೆ ಉದ್ಘಾಟನೆ, 7 ಗ್ರಾಮಗಳನ್ನು ಸಮಸ್ಯೆ ಮುಕ್ತ ಎಂದು ಘೋಷಣೆ ಕಾರ್ಯಕ್ರಮಕ್ಕೆ ಚಾಲನೆ.

ಮೊಳಕಾಲ್ಮುರು ಕ್ಷೇತ್ರದಿಂದಲೇ ಸ್ಪರ್ಧೆ: ‘ಮುಂದಿನ ದಿನಗಳಲ್ಲಿ ಶ್ರೀರಾಮುಲು ಕ್ಷೇತ್ರದಿಂದ ಪಲಾಯನ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಹೇಳಿಕೊಳ್ಳುತ್ತಿದ್ದಾರಂತೆ. ನಾನು ಎಲ್ಲಿಗೂ ಪಲಾಯನ ಮಾಡುವುದಿಲ್ಲ. ಇದೇ ಮೊಳಕಾಲ್ಮುರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಮೊಳಕಾಲ್ಮುರು ಸೇರಿದಂತೆ ರಾಜ್ಯದಲ್ಲಿ 150 ಸ್ಥಾನಗಳನ್ನು ಬಿಜೆಪಿ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಕ್ಷೇತ್ರದಲ್ಲಿ ನನ್ನ ವಿರುದ್ಧ ಗೆದ್ದು ತೋರಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT