ಶುಕ್ರವಾರ, ಜೂನ್ 25, 2021
27 °C

ಅವ್ಯವಸ್ಥೆ ಸರಿಪಡಿಸದಿದ್ದರೆ ಸಚಿವರಿಗೆ ಘೇರಾವ್: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಜಿಲ್ಲೆಯಲ್ಲಿನ ಕೋವಿಡ್ ಕೇಂದ್ರಗಳ ಅವ್ಯವಸ್ಥೆ ಸರಿಪಡಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರಿಗೆ ಘೇರಾವ್ ಹಾಕಲಾಗುವುದು’ ಎಂದು ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಡಿ. ಕುಮಾರ್ ಎಚ್ಚರಿಸಿದ್ದಾರೆ.

‘ಜಿಲ್ಲಾ ಆಸ್ಪತ್ರೆ ಆವರಣದ ಕೋವಿಡ್ ಕೇಂದ್ರದ ಅವ್ಯವಸ್ಥೆಯನ್ನು ಕೊರೊನಾ ಸೋಂಕು ತಗುಲಿ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ವಕೀಲರೊಬ್ಬರು ವಿಡಿಯೊ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣಗೊಳಿಸಿದ್ದಾರೆ. ಇದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ’ ಎಂದು ದೂರಿದ್ದಾರೆ.

‘ಜಿಲ್ಲೆಯ ಅಂಕಿ–ಅಂಶಗಳ ಪ್ರಕಾರ ಕೋವಿಡ್ ನಿಯಂತ್ರಣದಲ್ಲಿದೆ ಎಂಬ ತಪ್ಪು ಮಾಹಿತಿ ನೀಡಲಾಗುತ್ತಿದೆ. ವಾಸ್ತವದಲ್ಲಿ ಕೋವಿಡ್‌ನ ತೀವ್ರತೆ ಹೆಚ್ಚಾಗಿದೆ. ಜಿಲ್ಲೆ ಹಾಗೂ ರಾಜ್ಯದ ವರದಿಯಲ್ಲಿ ಸೋಂಕಿತರ ಸಂಖ್ಯೆ ತಾಳೆಯಾಗುತ್ತಿಲ್ಲ. ಜಿಲ್ಲಾಡಳಿತ ಈ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ’ ಎಂದು ಅಸಮಧಾನ ಹೊರಹಾಕಿದ್ದಾರೆ.

‘ಸೋಂಕಿತರ ಸೂಕ್ತ ಚಿಕಿತ್ಸೆಗೆ ಎಲ್ಲ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಹೇಳುತ್ತಿದ್ದಾರೆ. ಆದರೆ, ಯಾವುದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಇದರಿಂದಾಗಿ ನಿತ್ಯ ಕೊರೊನಾ ಸೋಂಕಿತರು ಕೋವಿಡ್ ಕೇಂದ್ರಗಳ ಮುಂಭಾಗ ಆಂಬುಲೆನ್ಸ್‌ನೊಳಗೆ ಹಗಲು–ರಾತ್ರಿ ಕಳೆಯುವ ಸ್ಥಿತಿ ಎದುರಾಗಿದೆ’ ಎಂದು ವ್ಯವಸ್ಥೆಯನ್ನು ದೂಷಿಸಿದ್ದಾರೆ.

‘ಜಿಲ್ಲೆಯನ್ನು ಸಚಿವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ಜಿಲ್ಲೆಗೆ ಆಮ್ಲಜನಕ ಘಟಕ ಕೈತಪ್ಪಿದೆ. ಎರಡನೇ ಹಂತದಲ್ಲಿ ಜಿಲ್ಲೆಗೆ ಘಟಕ ಬರಲಿದೆ ಎಂದು ಅವರೇ ಹೇಳುತ್ತಿದ್ದಾರೆ. ಅಷ್ಟೊತ್ತಿಗೆ ಹೆಚ್ಚಿನ ಸಾವು–ನೋವು ಸಂಭವಿಸಿದರು ಅಚ್ಚರಿಪಡಬೇಕಿಲ್ಲ. ಐಸಿಯು ವ್ಯವಸ್ಥೆಯ ಜತೆಗೆ ಆಮ್ಲಜನಕ ಸಹಿತ ಹಾಸಿಗೆಗೆ ಎಲ್ಲಿಯೂ ಕೊರತೆ ಉಂಟಾಗದಂತೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು