ಬುಧವಾರ, ಮೇ 12, 2021
19 °C
ನಗರದಲ್ಲಿರುವ ಕೋವಿಡ್ ಲಸಿಕೆ ಹಾಕುವ ಕೇಂದ್ರಗಳಿಗೆ ನಿತ್ಯವೂ ಜನರ ಅಲೆದಾಟ

ಹಿರಿಯೂರು: ಎರಡನೇ ಡೋಸ್ ಲಸಿಕೆಗಾಗಿ ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ಹುಳಿಯಾರು ರಸ್ತೆಯ ನಗರ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಇದೆಯೇ? ನಂಜಯ್ಯನಕೊಟ್ಟಿಗೆಯಲ್ಲಿ ಹಾಕುತ್ತಿದ್ದಾರಂತೆ, ಆದಿವಾಲದಲ್ಲಿ ಹೆಚ್ಚಿನ ರಷ್ ಇಲ್ಲವಂತೆ, ಇವತ್ತು ರಾತ್ರಿ ಬರುತ್ತಂತೆ ನಾಳೆ ಲಸಿಕೆ ಹಾಕುತ್ತಾರಂತೆ, ಎರಡನೇ ಡೋಸ್ ಹಾಕಿಸಿಕೊಳ್ಳುವುದು ತಡವಾದರೆ ಏನೂ ಆಗುವುದಿಲ್ಲವೇ...?’

ನಗರದಲ್ಲಿರುವ ಕೋವಿಡ್ ಲಸಿಕೆ ಹಾಕುವ ಕೇಂದ್ರಗಳ ಮುಂದೆ ಕ್ಷಣ ಹೊತ್ತು ನಿಂತರೆ ಮೇಲಿನ ಪ್ರಶ್ನೆಗಳು ಸಹಜವಾಗಿ ಕಿವಿಗೆ ಬೀಳುತ್ತವೆ. ಆದರೆ, ಖಚಿತ ಉತ್ತರ ಮಾತ್ರ ಯಾರಿಂದಲೂ ಸಿಗುತ್ತಿಲ್ಲ. ಹುಳಿಯಾರು ರಸ್ತೆಯಲ್ಲಿರುವ ನಗರ ಆರೋಗ್ಯ ಕೇಂದ್ರದ ಹೊರಗೆ ‘ವ್ಯಾಕ್ಸಿನೇಷನ್ ಇರುವುದಿಲ್ಲ. ವ್ಯಾಕ್ಸಿನ್ ಖಾಲಿಯಾಗಿರುತ್ತದೆ’ ಎಂಬ ಫಲಕ ನೋಡಿ ಸರ್ಕಾರವನ್ನು ಶಪಿಸುತ್ತಾ ಬರುವವರೇ ಹೆಚ್ಚು.

ನಾಲ್ಕು ದಿನಗಳಿಂದ ಲಸಿಕೆ ಬಂದಿಲ್ಲ: ‘ಚಿತ್ರದುರ್ಗ ಜಿಲ್ಲೆಗೆ ನಾಲ್ಕು ದಿನಗಳಿಂದ ಲಸಿಕೆ ಸರಬರಾಜು ಆಗಿಲ್ಲ. ಜಿಲ್ಲೆಗೆ ಬಂದರೆ ತಕ್ಷಣ ತಾಲ್ಲೂಕಿಗೆ ಕಳುಹಿಸುತ್ತಾರೆ. ತಾಲ್ಲೂಕಿನ 20 ಆರೋಗ್ಯ ಕೇಂದ್ರ, ಒಂದು ಸಮುದಾಯ ಹಾಗೂ ಒಂದು ತಾಲ್ಲೂಕು ಆಸ್ಪತ್ರೆಯಲ್ಲಿ ಇದುವರೆಗೂ 57 ಸಾವಿರ ಜನರಿಗೆ (80 ಸಾವಿರ ಗುರಿ) ಮೊದಲ ಡೋಸೇಜ್ ಲಸಿಕೆ ಹಾಕಲಾಗಿದೆ. ಶೇ 30ರಷ್ಟು ಜನರಿಗೆ ಎರಡನೇ ಡೋಸೇಜ್ ಹಾಕಬೇಕಿದೆ. 45 ವರ್ಷ ಮೇಲ್ಪಟ್ಟ ಇನ್ನೂ 23 ಸಾವಿರ ಜನರಿಗೆ ಮೊದಲ ಡೋಸೇಜ್ ಕೊಡಬೇಕಿದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್.

‘ರಾಜ್ಯದಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆ ಜನರಿಗೆ ಸಿಗುತ್ತಿಲ್ಲ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆ ಎಂದು ಸರ್ಕಾರ ಹೇಳಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ವಿಫಲವಾಗಿರುವ ಸರ್ಕಾರ 18 ವರ್ಷ ಮೇಲ್ಪಟ್ಟವರನ್ನು ಆಸ್ಪತ್ರೆಗಳಿಗೆ ಅಲೆಯುವಂತೆ ಮಾಡಿದೆ. ಎರಡನೇ ಡೋಸೇಜ್ ಲಸಿಕೆ ಹಾಕಿಸಿಕೊಳ್ಳುವುದು ತಡವಾದರೆ ಆಗುವ ಪರಿಣಾಮದ ಬಗ್ಗೆ ವೈದ್ಯರು ಸ್ಪಷ್ಟಪಡಿಸಬೇಕು. ಸರ್ಕಾರ ತಕ್ಷಣ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಆದ್ಯತೆ ನೀಡಬೇಕು’ ಎಂದು ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು