ಕೋಟೆನಾಡಿನ ಅಧಿದೇವತೆ ಏಕನಾಥೇಶ್ವರಿಗೆ ಭವ್ಯ ಸ್ವಾಗತ

ಗುರುವಾರ , ಏಪ್ರಿಲ್ 25, 2019
31 °C
ರಾಜಬೀದಿಗಳಲ್ಲಿ ನೀರೆರೆದು ಬರಮಾಡಿಕೊಂಡ ಭಕ್ತರು

ಕೋಟೆನಾಡಿನ ಅಧಿದೇವತೆ ಏಕನಾಥೇಶ್ವರಿಗೆ ಭವ್ಯ ಸ್ವಾಗತ

Published:
Updated:
Prajavani

ಚಿತ್ರದುರ್ಗ: ಕೋಟೆನಗರಿಯ ಅಧಿದೇವತೆ ಏಕನಾಥೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಗರಕ್ಕೆ ದೇವತೆಯನ್ನು ಭಕ್ತರು ಅದ್ದೂರಿಯಾಗಿ ಕರೆತಂದರು.

ಕೋಟೆಯ ಮೇಲುದುರ್ಗದಲ್ಲಿ ಇರುವ ದೇವಿ ದೇಗುಲದಲ್ಲಿ ಬುಧವಾರ ಮುಂಜಾನೆಯಿಂದ ಪ್ರಾರಂಭವಾದ ಪೂಜಾ ವಿಧಿವಿಧಾನಗಳನ್ನು ದೇಗುಲದ ಪ್ರಧಾನ ಅರ್ಚಕರು ನೆರವೇರಿಸಿದರು. ಸಂಪ್ರದಾಯದಂತೆ ನಡೆಯುವ ದೇವಿಯ 'ದೊಡ್ಡಭಂಡಾರ'ದ ಪೂಜೆ ವಿಶೇಷವಾಗಿತ್ತು.

ದೇವಿಯನ್ನು ಕೋಟೆಯಿಂದ ನಗರಕ್ಕೆ ಕರೆತರಲಿಕ್ಕಾಗಿ ದೇಗುಲದ ಮುಂಭಾಗ ಬೆಳಿಗ್ಗೆ 6 ಗಂಟೆಯಿಂದಲೇ ಜಮಾಯಿಸಿದ್ದ ಸಾವಿರಾರು ಭಕ್ತರು ಉತ್ಸಾಹದಿಂದ ಕಾಯುತ್ತ ಕುಳಿತಿದ್ದರು.

ಮೂಲ ಗರ್ಭಗುಡಿಯಿಂದ ದೇವಿಯ ಉತ್ಸವಮೂರ್ತಿಯನ್ನು ಮಡಿ ಹಾಸಿನ ಮೇಲೆ ಮಂಗಳವಾದ್ಯ ಘೋಷಗಳೊಂದಿಗೆ ಕರೆತಂದು ಅಶ್ವ ವಾಹನದ ಮೇಲೆ ಸುಸಜ್ಜಿತವಾದ ಉಚ್ಚಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇಗುಲದ ಮುಂಭಾಗವಿರುವ ಶಿವನ ವಿಗ್ರಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿಸುವ ವೇಳೆ ಉಧೋ ಉಧೋ ಎಂಬ ಹರ್ಷೋದ್ಗಾರ ಮುಗಿಲುಮುಟ್ಟಿತು.

ಸುಗಂಧರಾಜ, ಸೇವಂತಿಗೆ, ಕನಕಾಂಬರ, ಮಲ್ಲಿಗೆ ಸೇರಿ ವಿವಿಧ ಹೂವಿನ ಹಾರಗಳಿಂದ ಅಲಂಕರಿಸಿದ್ದ ದೇವಿಯನ್ನು ಕೋಟೆಯಿಂದ ಭಕ್ತರು ಕರೆತಂದು ಟ್ರ್ಯಾಕ್ಟರ್‌ನಲ್ಲಿ ಕೂರಿಸಿದರು. ಚಂದ್ರಮಾಸ ಹೊಂಡದಲ್ಲಿ ದೇವತೆಗೆ ಗಂಗಾಪೂಜೆ, ಕುಂಭಾಭಿಷೇಕ, ಮಹಾಮಂಗಳಾರತಿ ನೆರವೇರಿತು.

ಕೋಟೆ ರಸ್ತೆ, ಕಾಮನಬಾವಿ ಬಡಾವಣೆ, ಕರುವಿನಕಟ್ಟೆ ವೃತ್ತ, ಕೂಡಲಿ ಶೃಂಗೇರಿ ಮಠದ ರಸ್ತೆ, ಸುಣ್ಣದ ಗುಮ್ಮಿ, ಜೋಗಿಮಟ್ಟಿ ರಸ್ತೆ, ತಿಪ್ಪಿನಘಟ್ಟಮ್ಮ ಮೂಲ ದೇಗುಲದ ಅಕ್ಕಪಕ್ಕ, ಜಟ್‌ಪಟ್‌ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆಗಳಲ್ಲಿ ಸಂಚರಿಸಿದ ದೇವತೆಗೆ ಭಕ್ತರು ಪೂಜೆ ನೆರವೇರಿಸುವ ಮೂಲಕ ಭಕ್ತಿ ಸಮರ್ಪಿಸಿದರು.

ವಿವಿಧ ಮನೆಗಳ ಮುಂದೆ ದೇವತೆಗೆ ಪೂಜೆ ನಡೆಸಿದ ಬಳಿಕ ಭಕ್ತರಿಂದ ಪಾನಕ, ಕೋಸುಂಬರಿ, ಮಜ್ಜಿಗೆ, ಪುಳಿಯೊಗರೆ, ಮೊಸರನ್ನ ಇತರೆ ಪ್ರಸಾದ ವಿತರಿಸಲಾಯಿತು.

ಕಹಳೆ, ಉರುಮೆ, ತಮಟೆ, ಡೊಳ್ಳು, ನಗಾರಿ ಸೇರಿ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ದಾರಿಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಇದೇ 19ರಂದು ಏಕನಾಥೇಶ್ವರಿ ದೇವತೆಯ ಭವ್ಯ ಮೆರವಣಿಗೆ, 20ರಂದು ಕೋಟೆ ರಸ್ತೆಯ ಪಾದದ ಗುಡಿ ಮುಂಭಾಗದಲ್ಲಿ 'ಸಿಡಿ ಮಹೋತ್ಸವ' ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !