ಗುರುವಾರ , ಮೇ 13, 2021
22 °C
ಕಲ್ಯಾಣ ಮಂಟಪ, ಸಮುದಾಯ ಭವನದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗೆ ತಾಕೀತು

ಹಳ್ಳಿ, ಮೈದಾನಕ್ಕೆ ಮದುವೆ ಸ್ಥಳಾಂತರ

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ವೇಗವಾಗಿ ಹರಡುತ್ತಿರುವ ಕೋವಿಡ್‌ ತಡೆಗೆ ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂಬ ಸರ್ಕಾರದ ಆದೇಶ ಹೊರಬಿದ್ದ ಬೆನ್ನಲ್ಲೇ ಹಳ್ಳಿ, ವಿಶಾಲ ಮೈದಾನದಲ್ಲಿ ಮದುವೆ ಮಾಡಲು ಹಲವರು ಚಿಂತನೆ ನಡೆಸುತ್ತಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯವಾಗಿ ಮದುವೆಗಳು ಹೆಚ್ಚಾಗಿ ನಡೆಯುತ್ತವೆ. ಈ ಅವಧಿಯಲ್ಲಿ ಕಲ್ಯಾಣ ಮಂಟಪಗಳು ಸಿಗುವುದೇ ಕಷ್ಟ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಭವನ ಸಿಕ್ಕರು 100 ಜನರಿಗೆ ಮಾತ್ರ ಅವಕಾಶ ಎಂಬ ಕಾರಣಕ್ಕಾಗಿ ದೇಗುಲ, ಹಳ್ಳಿ, ಮೈದಾನಕ್ಕೆ ಸ್ಥಳಾಂತರಿಸಲು ಕೆಲವರು ನಿರ್ಧರಿಸುತ್ತಿದ್ದಾರೆ.

‘ಮಗಳ ಮದುವೆ ಅದ್ದೂರಿಯಾಗಿ ಮಾಡಬೇಕು ಎಂಬ ಕಾರಣಕ್ಕಾಗಿ ಎರಡು ತಿಂಗಳು ಮುಂಚೆಯೇ ಸಿದ್ಧತೆ ನಡೆಸಿದ್ದೇವೆ. ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ಪತ್ರಿಕೆ ಹಂಚಿದ್ದೇವೆ. ಕಲ್ಯಾಣ ಮಂಟಪವನ್ನು ಕಾಯ್ದಿರಿಸಿ
ದ್ದೇವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. 100 ಜನರ ಮಿತಿ ನಿಗದಿಗೊಳಿಸಿರುವ ಕಾರಣಕ್ಕೆ ಶುಭ ಮುಹೂರ್ತಕ್ಕೆ ಬಂದು ವಧು–ವರರನ್ನು ಆಶೀರ್ವದಿಸಿ ಎಂಬುದಾಗಿ ಕರೆದಿದ್ದವರನ್ನೇ ಈಗ ಬರಬೇಡಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರಿಗೆ ದೂರವಾಣಿ ಮೂಲಕ ಈಗಾಗಲೇ ವಿಷಯ ತಿಳಿಸುತ್ತಿದ್ದೇವೆ. ಇಂತಹ ಸ್ಥಿತಿ ಯಾರಿಗೂ ಬರಬಾರದು’ ಎಂಬುದು ಅನೇಕರ ನೋವಿನ ನುಡಿ.

ಮದುವೆಯಲ್ಲಿ ಸಾವಿರಾರು ಜನ ಊಟ ಮಾಡಿದರೆ ಅದೇ ವಧು–ವರರಿಗೆ ಶುಭ ಹಾರೈಕೆ ಎಂಬ ನಂಬಿಕೆ ಅನೇಕರಲ್ಲಿದೆ. ಅದಕ್ಕಾಗಿ ಸಮುದಾಯ ಭವನ ಆಯ್ಕೆ ಮಾಡಿಕೊಳ್ಳುತ್ತಾರೆ. 100 ಜನರ ಮಿತಿ
ಯೊಳಗೆ ಮದುವೆ ಮಾಡುವುದಾದರೆ, ಕಲ್ಯಾಣ ಮಂಟಪದ ಅಗತ್ಯ ಇರುವುದಿಲ್ಲ. ಶಾಮಿಯಾನ ಹಾಕಿ ಮಾಡಬಹುದು. ಸರ್ಕಾರ, ಜಿಲ್ಲಾಡಳಿತದ ಮಾರ್ಗಸೂಚಿ ಪಾಲಿಸಿದಂತಾಗುತ್ತದೆ. ಸದ್ಯ ವಿಶಾಲ ಹೊರಾಂಗಣದಲ್ಲಿ 200 ಜನರಿಗೆ ಅವಕಾಶ ನೀಡಿದ ಕಾರಣ ಗ್ರಾಮೀಣ ಭಾಗದ ಮೈದಾನಗಳೇ ಉತ್ತಮ ಎಂಬ ತೀರ್ಮಾನಕ್ಕೂ ಕೆಲವರು ಬಂದಿದ್ದಾರೆ.

ಪುರೋಹಿತರು, ವಧು–ವರರನ್ನು ಸಿಂಗರಿಸುವವರು, ಅಡುಗೆ, ಪುಷ್ಪ, ವಿದ್ಯುತ್‌ ಅಲಂಕಾರ, ಭವನ ಸೇರಿ ಇತರೆ ಸಿಬ್ಬಂದಿಯೇ 30ರಿಂದ 40 ಜನ ಆಗಲಿದ್ದಾರೆ. ಗಂಡು–ಹೆಣ್ಣಿನ ಕುಟುಂಬಸ್ಥರು ಸೇರಿ 30 ಜನ ಅಂದುಕೊಂಡರು 70 ಜನ. ಉಳಿದ 30 ಜನರಲ್ಲಿ ಯಾರನ್ನು ಕರೆಯಬೇಕು ಎಂಬ ಗೊಂದಲ ಅನೇಕರಲ್ಲಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅವರನ್ನು ಭೇಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಅವಕಾಶ ಮಾಡಿಕೊಡಿ ಎಂಬುದಾಗಿ ಮನವಿ ಸಲ್ಲಿಸಲು ಕೆಲವರು ಮುಂದಾಗಿದ್ದಾರೆ.

ಒಮ್ಮೆ ಸಮುದಾಯ ಭವನ ಕಾಯ್ದಿರಿಸಿದ ಮೇಲೆ ಮುಂಗಡ ಹಣ ಪೂರ್ಣ ಪ್ರಮಾಣದಲ್ಲಿ ಹಿಂದಿರು
ಗಿಸುವುದು ತುಂಬಾ ವಿರಳ. ಆದರೆ, ಇದರ ನಡುವೆಯೂ ಕೆಲ ಕಲ್ಯಾಣ ಮಂಟಪಗಳ ಮಾಲೀಕರು ನೀಡಿದ ಹಣ ಹಿಂದಿರುಗಿಸುವ ಮೂಲಕ ಕೋವಿಡ್ ಸಮಯದಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ. ಮದುವೆಯ ಹಿಂದಿನ ದಿನ ರದ್ದು ಮಾಡಿದರೂ ಹಣ ಹಿಂದಿರುಗಿಸುವ ಭರವಸೆ ನೀಡುತ್ತಿದ್ದಾರೆ.

ಮರಳುತ್ತಿದೆ ಮುಂಗಡ ಹಣ

‘ಕೋವಿಡ್ ನಿಯಂತ್ರಿಸುವ ಸಂಬಂಧ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದೇನೆ. ಅದನ್ನು ಮೀರಿ ಜನ ಸೇರುವಂತಿದ್ದರೆ, ಹಣ ಹಿಂದಿರುಗಿಸಲಾಗುವುದು. ಹಣಕ್ಕಿಂತಲೂ ಪ್ರಾಣ ಮುಖ್ಯ’ ಎನ್ನುತ್ತಾರೆ ಜಿ.ಜಿ.ಸಮುದಾಯ ಭವನದ ಮಾಲೀಕರಾದ ಡಾ.ಜ್ಯೋತಿ ವಿಜಯಕುಮಾರ್.

‘ಅದ್ದೂರಿಯಾಗಿ ಆಗಬೇಕು ಎನ್ನುವವರು ಮಾತ್ರ ಕಲ್ಯಾಣ ಮಂಟಪ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಸ್ಕ್‌ ಧರಿಸುವುದು ಮತ್ತು ಅಂತರ ಕಾಪಾಡಿಕೊಳ್ಳುವುದನ್ನು ಮರೆಯುತ್ತಾರೆ. ಇದರಿಂದ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ಕಳೆದ ವರ್ಷ 30ಕ್ಕೂ ಹೆಚ್ಚು ಮದುವೆಯ ಮುಂಗಡ ಹಣ ಹಿಂದಿರುಗಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ತಹಶೀಲ್ದಾರ್‌ ಅನುಮತಿ ಕಡ್ಡಾಯ

‘ಮದುವೆ ತಯಾರಿ ನಡೆಸಿರುವವರು 100 ಕಾರ್ಡ್‌ಗಳನ್ನು ಕಚೇರಿಗೆ ತರಬೇಕು. ಅದಕ್ಕೆ ಕಚೇರಿಯ ಮುದ್ರೆ, ಸಹಿ ಹಾಕಿ ಕೊಡಲಾಗುವುದು. ಈ ರೀತಿಯ ಕಾರ್ಡ್‌ ಇಲ್ಲದವರಿಗೆ ಪ್ರವೇಶ ನಿರ್ಬಂಧ. ಕೋವಿಡ್ ಮಾರ್ಗಸೂಚಿ ಮೀರಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಚಿತ್ರದುರ್ಗ ತಹಶೀಲ್ದಾರ್ ವೆಂಕಟೇಶಯ್ಯ ಎಚ್ಚರಿಸಿದ್ದಾರೆ.

‘ನಗರ, ಪಟ್ಟಣ ಪ್ರದೇಶಗಳಲ್ಲಿ ತಹಶೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ, ಗ್ರಾಮೀಣ ಭಾಗಗಳಲ್ಲಿ ಪಿಡಿಒ, ಪೊಲೀಸರೊಂದಿಗೆ ಮದುವೆಯಾಗುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಮಾರ್ಗಸೂಚಿ ಪಾಲಿಸದಿದ್ದರೆ, ಸಮಸ್ಯೆಗೆ ಸಿಲುಕಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಮದುವೆಗಾಗಿ ಸಮುದಾಯ ಭವನವೊಂದರಲ್ಲಿ ದಿನ ಕಾಯ್ದಿರಿಸಿದ್ದೆವು. 100 ಜನರ ಮಿತಿಯೊಳಗೆ ಮದುವೆ ಸಾಧ್ಯವಿಲ್ಲ. ಅದಕ್ಕಾಗಿ ಹಳ್ಳಿಯಲ್ಲಿ ಮಾಡಲು ಚಿಂತನೆ ನಡೆಸುತ್ತಿದ್ದೇವೆ.

ನಿರಂಜನ್, ಸ್ಥಳೀಯ ನಿವಾಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.