ಮಂಗಳವಾರ, ಜನವರಿ 18, 2022
15 °C
ಸಚಿವ ಎ. ನಾರಾಯಣಸ್ವಾಮಿ ಆಶ್ವಾಸನೆ

ದಕ್ಕಲಿಗರಿಗೆ ವಸತಿ, ಭೂಮಿ ಸೌಲಭ್ಯ ಶೀಘ್ರ: ಸಚಿವ ಎ. ನಾರಾಯಣಸ್ವಾಮಿ ಆಶ್ವಾಸನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವ ದಕ್ಕಲಿಗ ಸಮುದಾಯಕ್ಕೆ ಭೂಮಿ ಮತ್ತು ವಸತಿ ಸೌಲಭ್ಯವನ್ನು ಶೀಘ್ರವೇ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಸಲಾಗುವುದು. ಸಮಸ್ಯೆಗಳ ಇತ್ಯರ್ಥಕ್ಕೆ ನೋಡಲ್‌ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಆಶ್ವಾಸನೆ ನೀಡಿದರು.

ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಟ್ರಸ್ಟ್‌ ವತಿಯಿಂದ ಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಕ್ಕಲಿಗ ಸಮಾಜದ ರಾಜ್ಯಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದಕ್ಕಲಿಗ ಸಮುದಾಯ ವಾಸಿಸುವಲ್ಲಿಯೇ ನೆಲೆ ಕಲ್ಪಿಸಿಕೊಡಲು ಶ್ರಮಿಸಲಾಗುವುದು. ಆಧಾರ್, ಪಡಿತರ, ಜಾತಿ ಪ್ರಮಾಣಪತ್ರ, ಭೂಮಿ, ನಿವೇಶನ ಸೇರಿ ಎಲ್ಲ ಸವಲತ್ತುಗಳನ್ನು ನೋಡಲ್‌ ಅಧಿಕಾರಿ ಪರಿಶೀಲಿಸಿ ಕ್ರಮ ಜರುಗಿಸಲಿದ್ದಾರೆ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳಲ್ಲಿ ದಕ್ಕಲಿಗರೂ ಸೇರಿದ್ದಾರೆ. ಗೆಜೆಟ್‌ ನೋಟಿಫಿಕೇಷನ್‌ನಲ್ಲಿಯೂ ಜಾತಿ ಉಲ್ಲೇಖವಾಗಿದೆ. ಹೀಗಿದ್ದರೂ ದಕ್ಕಲಿಗ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂಬುದು ಸೋಜಿಗದ ಸಂಗತಿ. ಜಿಲ್ಲಾಧಿಕಾರಿಗಳೊಂದಿಗೆ ನಡೆಯುವ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗುವುದು. ಇನ್ನು ಮುಂದೆ ಜಾತಿ ಪ್ರಮಾಣ ಸಿಗುತ್ತಿಲ್ಲ ಎಂಬ ಆಕ್ಷೇಪ ಕೇಳಿಬರದಂತೆ ಎಚ್ಚರ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

‘ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ಆದಿಜಾಂಬವ ಅಭಿವೃದ್ಧಿ ನಿಗಮದಲ್ಲಿ ಅಲೆಮಾರಿಗಳಿಗೆ ಶೇ 1ರಷ್ಟು ಮೀಸಲಾತಿ ಸೌಲಭ್ಯವಿದೆ. ಪರಿಶಿಷ್ಟ ಜಾತಿಯಲ್ಲಿರುವ ಈ ಅನುದಾನದಲ್ಲಿ ಒಂದು ರೂಪಾಯಿ ಕೂಡ ಬಳಕೆ ಆಗಿಲ್ಲ. ಈ ನಿಗಮಗಳಿಗೆ ಅರ್ಜಿ ಹಾಕಿ. ನೀವು ಇರುವ ಸ್ಥಳದಲ್ಲೇ ಸವಲತ್ತು ಕಲ್ಪಿಸಲಾಗುವುದು. ಸರ್ಕಾರಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿಯಲ್ಲಿ ಅವಕಾಶ ನೀಡಲಾಗುವುದು’ ಎಂದು ನುಡಿದರು.

ವೈವಾಹಿಕ ಸಂಬಂಧ ಬೆಳೆಯಲಿ: ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ, ‘ಸಮಾಜದಲ್ಲಿ ಮಾದಿಗರೇ ಅಸ್ಪೃಶ್ಯರು. ಇಂತಹ ಮಾದಿಗ ಸಮುದಾಯಕ್ಕೆ ದಕ್ಕಲಿಗರು ಅಸ್ಪೃಶ್ಯರು. ಈ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂಬುದನ್ನು ಹೇಳುವಾಗ ನೋವಾಗುತ್ತದೆ. ಮಾದಿಗರು, ದಕ್ಕಲಿಗರು ಬೇರೆ ಅಲ್ಲ. ಒಂದೇ ಜಾತಿ. ಮಾದಿಗರು–ದಕ್ಕಲಿಗರ ನಡುವೆ ವೈವಾಹಿಕ ಸಂಬಂಧ ಬೆಳೆಯಬೇಕು’ ಎಂಬ ಆಶಯ
ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿಗೆ ಶೇ 15ರಷ್ಟು ಮೀಸಲಾತಿ ಸೌಲಭ್ಯವಿದೆ. ಈ ಮೀಸಲು ಪಟ್ಟಿಯಲ್ಲಿ 101 ಜಾತಿಗಳಿವೆ. ಇದರಲ್ಲಿ ನಾಲ್ಕು ಜಾತಿಗಳು ಮಾತ್ರ ಮೀಸಲಾತಿ ಸೌಲಭ್ಯದ ಬಹುಪಾಲು ಪಡೆದಿವೆ. ಉಳಿದ 97 ಜಾತಿಯವರಿಗೆ ಏನೂ ಸಿಕ್ಕಿಲ್ಲ. ಮೀಸಲು ಸೌಲಭ್ಯ ಎಲ್ಲರಿಗೂ ಸಿಗುವಂತೆ ಮಾಡುವುದೇ ಆಡಳಿತ. ಇದನ್ನು ಯಾವ ರೀತಿ ಸರಿಪಡಿಸಬಹುದು ಎಂಬುದರ ಬಗ್ಗೆ ಎಲ್ಲರೂ ಚಿಂತನೆ ಮಾಡುವ ಅಗತ್ಯವಿದೆ’ ಎಂದರು.

‘ಚಿಕ್ಕಂದಿನಿಂದ ದಕ್ಕಲಿಗ ಸಮುದಾಯದೊಂದಿಗೆ ಒಡನಾಟವಿದೆ. ಈ ಎಲ್ಲ ಕುಟುಂಬಗಳು ನಮ್ಮ ಜಿಲ್ಲೆಗೆ ಬಂದರೆ ಭೂಮಿ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಸಿದ್ಧರಿದ್ದೇವೆ. ನೀವು ಇರುವ ಸ್ಥಳದಲ್ಲೇ ಭೂಮಿ ಮತ್ತು ವಸತಿ ಸೌಲಭ್ಯ ಬೇಕು ಎಂಬುದಾದರೆ ಅದಕ್ಕೆ ನೆರವು ನೀಡಲು ತಯಾರಿದ್ದೇನೆ’
ಎಂದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಬಳ್ಳಾರಿ ಹನುಮಂತಪ್ಪ, ದಕ್ಕಲಿಗ ಸಮಾಜದ ಅಧ್ಯಕ್ಷ ಡಿ. ಶಾಂತರಾಜು
ಇದ್ದರು.

....

ಕಿನ್ನರಿ’ ಎಂಬ ತಂತಿವಾದ್ಯವನ್ನು ದಕ್ಕಲಿಗರು ನುಡಿಸುತ್ತಾರೆ. ಜಾಂಬವ ಪುರಾಣವನ್ನು ಉತ್ತಮವಾಗಿ ಪ್ರಸ್ತುತಪಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ಆಶೋತ್ತರಗಳಿಗೆ ಸರ್ಕಾರ ಸ್ಪಂದಿಸುವ ಅಗತ್ಯವಿದೆ.

- ವಾದಿರಾಜ್‌, ಸಂಚಾಲಕರು ಸಾಮರಸ್ಯ ವೇದಿಕೆ

.....

ದಕ್ಕಲಿಗ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುತ್ತಿಲ್ಲ. ಬಡತನ, ದಾಖಲಾತಿಗಳ ಕೊರತೆಯ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಇವರ ನೋವಿಗೆ ಸರ್ಕಾರ ಸ್ಪಂದಿಸಬೇಕು.

- ಪರಶುರಾಮ್‌, ಎಂಬಿಎ ಪದವೀಧರ, ದಾವಣಗೆರೆ

...

‘5.5 ಲಕ್ಷ ಕುಟುಂಬಕ್ಕೆ ನೆಲೆ, ನೆಲ ಇಲ್ಲ’

ಪರಿಶಿಷ್ಟ ಜಾತಿಗೆ ಸೇರಿದ 1.27 ಕೋಟಿ ಜನಸಂಖ್ಯೆ ರಾಜ್ಯದಲ್ಲಿದೆ. ಸುಮಾರು 28 ಲಕ್ಷ ಕುಟುಂಬಗಳು ನೆಲೆಸಿವೆ. ಇದರಲ್ಲಿ 5.5 ಲಕ್ಷ ಕುಟುಂಬಗಳಿಗೆ ನೆಲೆಯೂ ಇಲ್ಲ, ನೆಲವೂ ಇಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಸರ ವ್ಯಕ್ತಪಡಿಸಿದರು.

‘ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಜೀವನ ಕಟ್ಟಿಕೊಡುವ ಯೋಜನೆ ರೂಪಿಸುವುದು ಸರ್ಕಾರದ ಜವಾಬ್ದಾರಿ. ಎಲ್ಲರಿಗೂ ಭೂಮಿ ಹಕ್ಕುಪತ್ರ, ಸ್ವಂತ ನಿವೇಶನ ಇರಬೇಕು ಎಂಬ ಆಶಯವನ್ನು ಸರ್ಕಾರ ಹೊಂದಿದೆ. ಮನೆ, ಕುಡಿಯುವ ನೀರು, ಶಿಕ್ಷಣ, ಶೌಚಾಲಯ ಸೇರಿ ಎಲ್ಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಬಡವರಿಗೆ ಖರ್ಚು ಮಾಡಲಾಗುವುದು’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.