ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆ: ಸೊಪ್ಪು- ತರಕಾರಿ ಬೆಳೆ ಉಳಿವಿಗೆ ತೆಂಗಿನಗರಿಯ ಚಪ್ಪರ

Published 16 ಮೇ 2024, 6:58 IST
Last Updated 16 ಮೇ 2024, 6:58 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನಲ್ಲಿ ಹಿಂದೆಂದೂ ಕಾಣದ ಭೀಕರ ಬರ ಸ್ಥಿತಿ ಇದೆ. ದಿನೇದಿನೇ ಹೆಚ್ಚುತ್ತಿರುವ ಬಿಸಿಲ ತಾಪದಿಂದ ಕಾದ ಭೂಮಿ ತನ್ನೊಡಲಿನಿಂದ ಬೆಚ್ಚನೆ ಗಾಳಿಯನ್ನು ಹೊರಸೂಸುತ್ತಿದೆ. ಬಿಸಿ ಗಾಳಿಯಿಂದಾಗಿ ಎಲ್ಲೂ ಕುಳಿತುಕೊಳ್ಳಲೂ, ನಿಂತುಕೊಳ್ಳಲು ಆಗದಂತಾಗಿದೆ. ಮೈಯೆಲ್ಲ ಬೆವರುತ್ತಿದ್ದು, ಕಣ್ಣು ಉರಿಯಿಂದ ಜನರು ಬಸವಳಿದಿದ್ದಾರೆ.

‘ಕೊಳವೆಬಾವಿಯಲ್ಲಿ ಇರುವ ನೀರಿಗೆ ಡ್ರಿಪ್ ಅಳವಡಿಸಿ 5 ಎಕರೆ ಪೈಕಿ 3 ಎಕರೆಯಲ್ಲಿ ಟೊಮೆಟೊ ಬೆಳೆಯೋಣ ಅಂದ್ಕೊಂಡು ಹೊರಗಡೆಯಿಂದ 6,000 ಸಸಿಗಳನ್ನು ತರಿಸಿ ನಾಟಿ ಮಾಡಿದೆ. ಬಿಸಿಲ ತಾಪದ ಪರಿಣಾಮ ಮೂರೇ ದಿನಗಳಲ್ಲಿ ಎಲ್ಲ ಸಸಿಗಳು ಕಮರಿ ಹೋದವು’ ಎಂದು ತಾಲ್ಲೂಕಿನ ನೇರಲಗುಂಟೆ ಗ್ರಾಮದ ಟೊಮೆಟೊ ಬೆಳಗಾರ ವೆಂಕಟೇಶ್ ‘ಪ್ರಜಾವಾಣಿ’ ಎದುರು ಬೇಸರ ವ್ಯಕ್ತಪಡಿಸಿದರು.

ಆದರೂ, ‘ಮರಳಿ ಯತ್ನವ ಮಾಡು’ ಎಂಬಂತೆ ಒಟ್ಟು 3 ಬಾರಿ ನಾಟಿ ಮಾಡಿದೆ. ₹ 1 ಲಕ್ಷ ವ್ಯಯಿಸಿ ಪ್ರತಿ ಸಸಿಗೆ ಗೂಟ ನಿಲ್ಲಿಸಿ ತೆಂಗಿನ ಗರಿ ಚಪ್ಪರ ಹಾಕಲಾಗಿದೆ. ನೆರಳಿನ ಆಸರೆಯಲ್ಲಿ ಸಸಿಗಳು ಚೆನ್ನಾಗಿ ಬೆಳೆಯುತ್ತಿವೆ. ಇದು ಕೊನೆಯ ಪ್ರಯತ್ನ ಎಂದು ಅವರು ನಿಟ್ಟುಸಿರು ಬಿಟ್ಟರು.

2 ತಿಂಗಳಿಂದ ಬಿಸಿಲ ಝಳ ಹೆಚ್ಚಿರುವ ಕಾರಣ ಅಂತರ್ಜಲ ಸಂಪೂರ್ಣ ಕುಸಿದಿದೆ. ಫಸಲು ಉಳಿಸಿಕೊಳ್ಳಲು ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗದೇ ಹತಾಶರಾದ ದೊಡ್ಡಬೀರನಹಳ್ಳಿ, ಟಿ.ಎನ್. ಕೋಟೆ, ಶಿರಾದ ಕಪಿಲೆ, ಚಿಕ್ಕೇನಹಳ್ಳಿ, ಉಳ್ಳಾರ್ತಿ, ಚಿಕ್ಕಮಧುರೆ ಮುಂತಾದ ಗ್ರಾಮಗಳ ರೈತರು ಅಡಿಕೆ, ತೆಂಗು, ಪಪ್ಪಾಯ, ದಾಳಿಂಬೆ ಮತ್ತು ತರಕಾರಿ ಬೆಳೆಗಳಿಗೆ ನೀರು ಲಭ್ಯ ಇರುವ ಅಕ್ಕಪಕ್ಕದ ಕೊಳವೆಬಾವಿಗಳನ್ನು 2-3 ತಿಂಗಳ ತನಕ ಗುತ್ತಿಗೆ ಪಡೆದಿದ್ದಾರೆ.

ಸೊಪ್ಪಿನ ಬೀಜ ಮೊಳೆಕೆ ಒಡೆದಿದೆ. ಆದರೆ, ಬಿಸಿಲಿಗೆ ಕಮರುತ್ತಿದ್ದು, ಗಂಜಿಗುಂಟೆ, ಸೋಮಗುದ್ದು, ಹೊಟ್ಟೆಪ್ಪನಹಳ್ಳಿ, ಸಿದ್ದಾಪುರ, ಲಕ್ಷ್ಮಿಪುರ, ಬೋರಪ್ಪನಹಟ್ಟಿ, ಬತ್ತಯ್ಯನಹಟ್ಟಿ, ಬುಡ್ನಹಟ್ಟಿ ಗ್ರಾಮಗಳ ರೈತರು ತೆಂಗಿನ ಗರಿಗಳ ಸಹಾಯದಿಂದ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಪ್ರತಿದಿನ ಟ್ಯಾಂಕರ್‌ ಮೂಲಕ ನೀರು ಹಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಬಿಸಿಲು ಹೆಚ್ಚಿರುವ ಹಿನ್ನೆಲೆಯಲ್ಲಿ ಗಿಡಗಳಿಗೆ ಹೆಚ್ಚು ನೀರು ಅಗತ್ಯ. ಆದರೆ, ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಸೊಪ್ಪು ಹಾಗೂ ತರಕಾರಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.

ಬಿಸಿಲ ತೀವ್ರತೆ ಮತ್ತು ಅಂತರ್ಜಲ ಕುಸಿತದ ಪರಿಣಾಮ ಕೊಳವೆಬಾವಿಗಳು ಬತ್ತಿವೆ. ಗ್ರಾಮ ಮತ್ತು ನಗರ ಪ್ರದೇಶದಲ್ಲಿ 2-3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗಾಗಿ ಗ್ರಾಮದ ಹೊರವಲಯದ ರಸ್ತೆ ಬದಿಗಳಲ್ಲಿ ನಿರ್ಮಿಸಿರುವ ಸಿಮೆಂಟ್ ತೊಟ್ಟಿಗಳಲ್ಲಿ ನೀರಿಲ್ಲ. ಪರಿಣಾಮವಾಗಿ ಜಾನುವಾರುಗಳಿಗೆ ಕುಡಿಯುವ ನೀರು ಸಿಗದೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ನಾಲ್ಕು ದಿನಗಳ ಹಿಂದೆ ತುಂತುರು ಮಳೆಯಾಗಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಉತ್ತಮ ಮಳೆಯಾದರೆ ಮಾತ್ರ ಬದುಕು ಹಸನಾಗಬಹುದು ಎನ್ನುತ್ತಾರೆ ರೈತರು.

ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರಿದಾಗಿರುವ ತೊಟ್ಟಿಗಳಿಗೆ ನೀರು ಪೂರೈಸುವ ಮೂಲಕ ಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ರೈತ ಮುಖಂಡ ದೊಡ್ಡಣ್ಣ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮದ ರೈತ ವೆಂಕಟೇಶ್ ಅವರು ಟೊಮೆಟೊ ಬೆಳೆಗೆ ತೆಂಗಿನ ಗರಿಗಳ ಸಹಾಯದಿಂದ ನೆರಳಿನ ವ್ಯವಸ್ಥೆ ಮಾಡಿರುವುದು
ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮದ ರೈತ ವೆಂಕಟೇಶ್ ಅವರು ಟೊಮೆಟೊ ಬೆಳೆಗೆ ತೆಂಗಿನ ಗರಿಗಳ ಸಹಾಯದಿಂದ ನೆರಳಿನ ವ್ಯವಸ್ಥೆ ಮಾಡಿರುವುದು
ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಬರಿದಾದ ಜಾನುವಾರು ನೀರಿನ ತೊಟ್ಟಿ
ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಬರಿದಾದ ಜಾನುವಾರು ನೀರಿನ ತೊಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT