ಮಂಗಳವಾರ, ಮೇ 11, 2021
21 °C

ಲಾಕ್‌ಡೌನ್‌: ಗಿಡದಲ್ಲಿಯೇ ಕೊಳೆಯುತ್ತಿದೆ ಸೀಬೆ

ವಿ. ವೀರಣ್ಣ ಧರ್ಮಪುರ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಕೊರೊನಾ ದುಷ್ಪರಿಣಾಮ ರೈತರು ತಾವು ಬೆಳೆದ ಹಣ್ಣು, ತರಕಾರಿ, ಈರುಳ್ಳಿ ತಿಪ್ಪೆಗೆ ಸುರಿಯುವ ಇಲ್ಲವೇ ಕುರಿ, ಮೇಕೆಗಳಿಗೆ ಹಾಕುವ ಪರಿಸ್ಥಿತಿ ಎದುರಾಗಿದೆ.

ಒಂದು ಸಾವಿರ ಅಡಿಯವರೆಗೂ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗದೇ ಇರುವ ಸಂದರ್ಭದಲ್ಲಿ 10 ಎಕರೆಯಲ್ಲಿ ಸೀಬೆ ಬೆಳೆದು ಇನ್ನೇನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಕೊರೊನಾ ಲಾಕ್‌ಡೌನ್‌ ಸೀಬೆ ಬೆಳೆಗಾರನ ಆಶಾಭಾವವನ್ನೇ ಕಿತ್ತುಕೊಂಡಿದೆ. ಕಳೆದ ವರ್ಷವೂ ಲಾಕ್‌ಡೌನ್ ಸಂದರ್ಭದಲ್ಲಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗಿತ್ತು.

ಹೋಬಳಿಯ ಶ್ರವಣಗೆರೆ ಪ್ರಗತಿಪರ ರೈತ ಜಿ.ಶಿವಪ್ರಸಾದಗೌಡ ಅವರು ಹತ್ತು ಎಕರೆಯಲ್ಲಿ ನಾಲ್ಕು ಸಾವಿರ ವಿ.ಎನ್.ಆರ್ ತಳಿಯ ಗಿಡಗಳನ್ನು ಛತ್ತೀಸಗಡದಿಂದ ತಂದಿದ್ದು, ಒಂದು ಸಸಿಗೆ ₹ 200 ಖರ್ಚು ಮಾಡಿದ್ದಾರೆ. ಎರಡೇ ವರ್ಷಗಳಲ್ಲಿ ಗಿಡದಲ್ಲಿ ಹಣ್ಣು ಪ್ರಾರಂಭವಾಗಿತ್ತು. ಈಗ ನಾಲ್ಕು ವರ್ಷಗಳು ಕಳೆದಿವೆ. ಒಂದು ಗಿಡದಲ್ಲಿ 30ರಿಂದ 40 ಹಣ್ಣುಗಳು ಉತ್ಕೃಷ್ಟವಾಗಿ ಬಂದಿವೆ. ಸಾವಯವ ಗೊಬ್ಬರವನ್ನೇ ಬಳಕೆ ಮಾಡಿಕೊಂಡು ಬೆಳೆಸಲಾಗಿದೆ.

ಪ್ರತಿ ಹಣ್ಣಿಗೆ ಸತರಾ ಮತ್ತು ಗುಜರಾತ್‌ನಿಂದ ಕವರ್ ಹಾಗೂ ಪ್ಲಾಂಜ ತರಿಸಿ ಕೀಟಬಾಧೆಯಿಂದ ಸಂರಕ್ಷಿಸಿದ್ದಾರೆ. ಜಮೀನಿನಲ್ಲಿ 8 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಎರಡರಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ. ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ 3 ಕಿ.ಮೀ ದೂರದಿಂದ ಪೈಪ್‌ಲೈನ್‌ ಮೂಲಕ ತೆಗೆದುಕೊಂಡು ಹೋಗಲಾಗಿದೆ. ಹನಿ ನೀರಾವರಿ ಅಳವಡಿಸಿಕೊಂಡು ಉತ್ಕೃಷ್ಟ ಹಣ್ಣು ಬೆಳೆಯಲಾಗಿದೆ. ಆದರೆ, ಕೊರೊನಾ ಕಾರಣ ವ್ಯಾಪಾಸ್ಥರು ಬರುತ್ತಿಲ್ಲ. ಮಾರುಕಟ್ಟೆಗೆ ಸಾಗಿಸಲು ಆಗುತ್ತಿಲ್ಲ. ಹೊರ ರಾಜ್ಯಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು 1 ಕೆ.ಜಿ. ಹಣ್ಣನ್ನು
₹ 10ಕ್ಕೆ ಕೇಳುತ್ತಾರೆ. ಒಂದು ವಾರದಿಂದ ಹಣ್ಣು ಗಿಡದಲ್ಲಿಯೇ ಕೊಳೆಯುತ್ತಿದೆ. ಪ್ರತಿದಿನ ಕೊಳೆತಿರುವ ಹಣ್ಣುಗಳನ್ನು ಹೊರಗಡೆ ಬಿಸಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಧರ್ಮಪುರ ಹೋಬಳಿಯ ಶ್ರವಣಗೆರೆ, ಪಿ.ಡಿ.ಕೋಟೆ, ಕೋಡಿಹಳ್ಳಿ, ವೇಣುಕಲ್ಲುಗುಡ್ಡ, ಮುಂಗುಸುವಳ್ಳಿ, ಹಲಗಲದ್ದಿ ಮತ್ತಿತರ ಕಡೆ ಸೀಬೆ ಬೆಳೆದಿದ್ದು, ಎಲ್ಲಾ ಕಡೆ ರೈತರ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನೆರವಾಗಬೇಕು. ಬೆಂಬಲ ಬೆಲೆ ನಿಗದಿ ಮಾಡಬೇಕು. ಅಧಿಕಾರಿಗಳೇ ನೇರವಾಗಿ ರೈತರ ತೋಟಕ್ಕೆ ಹೋಗಿ ಹಣ್ಣುಕೊಂಡು ಮಾರುಕಟ್ಟೆಗೆ ಸಾಗಿಸುವ ಔದಾರ್ಯ ಮಾಡಬೇಕು. ಇಲ್ಲವೇ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಜಿ.ಶಿವಪ್ರಸಾದಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು