ಮಂಗಳವಾರ, ಜೂನ್ 22, 2021
27 °C
ಶೇ 50ರಷ್ಟು ಹಾಸಿಗೆ ಮೀಸಲು ಕಡ್ಡಾಯ, ಸಂಪೂರ್ಣ ಅನುಷ್ಠಾನಗೊಳ್ಳದ ಆದೇಶ

ಖಾಸಗಿ ಆಸ್ಪತ್ರೆ ಸೇವೆ: ಶಿಫಾರಸಿಗೆ ಸೀಮಿತ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ. ಎಲ್ಲ ವಾರ್ಡ್‌ಗಳಲ್ಲಿ ಕೋವಿಡ್ ರೋಗಿಗಳು ಭರ್ತಿಯಾಗಿದ್ದಾರೆ. ಬೇಕಿದ್ದರೆ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಅದಕ್ಕೆ ಶಿಫಾರಸು ಪತ್ರ ನೀಡುತ್ತೇವೆ. ಹಾಸಿಗೆ ಪಡೆಯುವುದು ನಿಮಗೆ ಬಿಟ್ಟಿದ್ದು...’

ಉಸಿರಾಟದ ಸಮಸ್ಯೆಯಿಂದ ಬಳಲಿ ಜಿಲ್ಲಾ ಆಸ್ಪತ್ರೆಗೆ ಬರುವ ಕೊರೊನಾ ಸೋಂಕಿತರಿಗೆ ಸಿಗುವ ಉತ್ತರವಿದು. ಶಿಫಾರಸು ಪತ್ರ ಪಡೆದು ಖಾಸಗಿ ಆಸ್ಪತ್ರೆಯ ಬಾಗಿಲು ಬಡಿದರೆ ಹಾಸಿಗೆ ಸಿಗುವ ಭರವಸೆ ಇಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಪತ್ರಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಬೆಲೆ ಇಲ್ಲ. ಶಿಫಾರಸುಗೊಂಡ ಇಂತಹ ರೋಗಿಗಳಿಗೆ ಹಾಸಿಗೆ ಸಿಗದೇ ಪರದಾಡಿದ ನಿದರ್ಶನಗಳಿವೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಜಿಲ್ಲೆಯಲ್ಲಿ 33 ಖಾಸಗಿ ಆಸ್ಪತ್ರೆಗಳು ನೋಂದಣಿ ಆಗಿವೆ. ಇವುಗಳಲ್ಲಿ ಕೇವಲ ಆರು ಆಸ್ಪತ್ರೆಗಳು ಮಾತ್ರ ಕೋವಿಡ್‌ ಚಿಕಿತ್ಸೆಗೆ ಅನುಮತಿ ಪಡೆದಿವೆ. ಈ ಆಸ್ಪತ್ರೆಯ ಶೇ 50ರಷ್ಟು ಅಂದರೆ 166 ಹಾಸಿಗೆಗಳು ಸರ್ಕಾರಿ ಕೋಟಾಗೆ ಸಿಗಬೇಕು. ವಾಸ್ತವವಾಗಿ 60 ಹಾಸಿಗೆ ಕೂಡ ಲಭ್ಯ ಆಗುತ್ತಿಲ್ಲ.

ಮೃಧು ಧೋರಣೆ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕೆಂದು ಸರ್ಕಾರ ಏಪ್ರಿಲ್‌ ಎರಡನೇ ವಾರ ಆದೇಶ ಹೊರಡಿಸಿದೆ. ಮೇ ತಿಂಗಳ ಮೊದಲ ವಾರ ಕಳೆದರೂ ಜಿಲ್ಲೆಯಲ್ಲಿ ಇದು ಅನುಷ್ಠಾನಕ್ಕೆ ಬರಲಿಲ್ಲ. ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮೇ 12ರಂದು ಆದೇಶ ಹೊರಡಿಸಿದ್ದಾರೆ.

ಕೊರೊನಾ ಸೋಂಕು ಸೃಷ್ಟಿಸಿದ ವಿಪತ್ತಿನ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು ಲಾಭಕೋರತನ ಪ್ರದರ್ಶಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹಾಸಿಗೆ, ಐಸಿಯು, ವೆಂಟಿಲೇಟರ್‌ ಸಹಿತ ಹಲವು ಮಾಹಿತಿಯನ್ನು ಮುಚ್ಚಿಟ್ಟು ತಿಂಗಳಿಂದ ರೋಗಿಗಳ ಸುಲಿಗೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತುಕ್ರಮ ಕೈಗೊಳ್ಳುವ ಅವಕಾಶವಿದ್ದರೂ ಜಿಲ್ಲಾಡಳಿತ ಚೌಕಾಸಿ ಮಾಡುತ್ತಿರುವಂತೆ ಕಾಣುತ್ತಿದೆ.

ಕೋವಿಡ್‌ ರೋಗಿಗಳು ಅತಂತ್ರ: ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕುಸಿದರೆ ಜಿಲ್ಲಾ ಆಸ್ಪತ್ರೆಯೇ ಆಸರೆ. ವೆಂಟಿಲೇಟರ್‌, ಆಮ್ಲಜನಕ ಸಹಿತ ಹಾಸಿಗೆ ಕೇಳಿಕೊಂಡು ಬರುವ ಸಾಮಾನ್ಯ ರೋಗಿಗಳಿಗೆ ಇಲ್ಲಿ ಪ್ರವೇಶವೇ ಸಿಗುತ್ತಿಲ್ಲ. ಹಾಸಿಗೆಗೆ ಕಾದು ಕುಳಿತು ನಿತ್ರಾಣಗೊಂಡವರು, ಆಂಬುಲೆನ್ಸ್‌ನಲ್ಲೇ ಮಲಗಿ ಚಿಕಿತ್ಸೆಗೆ ಕಾಯುವವರ ಸ್ಥಿತಿ ಧಾರುಣವಾಗಿದೆ.

ಇಂತಹ ರೋಗಿಗಳಿಗೆ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸೂಚಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ಹಣ ಪಾವತಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವವರು ಮನವಿ ಮಾಡಿದರೆ ಶಿಫಾರಸು ಪತ್ರ ಕೂಡ ನೀಡುತ್ತಾರೆ. ಶಿಫಾರಸು ಪತ್ರ ಹಿಡಿದು ಖಾಸಗಿ ಆಸ್ಪತ್ರೆ ಸಂಪರ್ಕಿಸಿದರೆ ಹಾಸಿಗೆ ಖಾಲಿ ಇಲ್ಲ ಎಂಬ ಉತ್ತರ ಸಿಗುತ್ತಿದೆ. ಹಾಸಿಗೆ ಸಿಗದೇ ಬಡವರು, ಗ್ರಾಮೀಣ ಪ್ರದೇಶದ ಜನರು ಅತಂತ್ರರಾಗುತ್ತಿದ್ದಾರೆ.

55 ಸೋಂಕಿತರಿಗೆ ಪ್ರಯೋಜನ: ಸರ್ಕಾರಿ ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡಿದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚದ ಹೊರೆ ಕಡಿಮೆ ಆಗಲಿದೆ. ಬಿಪಿಎಲ್‌ ಕುಟುಂಬದ ಸದಸ್ಯರಿಗೆ ಉಚಿತ ಚಿಕಿತ್ಸೆ ಸಿಗುತ್ತದೆ. ಎಪಿಎಲ್‌ ಕುಟುಂಬದ ಶೇ 30ರಷ್ಟು ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ’ (ಎಬಿಎಆರ್‌ಕೆ) ಸರ್ಕಾರ ಈ ಸೌಲಭ್ಯ ಕಲ್ಪಿಸಿಕೊಟ್ಟಿದೆ.

ಜಿಲ್ಲಾಧಿಕಾರಿ ಆದೇಶ ಹೊರಬಿದ್ದ ಬಳಿಕ 55 ಕೋವಿಡ್‌ ರೋಗಿಗಳಿಗೆ ಮಾತ್ರ ಎಬಿಎಆರ್‌ಕೆ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 34 ಹಾಗೂ ಸಿಎಂಎಚ್‌ ಆಸ್ಪತ್ರೆಯಲ್ಲಿ ಇನ್ನೂ ಕೆಲವರು ಚಿಕಿತ್ಸೆ ಪಡೆದಿದ್ದಾರೆ.

ಎರಡು ಆಸ್ಪತ್ರೆಯಲ್ಲಷ್ಟೇ ಚಿಕಿತ್ಸೆ: ಕೋವಿಡ್‌ಗೆ ಚಿಕಿತ್ಸೆ ನೀಡಲು ಅನುಮತಿ ಪಡೆದ ಆರು ಖಾಸಗಿ ಆಸ್ಪತ್ರೆಗಳ ಪೈಕಿ ಎರಡು ಆಸ್ಪತ್ರೆಗಳು ಮಾತ್ರ ಎಬಿಎಆರ್‌ಕೆ ಯೋಜನೆಯಡಿ ಚಿಕಿತ್ಸೆ ನೀಡುತ್ತಿವೆ. ಉಳಿದ ನಾಲ್ಕು ಆಸ್ಪತ್ರೆಗಳು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡುತ್ತಿವೆ.

ನಾಲ್ಕು ಆಸ್ಪತ್ರೆಗಳು ಸೂಕ್ತ ದಾಖಲೆಗಳನ್ನು ಒದಗಿಸುತ್ತಿಲ್ಲ. ಕೆಪಿಎಂಎ ಕಾಯ್ದೆಯಡಿ ನೋಂದಣಿ ಹೊಂದಿದ ವಿವರಗಳನ್ನು ಒದಗಿಸುತ್ತಿಲ್ಲ. ಹೀಗಾಗಿ, ಇಂತಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ಎಬಿಎಆರ್‌ಕೆ ಯೋಜನೆಯಡಿ ಚಿಕಿತ್ಸಾ ವೆಚ್ಚ ಸಿಗುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರೂ ಖಾಸಗಿ ಆಸ್ಪತ್ರೆಯಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು