ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಶ್ರೀಗಂಧ ಬೆಳೆಯಬೇಡಿ, ರೈತನ ಬಿನ್ನಹ

ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ರೈತ ಅಸಮಾಧಾನ
Last Updated 5 ನವೆಂಬರ್ 2020, 2:23 IST
ಅಕ್ಷರ ಗಾತ್ರ
ADVERTISEMENT
""

ಹೊಳಲ್ಕೆರೆ: ತಾಲ್ಲೂಕಿನ ಉಪ್ಪರಿಗೇನಹಳ್ಳಿಯ ರೈತ ದಿನೇಶ್ ಅವರ ಹೊಲದಲ್ಲಿ ಬೆಳೆದಿದ್ದ 10 ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಚಿತ್ರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವ ರೈತ ಭದ್ರತೆ ಒದಗಿಸುವಂತೆ ಕೋರಿದ್ದಾರೆ.

ರೈತ ದಿನೇಶ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೊ ಮಾಡಿ ಈ ಬಗ್ಗೆ ಅಳಲು ತೋಡಿಕೊಂಡಿದ್ದು, ಜನಪ್ರತಿನಿಧಿಗಳು, ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರೈತ ಇಡೀ ದೇಶಕ್ಕೆ ಅನ್ನ ನೀಡುತ್ತಾನೆ. 2001ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಶ್ರೀಗಂಧವನ್ನು ಬೆಳೆಯಲು ರೈತರಿಗೆ ಅವಕಾಶ ನೀಡಲಾಯಿತು. 2010ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶ್ರೀಗಂಧವನ್ನು ರಾಜ್ಯವೃಕ್ಷ ಮಾಡಿದರು. ಕೃಷಿ ಅರಣ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಇದರಿಂದ ರೈತನಿಗೆ ಲಾಭ ಬರುವುದರ ಜತೆಗೆ ಉತ್ತಮ ಪರಿಸರದಿಂದ ಆಮ್ಲಜನಕವೂ ಸಿಗುತ್ತದೆ. ನಿಮ್ಮ ಮರಗಳಿಗೆ ಭದ್ರತೆ ಒದಗಿಸುವ ಜವಾಬ್ದಾರಿ ನಮ್ಮದು ಎಂದು ರೈತರಿಗೆ ಶ್ರೀಗಂಧ ಬೆಳೆಯಲು ಪ್ರೇರೇಪಿಸಲಾಯಿತು. ಇದನ್ನು ನಂಬಿ ರೈತರು ಶ್ರೀಗಂಧ ಬೆಳೆದರು. ನಾನು ಸುಮಾರು 3,000 ಶ್ರೀಗಂಧದ ಮರಗಳನ್ನು ಬೆಳೆದಿದ್ದು, ಈಗ ಹತ್ತು ವರ್ಷದ ಮರಗಳಾಗಿವೆ. ಮರಗಳನ್ನು ಕಟಾವು ಮಾಡಲು ಇನ್ನೂ ಹತ್ತು ವರ್ಷ ಕಾಯಬೇಕಾಗಿದ್ದು, ಅವುಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ’ ಎಂದು ವಿಡಿಯೊದಲ್ಲಿ ದಿನೇಶ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಮಾರ್ಚ್ ತಿಂಗಳಲ್ಲಿ ಕಳ್ಳರು 10 ಮರಗಳನ್ನು ಕಡಿದುಕೊಂಡು ಹೋಗಿದ್ದರು. ಆಗ ಚಿತ್ರಹಳ್ಳಿ ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ಅವರು ಕಳ್ಳರನ್ನು ಹಿಡಿಯಲಿಲ್ಲ. ಈಗ ಮತ್ತೆ 10 ಮರಗಳನ್ನು ಕದ್ದೊಯ್ದಿದ್ದಾರೆ. ಸ್ಥಳೀಯರೇ ಈ ಕೃತ್ಯ ಎಸಗಿರುವ ಶಂಕೆ ಇದೆ. ಇಲ್ಲಿ ಶ್ರೀಗಂಧ ಖರೀದಿಸುವ ಜಾಲವೇ ಇದ್ದು, ಸ್ಥಳೀಯರು ಹಣದ ಆಸೆಗೆ ಗಂಧದ ಮರಗಳನ್ನು ಕತ್ತರಿಸಿ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಮೊದಲೆಲ್ಲ ಕಳ್ಳರು ಗುಡ್ಡಗಳಲ್ಲಿದ್ದ ಶ್ರೀಗಂಧವನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದರು. ಈಗ ಗುಡ್ಡದಲ್ಲಿ ಗಂಧದ ಮರಗಳು ಮುಗಿದಿರುವುದರಿಂದ ರೈತರ ಹೊಲಗಳಿಗೆ ದಾಳಿ ಮಾಡುತ್ತಿದ್ದಾರೆ. ಆದರೂ ಪೊಲೀಸರು, ಅರಣ್ಯ
ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಯಾರೂ ನಮ್ಮ ರಕ್ಷಣೆಗೆ ಬರುವುದಿಲ್ಲ. ದಯವಿಟ್ಟು ಯಾರೂ ಶ್ರೀಗಂಧ ಬೆಳೆಯಬೇಡಿ. 15, 20 ವರ್ಷಗಳವರೆಗೆ ಮರಗಳನ್ನು ಕಾಯಲು ಆಗುವುದಿಲ್ಲ. ರಾತ್ರಿವೇಳೆ ಹೊಲದಲ್ಲಿದ್ದರೆ ಕಳ್ಳರು ನಮ್ಮ ಮೇಲೆ ದಾಳಿ ಮಾಡುತ್ತಾರೆ. ರೈತರಿಗೆ ಕೋಟ್ಯಧೀಶರಾಗುವ ದುರಾಸೆ ಇಲ್ಲ. ಏನೋ ದುಡುಕಿ ಶ್ರೀಗಂಧ ಬೆಳೆದಿದ್ದೇವೆ. ಈಗಾಗಲೇ 10 ವರ್ಷ ಸಸಿಗಳನ್ನು ಸಾಕಿದ್ದೇವೆ. ಸರ್ಕಾರ ನಮಗೆ ಇದುವರೆಗೆ ಗಿಡ ಸಾಕಿದ ಕೂಲಿ ಲೆಕ್ಕ ಹಾಕಿ ಪರಿಹಾರ ಕೊಡಲಿ. ಬೇಕಾದರೆ ಸರ್ಕಾರದವರೇ ಮರ ಕಡಿದುಕೊಳ್ಳಲಿ. ನಾವು ಹುಣಸೆ, ಬೇವು, ಹೊಂಗೆ ಬೆಳೆದುಕೊಳ್ಳುತ್ತೇವೆ’ ಎಂದು ರೈತ ದಿನೇಶ್ ಅಲವತ್ತುಕೊಂಡಿದ್ದಾರೆ.

ಹೊಲಗಳಿಗೆ ಭದ್ರತೆ ಕೊಡಲಾಗಲ್ಲ!

‘ಪೊಲೀಸರು ಎಲ್ಲ ರೈತರ ಹೊಲಗಳಿಗೆ ಭದ್ರತೆ ನೀಡಲಾಗುವುದಿಲ್ಲ. ರೈತರೇ ಭದ್ರತೆಯ ಏರ್ಪಾಡು ಮಾಡಿಕೊಳ್ಳಬೇಕು’ ಎಂದು ಚಿತ್ರಹಳ್ಳಿ ಪಿಎಸ್ಐ ಮಂಜುನಾಥ್ ಕುರಿ ತಿಳಿಸಿದ್ದಾರೆ.

‘ಮಾರ್ಚ್‌ನಲ್ಲಿ ಶ್ರೀಗಂಧ ಕಳುವಾಗಿರುವ ಬಗ್ಗೆ ದಿನೇಶ್ ಅವರು ದೂರು ನೀಡಿದ್ದರು. ಆಗ ಅವರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ಉಪ್ಪರಿಗೇನಹಳ್ಳಿ ಗ್ರಾಮದಿಂದ ಮೂರು ಕಿ.ಮೀ. ದೂರದ ಕಾಡಿನ ಸಮೀಪ ಅವರ ಹೊಲ ಇದ್ದು, ಮೊಬೈಲ್ ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ನಮಗೆ ಕಳ್ಳರ ಸುಳಿವು ಸಿಕ್ಕಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಶ್ರೀಗಂಧ ಕಳ್ಳರ ಜಾಲ ಇಲ್ಲ. ಹಿಂದೆ ಎಂದೂ ಶ್ರೀಗಂಧ ಕಳ್ಳತನದ ಪ್ರಕರಣಗಳು ವರದಿಯಾಗಿಲ್ಲ. ಬೇಕಾದರೆ ಅವರು ಹೊಲದ ಸುತ್ತ ಸಿ.ಸಿ.ಟಿ.ವಿ ಕ್ಯಾಮೆರಾ ಹಾಕಿಸಿ, ಕಾಯಲು ಆಳುಗಳನ್ನು ಇಡಬಹುದು’ ಎಂದು ಪಿಎಸ್ಐ ತಿಳಿಸಿದರು.

‘ಖಾಸಗಿ ಜಮೀನು ನಮ್ಮ ವ್ಯಾಪ್ತಿಗೆ ಬರಲ್ಲ’

‘ಖಾಸಗಿ ಜಮೀನಿನಲ್ಲಿ ಬೆಳೆದ ಮರಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ತಿಳಿಸಿದರು.

‘ಕಳ್ಳತನ ಆದರೆ ಪೊಲೀಸರಿಗೆ ದೂರು ನೀಡಬೇಕು. ಅವರು ಕಳ್ಳರಿಂದ ಮಾಲು ಪಡೆದು ನಮ್ಮ ವಶಕ್ಕೆ ನೀಡುತ್ತಾರೆ. ನಾವು ರೈತರು ಬೆಳೆದ ಶ್ರೀಗಂಧವನ್ನು ಕಟಾವು ಮಾಡಲು ಪರವಾನಗಿ ನೀಡುತ್ತೇವೆ. ಮರವನ್ನು ಅಧಿಕೃತ ವ್ಯಾಪಾರಿಗಳಿಗೆ ಮಾರಾಟ ಮಾಡಿಸಿ ಹಣವನ್ನೂ ನೀಡುತ್ತೇವೆ. ಆದರೆ, ಮರಗಳಿಗೆ ಭದ್ರತೆ ನೀಡುವುದು ನಮ್ಮ ಜವಾಬ್ದಾರಿ ಅಲ್ಲ’ ಎಂದು ತಿಳಿಸಿದರು.

****

ದಿನೇಶ್

ಪೊಲೀಸರೇ ಪ್ರಮುಖ ಮಾರ್ಗಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಿ. ರಾತ್ರಿ ವೇಳೆ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಿದರೆ ಕಳ್ಳರು ಹೇಗೆ ತಪ್ಪಿಸಿಕೊಳ್ಳುತ್ತಾರೆ?
-ದಿನೇಶ್, ಶ್ರೀಗಂಧ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT