ಸೋಮವಾರ, ನವೆಂಬರ್ 30, 2020
20 °C
ಅಧ್ಯಕ್ಷ ಸ್ಥಾನಕ್ಕೆ ತಿಪ್ಪಮ್ಮ, ಉಪಾಧ್ಯಕ್ಷೆ ಸ್ಥಾನಕ್ಕೆ ಶ್ವೇತಾ ವೀರೇಶ್ ಸ್ಪರ್ಧೆ ಬಹುತೇಕ ಖಚಿತ

ಚಿತ್ರದುರ್ಗ: ನಗರಸಭೆ ಅಧ್ಯಕ್ಷ ಗಾದಿಗೆ ಚುನಾವಣೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ನಗರಸಭೆ ಚುನಾವಣೆ ನಡೆದ ಎರಡು ವರ್ಷ, ಎರಡು ತಿಂಗಳ ಬಳಿಕ ಕೌನ್ಸಿಲ್‌ ರಚನೆ ನಿಶ್ಚಿತವಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದ್ದು, ನ.1ರಂದು ಮುಹೂರ್ತ ನಿಗದಿಯಾಗಿದೆ. ನಗರಸಭೆ ಗದ್ದುಗೆ ಏರಲು ಬಿಜೆಪಿ ಉತ್ಸುಕವಾಗಿದೆ. ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾದ ಅಧ್ಯಕ್ಷ ಗಾದಿಗೆ ಇಬ್ಬರು ಕಸರತ್ತು ನಡೆಸುತ್ತಿದ್ದಾರೆ.

1ನೇ ವಾರ್ಡ್‌ನಿಂದ ಆಯ್ಕೆಯಾದ ನಾಗಮ್ಮ ಹಾಗೂ 19ನೇ ವಾರ್ಡ್‌ನಿಂದ ಆಯ್ಕೆಯಾದ ತಿಪ್ಪಮ್ಮ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಪಡೆದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಸ್ಥಾನಕ್ಕೆ 28ನೇ ವಾರ್ಡ್‌ನ ಶ್ವೇತಾ ವೀರೇಶ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಉಳಿದ ಆಕಾಂಕ್ಷಿಗಳು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

35 ವಾರ್ಡ್‌ ಹೊಂದಿರುವ ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿ 17, ಪಕ್ಷೇತರ 7, ಜೆಡಿಎಸ್‌ 6 ಹಾಗೂ ಕಾಂಗ್ರೆಸ್‌ 5 ಸದಸ್ಯ ಬಲ ಹೊಂದಿವೆ. ಸರಳ ಬಹುಮತಕ್ಕೆ 19 ಮತಗಳ ಅಗತ್ಯವಿದೆ. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಸಂಸದ ಎ. ನಾರಾಯಣಸ್ವಾಮಿ ಅವರ ಮತಗಳು ಸೇರಿದರೆ ಬಿಜೆಪಿ ನಿರಾತಂಕವಾಗಿ ಅಧಿಕಾರಕ್ಕೆ ಏರಲಿದೆ.

ಇಲ್ಲಿನ ನಗರಸಭೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ಸುಕವಾಗಿರುವ ಬಿಜೆಪಿಗೆ ಪಕ್ಷೇತರ ಮತ್ತು ಕಾಂಗ್ರೆಸ್‌ನ ತಲಾ ನಾಲ್ವರು ಸದಸ್ಯರು ಹಾಗೂ ಜೆಡಿಎಸ್‌ನಿಂದ ಒಬ್ಬರು ಬೆಂಬಲ ನೀಡಲು ಮುಂದಾಗಿದ್ದಾರೆ. ಈ ಮೂಲಕ ಶಾಸಕರು, ಸಂಸದರ ಮತ ಹೊರತುಪಡಿಸಿ ಬಿಜೆಪಿ ಸಂಖ್ಯಾಬಲ 26ಕ್ಕೆ ಏರಿಕೆಯಾಗುವ
ಸಾಧ್ಯತೆ ಹೆಚ್ಚಿದೆ.

ಅಧ್ಯಕ್ಷ ಸ್ಥಾನಕ್ಕೆ ತಿಪ್ಪಮ್ಮ ಅವರ ಹೆಸರು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬಿಜೆಪಿಯಲ್ಲಿ ದೊಡ್ಡದಾಗಿದೆ. ಇವರಲ್ಲಿ 9 ಸದಸ್ಯರು ಮಹಿಳೆಯರಿದ್ದಾರೆ. ಹಿಂದುಳಿದ ವರ್ಗ ‘ಎ’ಗೆ ಮೀಸಲಾದ ಉಪಾಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ಈಗಾಗಲೇ ಮಹಿಳೆಗೆ ಖಚಿತವಾಗಿದೆ. ಆದ್ದರಿಂದ ಉಪಾಧ್ಯಕ್ಷ ಸ್ಥಾನವನ್ನಾದರೂ ಪುರುಷರಿಗೆ ನೀಡಬೇಕು ಎಂಬ ಅಭಿಪ್ರಾಯವನ್ನು ಕೆಲ ಸದಸ್ಯರು ವ್ಯಕ್ತಪಡಿಸಿದ್ದರು. ಒಂದು ವೇಳೆ ಉಪಾಧ್ಯಕ್ಷ ಸ್ಥಾನವೂ ಮಹಿಳೆಗೆ ಸಿಕ್ಕರೆ ನಗರಸಭೆಯಲ್ಲಿ ಮಹಿಳಾ ಆಡಳಿತ ಪರ್ವ ಶುರುವಾಗಲಿದೆ.

ಆಯ್ಕೆ ಸಂಬಂಧ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ಕಾಟನ್ ಮಿಲ್ ಆವರಣದಲ್ಲಿ ಶನಿವಾರ 20ಕ್ಕೂ ಹೆಚ್ಚು ನಗರಸಭೆ ಸದಸ್ಯರು ಚರ್ಚೆ ನಡೆಸಿದರು. ತಮ್ಮ ಅಭಿಪ್ರಾಯವನ್ನು ಶಾಸಕರ ಮುಂದಿಟ್ಟರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ‘ಸದಸ್ಯರ ಮಧ್ಯೆ ಯಾವುದೇ ರೀತಿಯ ವ್ಯತ್ಯಾಸ ಬಾರದಂತೆ ನಗರದ ಸ್ವಚ್ಛತೆ, ರಸ್ತೆಗಳ ನಿರ್ಮಾಣ ಸೇರಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯಗಳಿಗೆ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ದೃಷ್ಟಿಯಿಂದ ಉತ್ತಮ ನಿರ್ಣಯ ಕೈಗೊಳ್ಳಲಿದ್ದೇವೆ. ಒಮ್ಮತದ ಅಭ್ಯರ್ಥಿಗಳ ಆಯ್ಕೆ ಖಚಿತ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.