ಮಂಗಳವಾರ, ಮಾರ್ಚ್ 31, 2020
19 °C
ಸಾರ್ವಜನಿಕ ಆಸ್ಪತ್ರೆಯಲ್ಲಿ

ಕೊರೊನಾ ವೈರಸ್ ಭೀತಿ: ತಪಾಸಣೆಗೆ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಕೊರೊನಾ ಹರಡುವ ಭೀತಿಯ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಹೆಚ್ಚಿನ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪ‌ಟ್ಟಣದಲ್ಲಿ ತಾಪಮಾನ ಶೇ 36ಕ್ಕೆ ಏರಿದ್ದು, ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಬಿಸಿಲಿನ ಝಳ ಇರುವುದರಿಂದ ದೇಹ ಬಿಸಿಯಾದಂತೆ ಆಗುತ್ತಿದೆ. ದೇಹದ ಉಷ್ಣಾಂಶ ಹೆಚ್ಚಳ ಕಂಡು ಹಾಗೂ ಸಾಮಾನ್ಯ ಶೀತ, ನೆಗಡಿ, ಕೆಮ್ಮು ಇರುವ ರೋಗಿಗಳು ಭಯದಿಂದ ಆಸ್ಪತ್ರೆಗೆ ದೌಡಾಯಿಸಿದರು.

ತಲೆನೋವು, ಮೈಕೈನೋವು, ಗಂಟಲು ನೋವು ಬಂದ ರೋಗಿಗಳು ತಮಗೂ ಕೊರೊನಾ ವೈರಸ್‌ ತಾಕಿದೆಯೋ ಎಂಬ ಅನುಮಾನದಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು.

ತಾಲ್ಲೂಕಿನ ವಿವಿಧೆಡೆಯಿಂದ ಹೆಚ್ಚಿನ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. 100 ಹಾಸಿಗೆಯ ಈ ಆಸ್ಪತ್ರೆಯಲ್ಲಿ ಕೇವಲ 4 ಮಂದಿ ವೈದ್ಯರು ಮಾತ್ರ ಕರ್ತವ್ಯದಲ್ಲಿ ನಿರ್ವಹಿಸುತ್ತಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು.

ಹಲವರು ಕರವಸ್ತ್ರ, ಟವಲ್‌, ಸೀರೆ ಸೆರಗಿನಲ್ಲಿ ಬಾಯಿ ಹಾಗೂ ಮೂಗನ್ನು ಮುಚ್ಚಿಕೊಂಡು ಸರತಿಯಲ್ಲಿ ನಿಂತು ಚಿಕಿತ್ಸೆ ಪಡೆದರು.

ಕಳೆದ ಸೋಮವಾರ 690 ಹೊರರೋಗಿಗಳು ದಾಖಲಾಗಿದ್ದರು. ಈ ವಾರ 768 ಹೊರರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಮಂಜೂರಾಗಿರುವ 11 ವೈದ್ಯರ ಹುದ್ದೆಗಳಲ್ಲಿ 7 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚರ್ಮ ವೈದ್ಯರೊಬ್ಬರು ರಜೆ ಹೋಗಿದ್ದಾರೆ. ಇನ್ನುಳಿದ 6 ವೈದ್ಯರಲ್ಲಿ ಆಡಳಿತ ವೈದ್ಯಾಧಿಕಾರಿ ಜಿಲ್ಲೆ ಹಾಗೂ ತಾಲ್ಲೂಕು ಸಭೆ, ಸಮಾರಂಭ ಮತ್ತು ಆರೋಗ್ಯ ಶಿಬಿರಗಳಿಗೆ ಹೋಗುತ್ತಿದ್ದಾರೆ. ರಾತ್ರಿ ಹೊತ್ತು ಕರ್ತವ್ಯ ನಿರ್ವಹಿಸಿದ ಮತ್ತೊಬ್ಬ ವೈದ್ಯರು ಬೆಳಿಗ್ಗೆ ರಜೆ ತೆಗೆದುಕೊಳ್ಳುತ್ತಾರೆ. ಇನ್ನುಳಿದ 4 ಮಂದಿ ವೈದ್ಯರು ಮಾತ್ರ ಪ್ರತಿದಿನ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

ಕೋವಿಡ್‌–19 ರಡುವ ಭೀತಿ ಇರುವುದರಿಂದ ಎಲ್ಲಾ ವೈದ್ಯರು ಆಸ್ಪತ್ರೆಯಲ್ಲಿದ್ದು, ಸಕಾಲಕ್ಕೆ ರೋಗಿಗಳಿಗೆ ಚಿಕಿತ್ಸೆ ಕೊಡಬೇಕು. ನೂಕುನುಗ್ಗಲು ಆಗುವುದಕ್ಕೆ ಅವಕಾಶ ಕೊಡಬಾರದು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು