ಮಂಗಳವಾರ, ಮೇ 18, 2021
24 °C
ಮನೆ, ಹಳ್ಳಿಗಳ ಮೈದಾನದಲ್ಲೇ ಸರಳ ವಿವಾಹ

ಚಿತ್ರದುರ್ಗ: ಮದುವೆ ಸಂಭ್ರಮದ ಬದಲು ಸಂಕಟ, ಯಾರನ್ನು ಆಹ್ವಾನಿಸಬೇಕು ಎಂಬುದೇ ಗೊಂದಲ

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮದುವೆ ಮನೆಗಳೆಂದರೆ ಉಲ್ಲಾಸ–ಉತ್ಸಾಹ, ಸಡಗರ–ಸಂಭ್ರಮದ ವಾತಾವರಣಕ್ಕೆ ಸದಾ ಸಾಕ್ಷಿಯಾಗುತ್ತವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಾದ್ಯಂತ ಬಹುತೇಕ ಮದುವೆ ಮನೆಗಳಲ್ಲಿ ಸಂಭ್ರಮ ಕಣ್ಮರೆಯಾಗಿದೆ. ಕೋವಿಡ್ ಕಾರ್ಮೋಡ ಕವಿದು ಸಂಕಟ ಎದುರಾಗಿ, ಸಂಭ್ರಮಕ್ಕೆ ತಣ್ಣೀರು ಎರಚಿದೆ.

ಶರವೇಗದಲ್ಲಿ ಹರಡುತ್ತಿರುವ ಕೋವಿಡ್‌ ತಡೆಗೆ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂಬ ಸರ್ಕಾರದ ಹೊಸ ಆದೇಶ ಹೊರಬಿದ್ದ ಬೆನ್ನಲ್ಲೇ ಹಾಗೂ ದೇಗುಲಗಳಲ್ಲೂ ಭಕ್ತರಿಗೆ ನಿರ್ಬಂಧ ಹೇರಿದ ನಂತರ ಮದುವೆಗೂ ಒಂದೆರಡು ತಿಂಗಳ ಮುಂಚೆಯೇ ಲಗ್ನಪತ್ರಿಕೆ ಹಂಚಿದವರು ತಬ್ಬಿಬ್ಬಾಗಿದ್ದಾರೆ. ‘ಶುಭ ಮುಹೂರ್ತಕ್ಕೆ ಬಂದು ವಧು–ವರರನ್ನು ಆಶೀರ್ವದಿಸಿ’ ಎಂಬುದಾಗಿ ಕರೆದಿದ್ದವರನ್ನೇ ‘ಈಗ ಬರಬೇಡಿ’ ಎನ್ನುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಕೊನೆ ಕ್ಷಣದಲ್ಲಿ ಮದುವೆಗೆ ಬನ್ನಿ ಎಂಬುದಾಗಿ ಯಾರನ್ನು ಆಹ್ವಾನಿಸಬೇಕು ಎಂಬ ಗೊಂದಲವೂ ಸೃಷ್ಟಿಯಾಗಿದೆ.

ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತದೆ ಎಂಬ ಊಹೆಯನ್ನೂ ಮಾಡದೆ ಸಿದ್ಧತೆಯಲ್ಲಿ ತೊಡಗಿದ್ದ ಕೆಲವರಿಗೆ ಆಘಾತ ಉಂಟಾಗಿದೆ. ಮದುವೆಗೆ ಎರಡು ವಾರಗಳ ಮುನ್ನ ಲಗ್ನಪತ್ರಿಕೆ ಹಂಚಿದರಾಯಿತು ಎಂದು ಕಾಯುತ್ತಿದ್ದವರು ಮೊಬೈಲ್‌ ಕರೆ, ವಾಟ್ಸ್ಆ್ಯಪ್‌ ಸಂದೇಶದ ಮೂಲಕ ಕೆಲವರನ್ನಷ್ಟೇ ಕರೆಯುವಂತಾಗಿದೆ.

ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತವೆ. ಇದಕ್ಕಾಗಿ ಮೂರು ತಿಂಗಳು ಮುಂಚೆಯೇ ಅನೇಕರು ಸಿದ್ಧತೆ ಕೂಡ ಮಾಡಿಕೊಂಡಿರುತ್ತಾರೆ. ಹೊಸ ಆದೇಶ ಪಾಲನೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಿಗದಿತ ಮುಹೂರ್ತದಲ್ಲಿಯೇ ಮದುವೆ ನಡೆಸಲು ಮುಂದಾಗಿರುವ ಅನೇಕರು ಮನೆ, ಗ್ರಾಮೀಣ ಭಾಗದ ವಿಶಾಲ ಮೈದಾನಗಳಲ್ಲೇ ಸರಳವಾಗಿ ಆಚರಿಸುತ್ತಿದ್ದಾರೆ.

ಜೋರಾಗಿ ನಡೆದಿದ್ದ ವಸ್ತ್ರ ಖರೀದಿ: ಮದುವೆ ಸಂಬಂಧ ಸಂಬಂಧಿಕರಿಗಾಗಿ ಲಾಕ್‌ಡೌನ್‌ಗೂ ಮುಂಚೆಯೇ ಲಕ್ಷಾಂತರ ರೂಪಾಯಿಯ ಜವಳಿ ಖರೀದಿ ಮಾಡಿದವರು ತಮ್ಮ ಬಳಿಯೇ ಬಟ್ಟೆಗಳನ್ನು ಇಟ್ಟುಕೊಳ್ಳುವಂತಾಗಿದೆ. ಇದು ಕೂಡ ಒಂದು ರೀತಿ ಸಂಕಟಕ್ಕೆ ಎಡೆಮಾಡಿಕೊಟ್ಟಿದ್ದು, ಈಗಾಗಲೇ ಖರೀದಿ ಮಾಡಿದ್ದಾಗಿದೆ. ಮುಂದೆ ಯಾವಾಗಲಾದರೂ ಮನೆಗೆ ಬಂದಾಗ ಕೊಟ್ಟರಾಯಿತು ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಬಿಕೋ ಎನ್ನುತ್ತಿರುವ ಭವನಗಳು: 50 ಜನರಿಗೆ ನಿಗದಿಯಾದ ನಂತರ ಸಮುದಾಯ ಭವನಗಳಲ್ಲಿ ಮುಂಗಡ ಕಾಯ್ದಿರಿಸಿದ್ದ ಬಹುತೇಕರು ಅಲ್ಲಿ ಮದುವೆ ಮಾಡಲು ಸಿದ್ಧರಿಲ್ಲ. ಕೆಲ ಮಾಲೀಕರು ಹಣ ಹಿಂದಿರುಗಿಸಿದರೆ, ಇನ್ನು ಕೆಲವರು ಸ್ವಲ್ಪ ದಿನ ಸಮಯಾವಕಾಶ ನೀಡಿ ಎನ್ನುತ್ತಿದ್ದಾರೆ. ಬೆರಳೆಣಿಕೆಯಷ್ಟು ಮದುವೆಗಳು ಮಾತ್ರ ಸಮುದಾಯ ಭವನಗಳಲ್ಲಿ ನಡೆಯುತ್ತಿವೆ.

ಕೆಲಸ ಇಲ್ಲದೆ ಕಂಗಾಲು: ಪುರೋಹಿತರನ್ನು ಹೊರತುಪಡಿಸಿ ಪುಷ್ಪ, ವಿದ್ಯುತ್‌ ಅಲಂಕಾರ ಸಿಬ್ಬಂದಿ, ವಧು–ವರರನ್ನು ಸಿಂಗರಿಸುವವರೂ ಸೇರಿ ಸಮುದಾಯ ಭವನಗಳ ಸಿಬ್ಬಂದಿಗೆ ಕೆಲಸ ಇಲ್ಲದಂತಾಗಿ ಕಂಗಾಲಾಗಿದ್ದಾರೆ. ಕೆಲ ಅಡುಗೆ ಭಟ್ಟರಿಗೆ ಅವಕಾಶ ಸಿಕ್ಕರೂ ಕಡಿಮೆ ಜನರಿಗೆ ತಿಂಡಿ–ಊಟ ಸಿದ್ಧಪಡಿಸಬೇಕಾದ ಕಾರಣ ಅವರು ಹೆಚ್ಚು ಜನರನ್ನು ಬಳಸಿಕೊಳ್ಳುತ್ತಿಲ್ಲ.

ತಹಶೀಲ್ದಾರ್‌ ಹಾಗೂ ಗ್ರಾಮ ಪಂಚಾಯಿತಿ ಪಿಡಿಒ ಗಮನಕ್ಕೂ ತರದೇ ಮದುವೆ ಮಾಡಲು ಕೆಲವರು ಮುಂದಾಗುತ್ತಿದ್ದಾರೆ. ಆದರೆ, ಅಧಿಕಾರಿಗಳು ಎಲ್ಲೇ ಮದುವೆ ನಡೆದರೂ ಹದ್ದಿನ ಕಣ್ಣಿಟ್ಟಿದ್ದಾರೆ. ಫೋಟೊ, ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ. ನಿಯಮ ಮೀರಿದವರಿಗೆ ದಂಡ ವಿಧಿಸಲು, ಪ್ರಕರಣ ದಾಖಲಿಸಲು ಸಜ್ಜಾಗಿದ್ದಾರೆ. ಈ ಭಯದ ಕಾರಣಕ್ಕೂ ಮದುವೆಗಳು ಸರಳವಾಗಿ ನಡೆಯುತ್ತಿವೆ.

ಕೋವಿಡ್‌ ಕಾರಣಕ್ಕೆ 2020ರಲ್ಲಿ ಸರ್ಕಾರ ಜಾರಿಗೊಳಿಸಿದ ಒಂದೂವರೆ ತಿಂಗಳ ಲಾಕ್‌ಡೌನ್‌ ವೇಳೆ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಸರಳ ಮದುವೆಗಳು ನಡೆದಿವೆ. ಅದರಲ್ಲಿ ವಧು–ವರರು, ಎರಡೂ ಕಡೆಯವರ ತಂದೆ, ತಾಯಿ, ಪುರೋಹಿತರು ಸೇರಿ ಕೇವಲ 10 ಜನರಷ್ಟೇ ಸೇರಿಕೊಂಡು ಮನೆಗಳೊಳಗೆ 50ಕ್ಕೂ ಅಧಿಕ ಸರಳ ಮದುವೆ ನಡೆಸಲಾಗಿದೆ. ಕೋವಿಡ್ ನಿಯಂತ್ರಿಸುವಲ್ಲಿಯೂ ಅನೇಕರು ಜಾಗೃತಿ ವಹಿಸಿದ್ದಾರೆ.

90 ಬಾಲ್ಯವಿವಾಹಕ್ಕೆ ತಡೆ: ಕೆಲವೆಡೆ ಪ್ರಕರಣ
ಪೋಕ್ಸೊ ಕಾಯ್ದೆ ಜಾರಿಯಲ್ಲಿದ್ದರೂ ಬಾಲ್ಯವಿವಾಹಗಳು ಅಲ್ಲಲ್ಲಿ ನಡೆಯುತ್ತಿವೆ. ಕೋವಿಡ್ ನಿಯಂತ್ರಿಸುವ ಸಂಬಂಧ ಸರ್ಕಾರ ಲಾಕ್‌ಡೌನ್‌, ಕರ್ಫ್ಯೂ ಜಾರಿಗೊಳಿಸಿದೆ. ಆದರೂ ಜಿಲ್ಲೆಯ ಕೆಲವೆಡೆ 18 ವರ್ಷ ತುಂಬದ ಹೆಣ್ಣುಮಕ್ಕಳು ಸಪ್ತಪದಿ ತುಳಿಯುತ್ತಿದ್ದಾರೆ.

ಅಚ್ಚರಿಯ ವಿಷಯವೆಂದರೆ ಕೋವಿಡ್‌ ಪ್ರಕರಣ ಕಾಣಿಸಿಕೊಂಡ ನಂತರದಿಂದ ಈವರೆಗೂ ಜಿಲ್ಲೆಯಲ್ಲಿ 100 ಬಾಲ್ಯವಿವಾಹಗಳು ನಿಗದಿಯಾಗಿದ್ದವು. 2020ರ ಏಪ್ರಿಲ್‌ನಿಂದ 2021ರ ಫೆಬ್ರುವರಿ ಅಂತ್ಯದೊಳಗೆ 94 ಬಾಲ್ಯವಿವಾಹಗಳ ಪೈಕಿ 90 ಅನ್ನು ಅಧಿಕಾರಿಗಳು ತಡೆದು ಬಾಲಕಿಯರನ್ನು ರಕ್ಷಿಸಿದ್ದಾರೆ. ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡ ನಂತರವೂ 4 ಬಾಲ್ಯವಿವಾಹ ನಡೆದಿದ್ದು, ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಮಾರ್ಚ್‌ನಲ್ಲಿಯೂ 6 ಪ್ರಕರಣಗಳು ಕಂಡುಬಂದಿದ್ದು, ನಾಲ್ಕು ನಿಂತಿವೆ. ಚಳ್ಳಕೆರೆ, ಹೊಸದುರ್ಗದಲ್ಲಿ ತಲಾ ಒಂದು ಬಾಲ್ಯವಿವಾಹ ನಡೆದಿದೆ. ಕಣ್ತಪ್ಪಿಸಿ ಬಾಲ್ಯವಿವಾಹ ಮಾಡುವವರ ವಿರುದ್ಧ ಅಧಿಕಾರಿಗಳು ಮಾತ್ರವಲ್ಲ, ಡಾನ್‌ ಬಾಸ್ಕೊ ಸಂಸ್ಥೆ, ಮಕ್ಕಳ ಸಹಾಯವಾಣಿ ಹಾಗೂ ಬೆಂಗಳೂರಿನ ಸಂಸ್ಥೆಯೊಂದು ತನಿಖೆಯಲ್ಲಿ ಕೈಜೋಡಿಸಿವೆ. ಈಚೆಗಷ್ಟೇ ಮತ್ತೆ 4 ಬಾಲ್ಯವಿವಾಹ ನಡೆದಿದ್ದು, ನಿಶ್ಚಿತಾರ್ಥ ಎಂಬುದಾಗಿ ಪೋಷಕರು, ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದಾರೆ. ಪ್ರಕರಣಗಳ ತನಿಖೆ ಮುಂದುವರಿದಿದೆ.

ಕೋವಿಡ್ ಸೃಷ್ಟಿಸಿದ ಆತಂಕ
ಚಿತ್ರದುರ್ಗ ತಾಲ್ಲೂಕಿನ ಬ್ಯಾಲಹಾಳು ಗ್ರಾಮದಲ್ಲಿ ಈಚೆಗೆ ಮದುವೆ ಮನೆಯೊಂದರಲ್ಲಿ ಅಪಾರ ಜನ ಸೇರಿದ್ದು, ಕೋವಿಡ್‌ ಮತ್ತು ಕರ್ಫ್ಯೂ ನಿಯಮ ಉಲ್ಲಂಘನೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ವರನ ಸಹೋದರ ಸೇರಿ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದರು. ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಒಬ್ಬರಿಗೆ ಕೋವಿಡ್‌ ದೃಢಪಟ್ಟಿದೆ. ಇದು ಆತಂಕ ಸೃಷ್ಟಿಸಿದೆ.

ಒಬ್ಬರಲ್ಲಿ ಕೋವಿಡ್ ದೃಢಪಟ್ಟ ಬೆನ್ನಲ್ಲೇ ವಧು–ವರರ ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರಲ್ಲೂ ಈಗ ಕೋವಿಡ್‌ ಭಯ ಶುರುವಾಗಿದೆ. ಈ ವಿಚಾರವಾಗಿ ಅನೇಕರು ಗಾಬರಿಗೊಂಡಿದ್ದಾರೆ.

ಹೊಸದುರ್ಗ: ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಸಂದರ್ಭದಲ್ಲಿಯೂ ತಾಲ್ಲೂಕಿನಲ್ಲಿ ಮದುವೆ ಸಮಾರಂಭಗಳು ನಿರಾತಂಕವಾಗಿ ನಡೆಯುತ್ತಿವೆ.

ಕೋವಿಡ್‌ ಎರಡನೇ ಅಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಸೋಂಕು ಹರಡುವಿಕೆಯ ಸರಪಳಿ ತುಂಡರಿಸುವ ಉದ್ದೇಶದಿಂದ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಅದಕ್ಕಾಗಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಆದರೆ, ಇದ್ಯಾವುದರ ಪರಿವೆ ಇಲ್ಲದಂತೆ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಅನುಮತಿ ಪಡೆಯದೇ ಮದುವೆ, ಗೃಹಪ್ರವೇಶ, ನಾಮಕರಣ, ಜನ್ಮದಿನ ಸೇರಿ ಇನ್ನಿತರ ಸಮಾರಂಭಗಳು ನಡೆಯುತ್ತಿವೆ.

ನೂರಾರು ಜನರು ಸೇರುತ್ತಿದ್ದಾರೆ. ಹಲವರು ಮಾಸ್ಕ್ ಧರಿಸುತ್ತಿಲ್ಲ. ಅಂತರ ಕಾಯ್ದುಕೊಳ್ಳುತ್ತಿಲ್ಲ. ಸ್ಯಾನಿಟೈಸರ್ ಸಹ ಇಟ್ಟಿರುವುದಿಲ್ಲ. ಸಮಾರಂಭಕ್ಕೆ ಬರುವವರು ಒಬ್ಬರಿಗೊಬ್ಬರು ಕೈಕುಲುಕಿ ಶುಭ ಕೋರುತ್ತಿದ್ದಾರೆ. ಈ ನಡುವೆ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

144 ಸೆಕ್ಷನ್ ಜಾರಿಯಲ್ಲಿದ್ದಾಗಲೂ ಹಲವರು ಬೇಕಾಬಿಟ್ಟಿಯಾಗಿ ಸುತ್ತಾಡುತ್ತಿದ್ದರೂ ತಾಲ್ಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ. ಕೊರೊನಾ ನಿಯಂತ್ರಣದ ನಿಯಮ ಪಾಲಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ಸಭೆಗಳಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪದ ಮಾತುಗಳು ಕೇಳಿಬರುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು