ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಗ ಸೆರೆ ಕಾರ್ಯಾಚರಣೆಗೆ ಸಿದ್ಧತೆ

ಕೋಟೆನಾಡಿಗೆ ಬಂದ ಐದು ಸಾಕಾನೆಗೆ ‘ಅಭಿಮನ್ಯು’ ನೇತೃತ್ವ
Last Updated 8 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಕುರುಮರಡಿಕೆರೆ ಸಮೀಪದ ಅರಣ್ಯದಲ್ಲಿ ಬೀಡುಬಿಟ್ಟಿರುವ ಒಂಟಿಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ದಸರಾ ಆನೆ ‘ಅಭಿಮನ್ಯು’ ನೇತೃತ್ವದಲ್ಲಿ ಸೋಮವಾರ ಕಾರ್ಯಾಚರಣೆ ಆರಂಭವಾಗಲಿದೆ.

ಒಂಟಿಸಲಗ ಸೆರೆ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲು ಶಿಬಿರದಿಂದ ‘ಬಾಲಣ್ಣ’ ಹಾಗೂ ‘ಸಾಗರ’ ಎಂಬ ಎರಡು ಆನೆಗಳು ಭಾನುವಾರ ಬಂದಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ‘ಅಭಿಮನ್ಯು’ ಹಾಗೂ ಬಂಡೀಪುರ ಅರಣ್ಯದಿಂದ ‘ಗೋಪಾಲಸ್ವಾಮಿ’ ಮತ್ತು ‘ಕೃಷ್ಣ’ ಆನೆಗಳು ಸೋಮವಾರ ಬರಲಿವೆ.

ಜೋಗಿಮಟ್ಟಿ ವನ್ಯಧಾಮದಲ್ಲಿ ಕಾಣಿಸಿಕೊಂಡಿದ್ದ ಒಂಟಿಸಲಗ ಎರಡು ದಿನಗಳಿಂದ ಗೋಡೆಕಣಿವೆಯ ಅಹೋಬಲ ನರಸಿಂಹಸ್ವಾಮಿ ದೇಗುಲದ ಬಳಿ ಬೀಡುಬಿಟ್ಟಿದೆ. ಸಮೀಪದ ಕೆರೆಗೆ ಬಂದು ನೀರು ಕುಡಿದು ಹೋದ ಹೆಜ್ಜೆಗುರುತುಗಳು ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿವೆ. ಸಮೀಪದ ಅರಣ್ಯದಲ್ಲಿ ಬಿದ್ದಿರುವ ಲದ್ದಿಯು ಒಂಟಿಸಲಗದ ಜಾಡನ್ನು ನೀಡಿದೆ.

ಡಿಸಿಎಫ್‌ ಚಂದ್ರಶೇಖರ ನಾಯಕ ನೇತೃತ್ವದಲ್ಲಿ ಅರಣ್ಯ ಇಲಾಖೆಯ 80ಕ್ಕೂ ಹೆಚ್ಚು ಸಿಬ್ಬಂದಿ ಕಾಡಿನಲ್ಲಿ ವಾಸ್ತವ್ಯ ಹೂಡಿದ್ದು, ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದರು. ಹಗಲು ವೇಳೆ ವಿಶ್ರಾಂತಿ ಪಡೆಯುವ ಸಲಗ ಭಾನುವಾರ ಯಾರ ಕಣ್ಣಿಗೂ ಬೀಳಲಿಲ್ಲ. ಸಾಕಾನೆ ಮಾವುತರು ಹಾಗೂ ಜಾಡು ಪತ್ತೆ ಮಾಡುವ ಪರಿಣತರ ಕಣ್ಣಿಗೂ ಆನೆ ಗೋಚರಿಸಿಲ್ಲ.

ಭಾನುವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ ಬಳ್ಳಾರಿ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೆರೆ ಕಾರ್ಯಾಚರಣೆಗೆ ನಿರ್ಧರಿಸಿದರು. ಬಳಿಕ ಮೈಸೂರು ವಲಯದಿಂದ ದಸರಾ ಆನೆಗಳನ್ನು ಕರೆತರಲು ಅನುಮತಿ ಸಿಕ್ಕಿತು. ಅರಿವಳಿಕೆ ತಜ್ಞರಾದ ಪ್ರಯಾಗ್‌ ಹಾಗೂ ವಿನಯ್‌ ಕೂಡ ಸ್ಥಳದಲ್ಲಿದ್ದಾರೆ.

ದಾರಿ ತಪ್ಪಿಸಿದ ಭದ್ರಾ ನಾಲೆ:ಭದ್ರಾ ಮೇಲ್ದಂಡೆ ನಾಲೆಗೆ ನಡೆಯುತ್ತಿರುವ ಕಾಮಗಾರಿಯು ಆನೆ ಕಾರಿಡಾರ್ ಸಂಪರ್ಕ ಕಡಿತಗೊಳ್ಳಲು ಕಾರಣವಾಗಿದೆ ಎಂಬುದು ಅರಣ್ಯ ಇಲಾಖೆ ವಿಶ್ಲೇಷಣೆ.

ಬನ್ನೇರುಘಟ್ಟ ಹಾಗೂ ಭದ್ರಾ ಅಭಯಾರಣ್ಯ ಸಂಪರ್ಕಿಸುವ ಆನೆ ಕಾರಿಡಾರ್‌ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಹಾದು ಹೋಗಿದೆ. ಈ ಕಾರಿಡಾರಿನಲ್ಲಿ ಪ್ರತಿ ವರ್ಷ ಆನೆಗಳು ಸಂಚರಿಸುತ್ತವೆ. ಕೆಲವೊಮ್ಮೆ ಮಾತ್ರ ಇವು ಜನರ ಕಣ್ಣಿಗೆ ಬೀಳುತ್ತವೆ.

‘ನಾಲೆ ನಿರ್ಮಾಣದ ಕಾಮಗಾರಿ ಆನೆ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಒಂಟಿಸಲಗ ದಾರಿ ತಪ್ಪಿ ಜೋಗಿಮಟ್ಟಿ ವನ್ಯಧಾಮಕ್ಕೆ ಬಂದಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಗೆ ಬಂದ ‘ಬಾಲಣ್ಣ’:2017ರಲ್ಲಿ ಚಿತ್ರದುರ್ಗದಲ್ಲಿ ಪುಂಡಾಟ ನಡೆಸಿ ಸೆರೆಸಿಕ್ಕಿದ್ದ ‘ಬಾಲಣ್ಣ’ ಎಂಬ ಆನೆಯೇ ಒಂಟಿಸಲಗದ ಕಾರ್ಯಾಚರಣೆಗೆ ಬಂದಿದೆ.

ಎರಡು ವರ್ಷಗಳ ಹಿಂದೆ ಭದ್ರಾ ಅಭಯಾರಣ್ಯದಿಂದ ದಾರಿತಪ್ಪಿ ಬಂದಿದ್ದ ಎರಡು ಆನೆಗಳು ದಾಂಧಲೆ ನಡೆಸಿದ್ದವು. ಕೆರಳಿದ ಈ ಆನೆಗಳಿಗೆ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಮೂವರು ಬಲಿಯಾಗಿದ್ದರು. ಅರಣ್ಯ ಇಲಾಖೆ ಕೈಗೆ ಸಿಗದೇ ಓಡಾಡುತ್ತಿದ್ದ ಈ ಆನೆಯನ್ನು ಚನ್ನಗಿರಿಯಲ್ಲಿ ಸೆರೆಹಿಡಿಯಲಾಗಿತ್ತು.

‘ಸೆರೆಸಿಕ್ಕ ಬಳಿಕ ಈ ಆನೆಯನ್ನು ಸಕ್ರೇಬೈಲು ಸಾಕಾನೆ ಬಿಡಾರಕ್ಕೆ ಸ್ಥಳಾಂತರಿಸಲಾಯಿತು. ಎರಡು ತಿಂಗಳಲ್ಲಿ ಇದನ್ನು ಪಳಗಿಸಲಾಯಿತು. ಇದೇ ಆನೆಯನ್ನು ಒಂಟಿಸಲಗದ ಕಾರ್ಯಾಚರಣೆಗೆ ತರಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT