ಬದ್ಧ ವೈರಿಗಳೇ ಈ ಬಾರಿ ಪ್ರಚಾರದಲ್ಲಿ ಸ್ನೇಹಿತರು!

ಬುಧವಾರ, ಏಪ್ರಿಲ್ 24, 2019
29 °C
ಮೊಳಕಾಲ್ಮುರು ಕ್ಷೇತ್ರದಲ್ಲಿ ರಾಜಕೀಯ ಮೇಲಾಟ

ಬದ್ಧ ವೈರಿಗಳೇ ಈ ಬಾರಿ ಪ್ರಚಾರದಲ್ಲಿ ಸ್ನೇಹಿತರು!

Published:
Updated:

ಮೊಳಕಾಲ್ಮುರು: ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಕ್ಷೇತ್ರದ ಬದ್ಧ ರಾಜಕೀಯ ವೈರಿಗಳೇ ಈಗಿನ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಸ್ನೇಹಿತರಾಗಿ ಪ್ರಚಾರಕ್ಕೆ ಇಳಿದಿರುವುದು ಮತದಾರರಲ್ಲಿ ಅಚ್ಚರಿಗೆ ಕಾರಣವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಾ. ಬಿ. ಯೋಗೇಶ್ ಬಾಬು, ಜೆಡಿಎಸ್‌ನಿಂದ ಎತ್ನಟ್ಟಿಗೌಡ್ರು, ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಸ್ಪರ್ಧೆ ಮಾಡಿದ್ದರು. ಇವರ ವಿರುದ್ಧ ಬಿಜೆಪಿಯ ಶ್ರೀರಾಮುಲು
ಗೆದ್ದಿದ್ದರು.

ನಂತರ ನಡೆದ ವಿದ್ಯಮಾನದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಕಾರಣ ಡಾ. ಯೋಗೇಶ್ ಬಾಬು, ಎತ್ನಟ್ಟಿಗೌಡ್ರು ಹಾಗೂ ಈಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಎಸ್. ತಿಪ್ಪೇಸ್ವಾಮಿ ಮೂವರೂ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರ ಪ್ರಚಾರ ಮಾಡುವುದು ಅನಿವಾರ್ಯವಾಗಿದೆ. ಇದು ನಿರೀಕ್ಷೆಯಂತೆ ಮತಗಳನ್ನು ತಂದುಕೊಡಲಿದೆಯೇ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಬಿ. ಶ್ರೀರಾಮುಲು 84,018, ಡಾ. ಬಿ. ಯೋಗೇಶ್ ಬಾಬು 41,973, ಎಸ್. ತಿಪ್ಪೇಸ್ವಾಮಿ 41,152, ಎತ್ನಟ್ಟಿಗೌಡ್ರು 15,262 ಮತಗಳನ್ನು ಪಡೆದಿದ್ದರು. ಈ ಮೂಲಕ ಬಿ. ಶ್ರೀರಾಮುಲು ವಿರುದ್ಧ ಈ ಮೂವರು 97,566 ಮತಗಳನ್ನು ಪಡೆದಿದ್ದರು. ಈ ಬಾರಿ ಮೂವರು ಒಗ್ಗಟ್ಟಾಗಿರುವುದು ಎಷ್ಟರ ಮಟ್ಟಿಗೆ ಮತಗಳಾಗಿ ಪರಿಣಮಿಸಲಿವೆ ಎಂದು ಕಾದುನೋಡಬೇಕಿದೆ.

ಈ ಬಗ್ಗೆ ಮಾತನಾಡಿದ ಡಾ. ಯೋಗೇಶ್ ಬಾಬು, ‘ಮೂವರೂ ಒಂದಾಗಿರುವುದು ಹೆಚ್ಚಿನ ಬಲ ತಂದುಕೊಟ್ಟಿದೆ. ಮೂವರು ಸ್ಥಳೀಯರಾಗಿದ್ದು ಸದಾ ಲಭ್ಯರಿದ್ದೇವೆ. ಶ್ರೀರಾಮುಲು ಗೆದ್ದ ನಂತರ ಕ್ಷೇತ್ರಕ್ಕೆ ಸರಿಯಾಗಿ ಭೇಟಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಪ್ರಚಾರ ಸಮಯದಲ್ಲಿ ಮತದಾರರು ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ದೂರುತ್ತಿದ್ದಾರೆ. ಇದು ಈ ಚುನಾವಣೆಯಲ್ಲಿ ಕೈಹಿಡಿಯುತ್ತದೆ ಎಂದು ಭಾವಿಸಿದ್ದೇನೆ’ ಎಂಬುದು ಅವರ ಅಭಿಪ್ರಾಯ.

ಎತ್ನಟ್ಟಿಗೌಡ್ರು, 'ಜಂಟಿ ಪ್ರಚಾರಕ್ಕೆ ಹೆಚ್ಚಿನ ಜನರು ಸೇರುತ್ತಿದ್ದಾರೆ. ಯಾವುದೇ ಗ್ರಾಮಕ್ಕೆ ಹೋದರೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜಾತ್ಯತೀತವಾಗಿ ಬೆಂಬಲ ಸಿಗುತ್ತಿದೆ. ಶ್ರೀರಾಮುಲುಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ. ಮೂವರ ಒಗ್ಗಟ್ಟಿಗೆ ಮತದಾರರು ಸಂತಸ ತೋರುತ್ತಿದ್ದಾರೆ' ಎಂದರು.

ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿ, ಶಾಸಕ ಬಿ. ಶ್ರೀರಾಮುಲು ಸುಳ್ಳು ಭರವಸೆಗಳಿಂದ ಕಳೆದ ಚುನಾವಣೆಯಲ್ಲಿ ಗೆದ್ದಿದ್ದಾರೆ ಈಗ ಅವರ ಬಂಡವಾಳ ಬಯಲಾಗಿದೆ. ಜತೆಗೆ ಬಿಜೆಪಿ ವಿರೋಧಿಗಳು ಒಂದಾಗಿರುವುದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಪೂರಕವಾಗಿದೆ. ನಮ್ಮಲ್ಲಿ ಯಾವುದೇ ಒಡಕಿಲ್ಲ, ಜನರು ನಮ್ಮನ್ನು ಸ್ವಾಗತಿಸುತ್ತಿದ್ದಾರೆ' ಎನ್ನುತ್ತಾರೆ
ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !