ಶುಕ್ರವಾರ, ಮೇ 7, 2021
19 °C
ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ಶಾಸಕ ಎಂ. ಚಂದ್ರಪ್ಪ ಖಡಕ್ ಎಚ್ಚರಿಕೆ

ಲಾಕ್‌ಡೌನ್ ಬಗ್ಗೆ ತಾತ್ಸಾರ ಮಾಡಿದರೆ ಕಠಿಣ ಕ್ರಮ: ಶಾಸಕ ಚಂದ್ರಪ್ಪ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಹೊಳಲ್ಕೆರೆ: ಲಾಕ್‌ಡೌನ್ ಬಗ್ಗೆ ತಾತ್ಸಾರ ಮಾಡಿದ್ದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಎಚ್ಚರಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬೆಳಿಗ್ಗೆ 10ರ ನಂತರ ಅಂಗಡಿಗಳು, ವೈಶಾಪ್‌ಗಳನ್ನು ಮುಚ್ಚಿಸಬೇಕು. ಜನ ಹೊರಗೆ ಬರಬಾರದು. ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುವ ಮೂಲಕ ರೋಗನಿಯಂತ್ರಣಕ್ಕೆ ಮುಂದಾಗಬೇಕು ಎಂದು
ಸೂಚಿಸಿದರು.

ಟಾಸ್ಕ್ ಫೋರ್ಸ್ ಸಮಿತಿ ಕೇವಲ ಪಟ್ಟಣದಲ್ಲಿ ಸಭೆ ನಡೆಸದೆ, ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲೂ ಸಭೆ ನಡೆಸಬೇಕು. ಗ್ರಾಮೀಣ ಭಾಗದ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಬೇಕು. ಕೋವಿಡ್ ರೋಗಿಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಕರ್ತವ್ಯದಲ್ಲಿ ಉದಾಸೀನ ತೋರಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಸದ ಎ. ನಾರಾಯಣ ಸ್ವಾಮಿ, ‘ಎಷ್ಟು ಬೇಕಾದರೂ ವ್ಯಾಕ್ಸಿನ್ ತರಿಸಿ ಕೊಡುತ್ತೇವೆ. ಪ್ರತಿ ಮನೆಗೂ ಲಸಿಕೆ ದೊರೆಯಬೇಕು. ರೋಗಿಗಳ ಸಂಖ್ಯೆ ಹೆಚ್ಚಾದರೆ ವಸತಿಶಾಲೆಗಳನ್ನು ಕೋವಿಡ್ ಕೇಂದ್ರಗಳಾಗಿ ಮಾಡಿ. ಮುಂದೆ 3ನೇ ಅಲೆ ಬರುತ್ತಿದ್ದು, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಮುಂದಿನ ಸವಾಲು ಎದುರಿಸಲು ಈಗಿನಿಂದಲೇ ಸಿದ್ಧರಾಗಬೇಕು. ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲಾ ಕಡೆ ಕೋವಿಡ್ ವಾರ್ ರೂಂ ಆರಂಭವಾಗಿದ್ದು, ಇಲ್ಲಿ ಏಕೆ ಆರಂಭಿಸಿಲ್ಲ’ ಎಂದು ಪ್ರಶ್ನಿಸಿದರು.

ತಹಶೀಲ್ದಾರ್ ರಮೇಶಾಚಾರಿ, ತಾಲ್ಲೂಕು ಪಂಚಾಯಿತಿ ಇಒ ಎಂ. ಗಂಗಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.