ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: 800 ವಾರಿಯರ್‌ಗಳಿಗೆ ಇಂದು ಲಸಿಕೆ

ಎಂಟು ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಜ. 16ರಿಂದ ವಿದ್ಯುಕ್ತ ಚಾಲನೆ
Last Updated 15 ಜನವರಿ 2021, 14:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಹುನಿರೀಕ್ಷಿತ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ಕೆ ಜ.16ರಿಂದ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಮೊದಲ ದಿನವೇ 800 ಜನ ಕೊರೊನಾ ವಾರಿಯರ್‌ಗಳಿಗೆ ಲಸಿಕೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾ ಆಸ್ಪತ್ರೆ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ, ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಎಂಟು ಕೇಂದ್ರಗಳಲ್ಲಿ ತಲಾ 100 ಜನ ವಾರಿಯರ್‌ಗಳು ಶನಿವಾರ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಮೊದಲ ಹಂತದಲ್ಲಿ 15,680 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. 11 ಸಾವಿರ ಡೋಸ್‌ ಜಿಲ್ಲೆಗೆ ಬಂದಿದೆ. ಉಳಿದ 4,680 ವಾರಿಯರ್‌ಗಳಿಗೂ ಲಸಿಕೆ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಡೋಸ್‌ಗಳನ್ನು ಜಿಲ್ಲೆಗೆ ಕಳುಹಿಸಲಾಗುತ್ತಿದೆ.

ವೈಯಲ್‌ ಬಾಟಲಿಯಲ್ಲಿ 5 ಎಂ.ಎಲ್ ಕೋವಿಶೀಲ್ಡ್‌ ಲಸಿಕೆ ಇದೆ. ಇದನ್ನು ಒಬ್ಬರಿಗೆ 0.5 ಎಂ.ಎಲ್‌ನಂತೆ 10 ಜನರಿಗೆ ನೀಡಬಹುದಾಗಿದೆ. ಸುರಕ್ಷತೆ ದೃಷ್ಟಿಯಿಂದ ಲಸಿಕೆ ಡೋಸ್‌ಗಳನ್ನು ವ್ಯಾಕ್ಸಿನ್ ಕೂಲರ್ ಐಎಲ್‌ಆರ್‌, ವಾಕಿಂಗ್‌ ಕೂಲರ್‌ನಲ್ಲಿ ಸಂಗ್ರಹಿಸಿ ಇಡಲಾಗಿದೆ.

ಪ್ರಧಾನಿ ನರೇಂದ್ರಮೋದಿ ಅವರು ಲಸಿಕೆ ವಿತರಣೆಗೆ ವೆಬಿನಾರ್‌ ಮೂಲಕ ಚಾಲನೆ ನೀಡಲಿದ್ದಾರೆ. ಇದಾದ ನಂತರ ಜಿಲ್ಲೆಯ ಎಂಟು ಕೇಂದ್ರಗಳಲ್ಲೂ ಬೆಳಿಗ್ಗೆ 9.30ಕ್ಕೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ.

‘ಜಿಲ್ಲೆಯಲ್ಲಿ ಲಸಿಕೆ ನೀಡಲು 197 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ 187 ಲಸಿಕಾಧಿಕಾರಿಗಳನ್ನು ನೇಮಿಸಲಾಗಿದೆ. ಜ. 18ರಿಂದ 106 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಡಿಎಚ್‌ಒ ಡಾ.ಫಾಲಾಕ್ಷ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು ಹಾಗೂ ಗ್ರೂಪ್‌ ‘ಡಿ’ ನೌಕರರಿಗೆ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ ಪೊಲೀಸ್, ಕಂದಾಯ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡುತ್ತಿದ್ದೇವೆ. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಸರ್ಕಾರಿ ಸಂಸ್ಥೆಯ 8,760 ಹಾಗೂ ಖಾಸಗಿ ಆರೋಗ್ಯ ಸಂಸ್ಥೆಯ 6,920 ಫಲಾನುಭವಿಗಳು ಇದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT