ಮಂಗಳವಾರ, ಮಾರ್ಚ್ 28, 2023
23 °C
ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಆಗ್ರಹ

ಚಿತ್ರದುರ್ಗ: ಸಚಿವ ಸಂಪುಟದಿಂದ ಶ್ರೀರಾಮುಲು ಕೈಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ನೀಡುವ ಸಬ್ಸಿಡಿ ಹಾಗೂ ಸಾಲ ಸೌಲಭ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಆಪ್ತ ಸಹಾಯಕರು ವಂಚಿಸಿದ್ದಾರೆ. ನೈತಿಕ ಹೊಣೆ ಹೊತ್ತು ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮಾಜಿ ಶಾಸಕ ಎಸ್‌.ತಿಪ್ಪೇಸ್ವಾಮಿ ಆಗ್ರಹಿಸಿದರು.

‘ಸಾಲ ಸೌಲಭ್ಯ ಕೋರಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ನಾಯಕ ಸಮುದಾಯದ ಜನರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 775 ಫಲಾನುಭವಿಗಳಿಗೆ ಮಂಜೂರಾದ ಸಾಲ, ಸಬ್ಸಿಡಿಯನ್ನು ಚೆಕ್‌ ಮೂಲಕ ಶ್ರೀರಾಮುಲು ಆಪ್ತ ಸಹಾಯಕರು ಪಡೆದಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸಬ್ಸಿಡಿ ಹಾಗೂ ಸಾಲ ಸೌಲಭ್ಯವನ್ನು ಫಲಾನುಭವಿಯ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕು. ಈ ನಿಮಯವನ್ನು ನಿಗಮದ ಅಧಿಕಾರಿಗಳೇ ಉಲ್ಲಂಘಿಸಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ಇದರಲ್ಲಿ ಷಾಮೀಲಾಗಿರುವ ಅನುಮಾನವಿದೆ. ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಶ್ರೀರಾಮುಲು ಆರೋಗ್ಯ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ. ಆಪ್ತ ಸಹಾಯಕರ ಮೂಲಕ ಪರ್ಸಂಟೇಜ್‌ ವ್ಯವಹಾರಕ್ಕೆ ಇಳಿದಿದ್ದಾರೆ. ಮೋಸ ಮಾಡುವ ಆಪ್ತ ಸಹಾಯಕರ ದೊಡ್ಡ ಕಾರ್ಖಾನೆಯೇ ಅವರಲ್ಲಿದೆ’ ಎಂದು ವ್ಯಂಗ್ಯವಾಡಿದರು. ವಂಚನೆಗೆ ಒಳಗಾದ ನಾಗರಾಜ, ತಿಪ್ಪೇಸ್ವಾಮಿ, ಕನ್ನಯ್ಯ, ಗುಂಡಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.