ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನಕ್ಕೆ ವರ್ಧಮಾನ ಸಂದೇಶ ಅಗತ್ಯ

ಮಹಾವೀರ ಜಯಂತಿ ಕಾರ್ಯಕ್ರಮ: ವಿಶೇಷ ಉಪನ್ಯಾಸ ನೀಡಿದ ಶಂಕರಯ್ಯ ಅಬ್ಬಿಗೇರಿಮಠ
Last Updated 30 ಮಾರ್ಚ್ 2018, 12:32 IST
ಅಕ್ಷರ ಗಾತ್ರ

ಕೊಪ್ಪಳ: 'ವರ್ತಮಾನದ ವಿದ್ಯಮಾನಗಳಿಗೆ ವರ್ಧಮಾನರ ತತ್ವ, ಸಂದೇಶಗಳು ಅವಶ್ಯವಾಗಿದೆ' ಎಂದು ಉಪನ್ಯಾಸಕ ಶಂಕರಯ್ಯ ಅಬ್ಬಿಗೇರಿಮಠ ಹೇಳಿದರು.ನಗರದ ಗೋಶಾಲೆ ರಸ್ತೆಯ ಮಹಾವೀರ ಜೈನ ಭವನದಲ್ಲಿ ಗುರುವಾರ ಜೈನ ಸಂಘದಿಂದ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

'ಮೌಲ್ಯಯುತವಾದ ಮಹಾವೀರರ ಸಂದೇಶಗಳನ್ನು ಜನರು ಅನುಸರಿಸಿದರೆ ದ್ವೇಷ, ಅಸೂಯೆ, ಮೂಢನಂಬಿಕೆ, ಭಯೋತ್ಪಾದನೆ, ಅಜ್ಞಾನ, ಅಂಧಕಾರವನ್ನು ತೊಲಗಿಸಬಹುದು. ಅವರು ಶಾಂತಿ ಮತ್ತು ಅಹಿಂಸಾ ತತ್ವದಿಂದ ಎಲ್ಲರ ಮನದಲ್ಲಿ ಉಳಿದರು. ಜೈನ ಸಮುದಾಯವನ್ನು ಬದಲಾಯಿಸುವಲ್ಲಿ ಮಹಾವೀರರು ಮಹತ್ವದ ಪಾತ್ರ ವಹಿಸಿದ್ದಾರೆ' ಎಂದರು.

'ವರ್ಧಮಾನ ಮಹಾವೀರರು ತ್ರಿಶಾಲಾದೇವಿ ಹಾಗೂ ರಾಜನಾಥ ದಂಪತಿ ಪುತ್ರರಾಗಿ ಕ್ರಿಸ್ತಪೂರ್ವ 599ರಲ್ಲಿ ಕುಂಡಲಪುರ ಎಂಬಲ್ಲಿ ಜನಿಸಿದರು. ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಸಂದೇಶಗಳನ್ನು ಸಾರಿದರು. ಧರ್ಮನಂಬಿಕೆಗೆ ಗೌರವ ನೀಡಿ ಆದಿನಾಥ, ಅನಂತನಾಥ, ಶಾಂತಿನಾಥ, ಮಲ್ಲಿನಾಥ ಹಾಗೂ 23ನೇ ತೀರ್ಥಂಕರ ಪಾರ್ಶ್ವನಾಥ ಸೇರಿದಂತೆ ಎಲ್ಲರ ತೀರ್ಥಂಕರರು ನಡೆಸಿಕೊಂಡು ಬಂದ ಧರ್ಮ ಪರಂಪರೆಯನ್ನು ಜೈನರ 24ನೇ ತೀರ್ಥಂಕರರಾದ ಮಹಾವೀರರು ಮುಂದುವರಿಸಿದರು' ಎಂದು ಹೇಳಿದರು.

'ಮಹಾವೀರರು ಸಾಮಾನ್ಯರಂತೆ ಜೀವಿಸಿದರು. ಅಹಿಂಸೆ, ಅಪರಿಗ್ರಹ, ಬ್ರಹ್ಮಚರ್ಯದ ಕುರಿತು ಅನೇಕ ವಿಷಯಗಳನ್ನು ತಿಳಿಸಿದರು. ಪ್ರಸ್ತುತ ದೇಶದ ಜನರು ಯುದ್ಧ ಭೀತಿ ಎದುರಿಸುತ್ತಿದ್ದಾರೆ. ಭಯೋತ್ಪಾದನೆ, ದ್ವೇಷ, ಮತ್ಸರ, ಅಸೂಯೆ ಹೋಗಲಾಡಿಸಿ ಜಗತ್ತಿನಲ್ಲಿ ಶಾಂತಿ ನಿರ್ಮಾಣವಾಗಬೇಕಾದರೆ ಅಹಿಂಸಾ ತತ್ವದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಜೈನರ ಸಂದೇಶದಲ್ಲಿ ಸಂಕಲ್ಪಿತ ಹಿಂಸೆಯು ಮಹಾಪಾಪ ಎಂದು ಹೇಳಲಾಗುತ್ತದೆ. ಇಂತಹ ಸಂದೇಶ ವಿಶ್ವದ ಯಾವ ಧರ್ಮದಲ್ಲಿಯೂ ಕಾಣಲು ಸಾಧ್ಯವಿಲ್ಲ' ಎಂದರು.

ರಮೇಶ ನಾಗಡಾ ಮಾತನಾಡಿ, 'ಭಾರತದ ಇತಿಹಾಸದಲ್ಲಿ ವಿವಿಧ ಋಷಿ, ಮುನಿ, ಸಂತರು ಆಗಿ ಹೋಗಿದ್ದಾರೆ. ಅದರಲ್ಲಿ ಮಹಾವೀರರು ಪ್ರಮುಖರಾಗಿದ್ದಾರೆ. ಅಹಿಂಸೆ ಪರಮೋಧರ್ಮ ಎಂದು ಅವರು ಸಾರಿದ್ದಾರೆ. ಇವರ ಸಂದೇಶಗಳು ಶಾಂತಿ, ಸಮತಾವಾದ, ಸಮೃದ್ಧಿಯ ಪ್ರತೀಕವಾಗಿವೆ. ಈ ನಿಟ್ಟಿನಲ್ಲಿ ಇವರ ಸಂದೇಶಗಳು ಮಾನವ ಸಮಾಜಕ್ಕೆ ಮುಖ್ಯವಾಗಿವೆ. ಬೇರೆ ಯಾವುದೇ ಜೀವಿಗಳಿಗೆ ಹಿಂಸೆ ನೀಡಬಾರದು. ಸ್ವಾರ್ಥಕ್ಕಾಗಿ ಪ್ರಾಣ ವಧೆ ಮಾಡಬಾರದು. ಇದು ಅಪರಾಧ. ಎಲ್ಲ ಜೀವಿಗಳನ್ನು ರಕ್ಷಿಸಬೇಕು. ಸತ್ಯದ ಪರವಾದ ಪಕ್ಷದಲ್ಲಿ ನಾವು ಇದ್ದೇವೋ ಇಲ್ಲವೋ ಎನ್ನುವುದನ್ನು ಅಂತರಂಗ
ದಲ್ಲಿ ಮನವರಿಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಮಹಾವೀರರು ಸಂದೇಶಗಳಲ್ಲಿ ತಿಳಿಸಿದ್ದಾರೆ' ಎಂದರು.

ದೀಕ್ಷಾರ್ಥಿ ಕಂಪ್ಲಿಯ ಭಾವನಾ ಛೋಪ್ರಾ ಸಾನ್ನಿಧ್ಯ ವಹಿಸಿದ್ದರು. ಕಾಂತಿಲಾಲ್‍ ಛೋಪ್ರಾ, ರಾಮ್‍ಲಾಲ್‍ ಬಾಗರೇಚಾ, ಗಿಶುಲಾಲ್ ಮೆಹತಾ, ಅಭಯಕುಮಾರ ಮೆಹತಾ, ಜವಾಹರಲಾಲ್‍ ಫುಕರಾನಾ, ಸುರೇಂದ್ರಗೌಡ ಪಾಟೀಲ್, ಗೌತಮಚಂದ್ ಮೆಹತಾ, ಶೀತಲ್‍ ಪಾಟೀಲ್ ಇದ್ದರು. ದಿನೇಶ ಸಂಚೇತಿ ಸ್ವಾಗತಿಸಿದರು. ಪದಮ್‍ಚಂದ್‍ ಮೆಹತಾ ನಿರೂಪಿಸಿದರು.

**

ಭಯೋತ್ಪಾದನೆ, ದ್ವೇಷ, ಮತ್ಸರ, ಅಸೂಯೆ ಹೋಗಲಾಡಿಸಿ ಜಗತ್ತಿನಲ್ಲಿ ಶಾಂತಿ ನಿರ್ಮಾಣ ಅಹಿಂಸಾ ತತ್ವದಿಂದ ಮಾತ್ರ ಸಾಧ್ಯ – ಶಂಕರಯ್ಯ ಅಬ್ಬಿಗೇರಿಮಠ,ಉಪನ್ಯಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT