ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Last Updated 1 ಏಪ್ರಿಲ್ 2022, 5:07 IST
ಅಕ್ಷರ ಗಾತ್ರ

ಹಿರಿಯೂರು: ಕೋವಿಡ್ ಸಮಯದಲ್ಲಿ ಶ್ರಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು, ರೈತರು ಒಳಗೊಂಡು ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ. ಆದರೆ, ಬಿಜೆಪಿ ಬೆನ್ನಿಗೆ ನಿಂತಿರುವ ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳ ಸಂಪತ್ತು ಹತ್ತು ಪಟ್ಟು ಹೆಚ್ಚಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಇಂಧನ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲಾ ಸಮುದಾಯದ ಬಡವರಿಗೆ ವಸತಿ, ಪಡಿತರ, ನರೇಗಾ ಯೋಜನೆ ಮೂಲಕ ಕೂಲಿ ಕೆಲಸ, ಭೂರಹಿತರಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ ಮಾಡಿದ್ದು ಹೊರತುಪಡಿಸಿ ಬೇರೆ ಯಾವುದೇ ಸಾಧನೆ ಆಗಿಲ್ಲ. ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆ ಆಗಿದ್ದರಿಂದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಮೋದಿಯವರು ಹಿಂದಕ್ಕೆ ಪಡೆದರು. ಡೀಸೆಲ್, ಪೆಟ್ರೋಲ್ ಬೆಲೆ ಇಳಿಸುವ ನಾಟಕ ಆಡಿದರು. ಈಗ ನಿತ್ಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಡಿ. ಸುಧಾಕರ್, ‘ಸಾರ್ವಜನಿಕ ಸಂಸ್ಥೆಗಳನ್ನು ಒಂದೊಂದಾಗಿ ಮಾರುತ್ತಿರುವ, ಬಡವರಿಗೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾತ್ರ ಎಲ್ಲ ವರ್ಗ, ಜಾತಿಗಳ ಬಡವರ ರಕ್ಷಣೆ ಸಾಧ್ಯ. 2023ರ ವಿಧಾನಸಭಾ ಚುನಾವಣೆ, 2024ರ ಸಂಸತ್ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ’ ಎಂದರು.

ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ತಮಟೆ ಬಡಿಯುವ ಮೂಲಕ ಬೆಲೆ ಏರಿಕೆಯನ್ನು ಖಂಡಿಸಿದರು. ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಡಾ. ಸುಜಾತ, ಗುರುಪ್ರಸಾದ್, ವಿ. ಶಿವಕುಮಾರ್, ಜ್ಞಾನೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT