ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಯೂರಿಯಾ ಗೊಬ್ಬರಕ್ಕೆ ರೈತರ ನೂಕುನುಗ್ಗಲು

ಕೊರೊನಾ ನಡುವೆ ಅಂತರ ಮರೆತ ರೈತರು * ಲಾಠಿ ಬೀಸಿ ಗುಂಪು ಚದುರಿಸಲು ಯತ್ನಿಸಿದ ಪೊಲೀಸರು
Last Updated 3 ಆಗಸ್ಟ್ 2020, 13:24 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರಕ್ಕೆ 500ಕ್ಕೂ ಹೆಚ್ಚು ರೈತರು ಯೂರಿಯಾ ಗೊಬ್ಬರ ಪಡೆಯಲಿಕ್ಕಾಗಿ ಸೋಮವಾರ ಬಂದಿದ್ದರು. ಆದರೆ, ಗೊಬ್ಬರದ ಕೊರತೆಯಿಂದಾಗಿ ನಮಗೆ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಒಬ್ಬರ ಪಕ್ಕ ಮತ್ತೊಬ್ಬರು ನಿಂತುಕೊಳ್ಳಲು ಮುಂದಾದರು. ಚೀಟಿ ಪಡೆಯುವ ಸಾಹಸದಲ್ಲಿ ಅಂತರ ಕಾಯ್ದುಕೊಳ್ಳುವುದನ್ನು ಮರೆತರು.

ಇಲ್ಲಿನ ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘದ ಮುಖ್ಯ ಕಚೇರಿ ಮುಂದೆ ರೈತರು ಯೂರಿಯಾ ಗೊಬ್ಬರ ಪಡೆಯಲು ಸೇರಿದ್ದಾಗ ಕಂಡ ದೃಶ್ಯವಿದು.

ಒಮ್ಮೆಲೆ ನೂಕುನುಗ್ಗಲು ಉಂಟಾಗಿದ್ದರಿಂದ ಅದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಚೀಟಿ ಪಡೆದ ಕೆಲವರೇ ಮತ್ತೆ ಪಡೆಯಲು ಮುಂದಾದರು. ಇದರಿಂದ ಮತ್ತಷ್ಟು ಗೊಂದಲ ಸೃಷ್ಟಿಯಾಯಿತು. ಕೃಷಿ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಮುಂದಾದರೆ, ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾದ ಸ್ಥಿತಿ ನಿರ್ಮಾಣವಾಯಿತು.

ಜಿಲ್ಲೆ ಮತ್ತು ತಾಲ್ಲೂಕಿನಾದ್ಯಂತ ಒಂದು ವಾರದಿಂದ ಉತ್ತಮ ಮಳೆಯಾಗಿದೆ. ಬೆಳೆದು ನಿಂತ ಫಸಲಿಗೆ ಮೇಲುಗೊಬ್ಬರವಾಗಿ ಯೂರಿಯಾ ಬಳಸುವುದು ಸಾಮಾನ್ಯ. ಹೀಗಾಗಿ ರೈತರಿಂದ ದುಪ್ಪಟ್ಟು ಬೇಡಿಕೆ ಹೆಚ್ಚಾಗಿದೆ. ಇದರಿಂದ ನಾ ಮುಂದು.. ತಾ ಮುಂದು.. ಎಂಬಂತೆ ರೈತರು ಯೂರಿಯಾ ಗೊಬ್ಬರಕ್ಕಾಗಿ ಮುಗಿಬಿದ್ದರು.

ಸತತ ಒಂದು ವಾರದಿಂದ ರೈತರ ಬೇಡಿಕೆಗೆ ಅನುಸಾರವಾಗಿ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಕಚೇರಿಗೆ ಸಂಬಂಧಿಸಿದ ಗೋದಾಮಿನಲ್ಲಿ 2 ಸಾವಿರ ಟನ್‌ನಷ್ಟು ಯೂರಿಯಾ ಗೊಬ್ಬರ ಸಂಗ್ರಹಿಸಲು ಅವಕಾಶ ಇರುವ ಕಾರಣ ಅದು ಖಾಲಿಯಾದ ಬಳಿಕವೇ ತರಿಸಿಕೊಳ್ಳಲಾಗುತ್ತಿದೆ. ಮೊದಲೆಲ್ಲಾ ಪ್ರತಿ ರೈತರಿಗೆ 4 ಚೀಲ ಕೊಡಲಾಗಿದೆ. ಆದರೆ, ದಿನೇ ದಿನೇ ರೈತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಪ್ರಸ್ತುತ 2 ಚೀಲ ನೀಡಲು ಕೃಷಿ ಇಲಾಖೆ ಮುಂದಾಗಿದೆ.

ಸರ್ಕಾರ ನಿಗದಿಪಡಿಸಿದ ಪ್ರತಿ 50 ಕೆ.ಜಿ. ಯೂರಿಯಾ ಗೊಬ್ಬರದ ಚೀಲಕ್ಕೆ ಟಿಎಪಿಸಿಎಂಎಸ್‌ನಲ್ಲಿ ₹ 266ರಂತೆ ಮಾರಾಟ ಮಾಡಲಾಯಿತು. ಕೃಷಿ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಇದೇ ದರಕ್ಕೆ ರಸೀತಿ ಹಾಕಿಸಿ ಗೊಬ್ಬರ ವಿತರಣೆಗೆ ಕ್ರಮ ಕೈಗೊಂಡರು.

ರೈತರಿಂದ ಸರತಿ ಸಾಲು: ಗೊಬ್ಬರ ಪಡೆಯಲು ಪ್ರತಿ ದಿನ ಬೆಳಿಗ್ಗೆ 5ರಿಂದಲೇ ರೈತರು ವಿವಿಧ ಗ್ರಾಮಗಳಿಂದ ಬಂದು ಸಂಘದ ಕಚೇರಿ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಗೊಬ್ಬರದ ಚೀಟಿಗಳು ದೊರೆತ ತಕ್ಷಣವೇ ಉಗ್ರಾಣಕ್ಕೆ ಬಂದು ಲಾರಿಯಿಂದಲೇ ತಮ್ಮ ವಾಹನಗಳಿಗೆ ಹಾಗೂ ಟ್ರ್ಯಾಕ್ಟರ್‌ಗಳಿಗೆ ಗೊಬ್ಬರದ ಚೀಲಗಳನ್ನು ಹಾಕಿಕೊಂಡು ಗ್ರಾಮಗಳತ್ತ ತೆರಳುತ್ತಿದ್ದಾರೆ. ಗೊಬ್ಬರ ಸಿಗದೆ ಇದ್ದವರು ಕಚೇರಿ ಎದುರು ನಿಂತು ಗೊಬ್ಬರಕ್ಕಾಗಿ ಕಾಯುತ್ತಿದ್ದಾರೆ.

ಇನ್ನೂ ಮುಂದೆ ಪ್ರತಿ ವರ್ಷ ಆಯಾ ಗ್ರಾಮದಲ್ಲಿನ ರೈತರ ಸೊಸೈಟಿಗಳಲ್ಲೇ ಯೂರಿಯಾ ಗೊಬ್ಬರ ಮಾರಾಟಕ್ಕೆ ಕ್ರಮ ಕೈಗೊಂಡರೆ ಅನುಕೂಲವಾಗಲಿದೆ ಎಂದು ರೈತರು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಅಧಿಕ ಬಳಕೆ: ಬೆಳೆಗಳಿಗೆ ಹಾನಿ

ಅಗತ್ಯಗಿಂತ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡುವುದರಿಂದ ಬೆಳೆಗಳಿಗೆ ರೋಗ ಅಥವಾ ಕೀಟಬಾಧೆ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ಮಿತಿಯಾಗಿ ಯೂರಿಯಾ ಬಳಸಬೇಕು ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಯೂರಿಯಾ ರಸಗೊಬ್ಬರವನ್ನು ಮಣ್ಣು ಪರೀಕ್ಷಾ ವರದಿಯಲ್ಲಿನ ಶಿಫಾರಸಿನ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಬೇಕು ಎಂದು ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT