ಮೇಲ್ದರ್ಜೆಗೇರದ ಧರ್ಮಪುರ ಪಶುಚಿಕಿತ್ಸಾಲಯ

ಧರ್ಮಪುರ: ಪಶು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲು ಬೇಕಿರುವ ಎಲ್ಲ ಮಾನದಂಡಗಳು ಇದ್ದರೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಧರ್ಮಪುರ ಪಶು ಚಿಕಿತ್ಸಾಲಯ ಇನ್ನೂ ನನೆಗುದಿಗೆ ಬಿದ್ದಿದೆ.
ತಾಲ್ಲೂಕಿನಲ್ಲಿ ದೊಡ್ಡ ಹೋಬಳಿ ಯಾಗಿರುವ ಧರ್ಮಪುರ ಗಡಿ ಪ್ರದೇಶವೂ ಹೌದು. ಇಲ್ಲಿ 10 ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. 1 ಲಕ್ಷಕ್ಕೂ ಹೆಚ್ಚು ಕುರಿ–ಮೇಕೆಗಳಿವೆ. 2005ರಿಂದಲೂ ಇಲ್ಲಿಯ ಪಶುಚಿಕಿತ್ಸಾಲಯವನ್ನು ಮೇಲ್ದರ್ಜೆಗೇರಿಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈವರೆಗೂ ಫಲಪ್ರದವಾಗದೇ ಇರುವುದರಿಂದ ಈ ಭಾಗದ ಕುರಿಗಾಹಿಗಳು ಮತ್ತು ರೈತರು ಅಸಮಾಧಾನಗೊಂಡಿದ್ದಾರೆ.
ಸರ್ಕಾರದ ಮಾನದಂಡ: ಪಶು ಆಸ್ಪತ್ರೆಯಾಗಲಿಕ್ಕೆ ಹೋಬಳಿ ಕೇಂದ್ರವಾಗಿರಬೇಕು. ರೈತ ಸಂಪರ್ಕ ಕೇಂದ್ರ ಇರಬೇಕು ಎಂಬ ಮಾನದಂಡವಿದೆ. ಧರ್ಮಪುರ ಹೋಬಳಿ ಕೇಂದ್ರವೂ ಹೌದು. ಜತೆಗೆ ಇಲ್ಲಿ ರೈತ ಸಂಪರ್ಕ ಕೇಂದ್ರವೂ ಇದೆ. ಆದರೆ, ಈ ಭಾಗದ ರೈತರ ಬೇಡಿಕೆ ‘ನರಿ ಕೂಗು ಗಿರಿಗೆ ಮುಟ್ಟೀತೇ’ ಎಂಬಂತಾಗಿದೆ.
ಈ ಭಾಗದಲ್ಲಿ ಹೆಚ್ಚು ಜಾನುವಾರು, ಕುರಿ, ಮೇಕೆಗಳಿರುವುದರಿಂದ ಅವಶ್ಯಕವಾಗಿ ಬೇಕಾಗಿರುವ ಜಂತು ನಾಶಕ ಔಷಧ 2019ರಿಂದಲೂ ಕುರಿ ಮಂಡಳಿಂದ ಪೂರೈಕೆಯಾಗದೇ ಇರುವುದೂ ಪಶುಪಾಲಕರಿಗೆ ಸಮಸ್ಯೆ ಉಂಟು
ಮಾಡಿದೆ.
ಪಶು ಆಸ್ಪತ್ರೆ: ‘ಹೋಬಳಿಯಲ್ಲಿ ರಂಗೇನಹಳ್ಳಿ, ಹೂವಿನಹೊಳೆ, ಧರ್ಮಪುರ, ಹರಿಯಬ್ಬೆಯಲ್ಲಿ ಪಶು ಚಿಕಿತ್ಸಾಲಯಗಳು, ಖಂಡೇನಹಳ್ಳಿ, ಈಶ್ವರಗೆರೆ, ಕೋಡಿಹಳ್ಳಿಯಲ್ಲಿ ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಇಲ್ಲಿನ ಪಶು ಚಿಕಿತ್ಸಾಲಯ ಪಶು ಆಸ್ಪತ್ರೆಯಾಗಿ ಮಾರ್ಪಾಡಾದರೆ ಒಬ್ಬರು ಮುಖ್ಯ ಪಶು ವೈದ್ಯಾಧಿಕಾರಿ, ಒಬ್ಬರು ಜಾನುವಾರು ಅಧಿಕಾರಿ, ಒಬ್ಬರು ಜಾನುವಾರು ಪರೀಕ್ಷಕ, ಎರಡು ‘ಡಿ’ ಗ್ರೂಪ್ ಹುದ್ದೆಗಳು ಬರುತ್ತವೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ’ ಎಂದು ಪ್ರಗತಿಪರ ರೈತ ಮದ್ದಿಹಳ್ಳಿ ಕೆ. ದೊಡ್ಡಯ್ಯ ಒತ್ತಾಯಿಸಿದರು.
‘ಹಿರಿಯೂರು ತಾಲ್ಲೂಕಿನಲ್ಲಿ ಐಮಂಗಲ ಮತ್ತು ಜವನಗೊಂಡನಹಳ್ಳಿ ಹೋಬಳಿ ಕೇಂದ್ರಗಳಲ್ಲಿನ ಪಶು ಚಿಕಿತ್ಸಾಲಯಗಳನ್ನು ಈಗಾಗಲೇ ಮೇಲ್ದರ್ಜೆಗೇರಿಸಲಾಗಿದೆ. ಗಡಿ, ದೊಡ್ಡ ಹೋಬಳಿಯಾಗಿರುವ ಧರ್ಮಪುರದಲ್ಲಿನ ಪಶುಚಿಕಿತ್ಸಾಲಯ ಒಂದು ಸಣ್ಣ ಕೊಠಡಿಯಲ್ಲಿಯೇ ಮುಂದುವರಿದಿದ್ದು, ಮೇಲ್ದರ್ಜೆಗೇರಿಲ್ಲ. ಇದರಿಂದ ನಮಗೆ ಸಿಗಬೇಕಾದ ಸೌಲಭ್ಯಗಳು ಇಲ್ಲದೆ ವಂಚಿತರಾಗಿದ್ದೇವೆ’ ಎಂದು ಬೆಟ್ಟಗೊಂಡನಹಳ್ಳಿಯ ರೈತ ಪುಟ್ಟರಾಜು
ಆರೋಪಿಸಿದ್ದಾರೆ.
ಪಶು ಆಸ್ಪತ್ರೆ ಪ್ರಸ್ತಾವ ಆಗಿದೆ
‘ಧರ್ಮಪುರದಲ್ಲಿನ ಪಶು ಚಿಕಿತ್ಸಾಲಯವನ್ನು ಪಶು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವ ಕಳುಹಿಸಲಾಗಿದೆ. ಜಂತು ನಾಶಕ ಔಷಧ ಒಂದು ವರ್ಷದಿಂದ ಪೂರೈಕೆಯಾಗಿಲ್ಲ. ಉಳಿದಂತೆ ಬೇರೆ ಔಷಧಗಳು ಲಭ್ಯವಿವೆ. ಯಾವುದೇ ತೊಂದರೆ ಇಲ್ಲ. ಜುಲೈ ತಿಂಗಳು ಪೂರ್ತಿ ಕುರಿ ಲಸಿಕೆ ಅಭಿಯಾನವಿದ್ದು ಕುರಿಗಾಹಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹನುಮಪ್ಪ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.