ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಸಂಕ್ಷಣೆಗೆ ಕೈಜೋಡಿಸಲು ಮನವಿ

ದೇಸಿ ಗೀರ್ ತಳಿ ಹಸು ಹಾಲಿನ ಕೇಂದ್ರ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ
Last Updated 11 ಜುಲೈ 2021, 14:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಗೀರ್‌ ಹಸುವಿನ ಹಾಲು ಖರೀದಿಸುವ ಮೂಲಕ ದೇಸಿ ಹಸುಗಳ ಸಾಕಾಣೆದಾರರನ್ನು ಪ್ರೋತ್ಸಾಹಿಸಬೇಕು ಹಾಗೂ ದೇಸಿ ಗೋವುಗಳ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.

ಇಲ್ಲಿನ ಜೆಸಿಆರ್‌ ಬಡಾವಣೆಯ ಮುಖ್ಯರಸ್ತೆಯ ಸಾಯಿಬಾಬಾ ದೇಗುಲದ ಸಮೀಪ ತೆರೆದ ‘ದುರ್ಗಾಂಬಾಮೃತ ಎ2ಮಿಲ್ಕ್‌’ ಹಾಲಿನ ಮಳಿಗೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಸಿ ಗೋವುಗಳ ಸಂರಕ್ಷಣೆಯ ಉದ್ದೇಶದಿಂದ ಗೀರ್ ಹಸುಗಳ ಸಾಕಾಣಿಕೆದಾರರ ಸಹಕಾರ ಸಂಘ ಸ್ಥಾಪಿಸಲಾಗಿದೆ. ಹಾಲಿನ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುವುದು. ಮುಂದೆ ಇದನ್ನು ರಾಜ್ಯಕ್ಕೆ ವಿಸ್ತರಿಸುವ ಆಲೋಚನೆ ಇದೆ. ಈ ಹಾಲಿನ ಉತ್ಪನ್ನಗಳು ರೋಗ ನಿರೋಧಕ ಶಕ್ತಿ ಹೊಂದಿವೆ’ ಎಂದು ಹೇಳಿದರು.

‘ಹಾಲಿನ ಗುಣಮಟ್ಟ ಪರೀಕ್ಷಿಸಿ ರೈತರಿಂದ ನೇರವಾಗಿ ಖರೀದಿಸಲಾಗುವುದು. ಮಾರಾಟದ ಬೆಲೆಯನ್ನು ಲೀಟರ್‌ಗೆ ₹ 75 ನಿಗದಿಪಡಿಸಲಾಗಿದೆ. ಮನೆಗೆ ನೇರವಾಗಿ ತಲುಪಿಸುವ ವ್ಯವಸ್ಥೆಯೂ ಇದೆ. ಬೆಣ್ಣೆ, ತುಪ್ಪ ಸೇರಿ ಇತರ ಉಪ ಉತ್ಪನ್ನಗಳೂ ಲಭ್ಯ ಆಗಲಿವೆ. ಇವುಗಳನ್ನು ಖರೀದಿಸಿದರೆ ದೇಸಿ ತಳಿ ಸಾಕಣೆಗೆ ಪ್ರೋತ್ಸಾಹ ಸಿಗಲಿದೆ’ ಎಂದರು.

ಸದ್ಗುರು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಗೋವಿನಲ್ಲಿ ದೇವರನ್ನು ಕಾಣುತ್ತೇವೆ. ಗೋವು ಸಾಕಣೆ ಮಾಡುವುದರಿಂದ ರೋಗಗಳು ಸುಳಿಯುವುದಿಲ್ಲ. ಆರೋಗ್ಯವೂ ಚೆನ್ನಾಗಿರುತ್ತದೆ’ ಎಂದು ಹೇಳಿದರು.

ರಾಜರಾಜೇಶ್ವರಿ ದೇವಸ್ಥಾನದ ನಾಗರಾಜ್ ಭಟ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ಬಾಬುರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಇದ್ದರು.

***

ದೇಸಿ ತಳಿಯ 85 ಗೀರ್‌ ಹಸುಗಳನ್ನು ಸಾಕಣೆ ಮಾಡುತ್ತಿದ್ದೇನೆ. ಆಸಕ್ತಿ ಹಾಗೂ ಶ್ರದ್ಧೆಯಿಂದ ಹೈನುಗಾರಿಕೆ ಮಾಡಿದರೆ ಯಶಸ್ಸು ಖಂಡಿತ ಸಿಗಲಿದೆ.

ನಿಶಾನಿ ಎಂ. ಜಯಣ್ಣ, ಗೀರ್‌ ಹಸು ಸಾಕಣೆದಾರ

***

ದೇಸಿ ಹಸುಗಳ ಉತ್ಪನ್ನ ಬಳಕೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಈ ಹಸು ಸಾಕಣೆಯಿಂದ ಸಾವಯವ ಕೃಷಿ ಪದ್ಧತಿಗೆ ಸಹಕಾರಿಯಾಗಲಿದೆ.

ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT