ಭೂಮಿಯಿಂದ ಚಿಮ್ಮಿದ ಬೆಂಕಿ: ಆತಂಕದಲ್ಲಿ ಗ್ರಾಮಸ್ಥರು

7
ಲಾವಾರಸದ ಶಂಕೆ, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಭೂಮಿಯಿಂದ ಚಿಮ್ಮಿದ ಬೆಂಕಿ: ಆತಂಕದಲ್ಲಿ ಗ್ರಾಮಸ್ಥರು

Published:
Updated:
Deccan Herald

ನಾಯಕನಹಟ್ಟಿ: ಭೂಮಿಯಿಂದ ಬೆಂಕಿ ರಭಸವಾಗಿ ಚಿಮ್ಮುತ್ತಿರುವ ದೃಶ್ಯ ಕಂಡಿದ್ದು, ಲಾವಾರಸ ಉಕ್ಕಿದೆ ಎಂದು ನಾಯಕನಹಟ್ಟಿ ಸಮೀಪದ ಮನುಮೈನಹಟ್ಟಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಬೆಂಕಿ ಚಿಮ್ಮುತ್ತಿರುವ ವಿಡಿಯೊ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಕಂಡಿದ್ದು ಹೇಗೆ?

ಮನುಮೈನಹಟ್ಟಿ ಗ್ರಾಮದ ಸ್ಮಶಾನದ ಬಳಿ ಇರುವ ರೈತ ನಾರಾಯಣ ನಾಯ್ಕ್ ಅವರ ಜಮೀನಿನ ಬದುವಿನಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ದೂರದಿಂದಲೇ ಗಮನಿಸಿದ ರೈತ ತಿಪ್ಪೇಸ್ವಾಮಿ ಅವರಿಗೆ ಭೂಮಿಯಿಂದ ಲಾವಾರಸದಂತೆ ಕಂಡಿದೆ. ಇದರಿಂದ ಗಾಬರಿಗೊಂಡು ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದವರನ್ನೂ ಕರೆದಿದ್ದಾರೆ. ಬೆಂಕಿಯು ಸುಮಾರು 5 ಅಡಿ ಎತ್ತರಕ್ಕೆ ಚಿಮ್ಮಿದೆ. 6 ಅಡಿ ಉದ್ದದಷ್ಟು ವ್ಯಾಪಿಸಿ 20 ನಿಮಿಷಗಳ ತನಕ ಹೊರಹೊಮ್ಮಿದೆ. ಕೆಲವರು ಈ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡರು.

ಲಾವಾರಸದ ಮಾದರಿಯು ಚಿಮ್ಮಿದ ಸ್ಥಳದಲ್ಲಿ ವಿದ್ಯುತ್‍ ಕಂಬವಿದ್ದು, ಸಂಪೂರ್ಣವಾಗಿ ಹಾನಿಯಾಗಿದೆ.

‘ಸಂಜೆ ನಾಲ್ಕು ಗಂಟೆಗೆ ಲಾವಾರಸ ಉಕ್ಕಿದ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಗುಣಿಯಲ್ಲಿ ಬೆಂಕಿಯು ನೀರಿನ ರೂಪದಲ್ಲಿ ಕುದಿಯುತ್ತಿತ್ತು. ಅಷ್ಟೆ ಅಲ್ಲದೆ ಲಾವಾರಸ ಕಂಡು ಬಂದ ಕಿಂಡಿಯಲ್ಲಿ ಉದ್ದನೆಯ ಗಳವನ್ನು ಬಿಟ್ಟು ನೋಡಿದರೆ 20 ಅಡಿಯಷ್ಟು ಆಳವಾಗಿ ಜಾರುತ್ತದೆ. ಹಾಗಾಗಿ ಇದು ನಿಜವಾಗಿಯೂ ಲಾವಾರಸವೇ ಎಂಬ ಅನುಮಾನ ಬಂದಿದೆ. ಹಾಗಾಗಿ, ಇದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೇನೆ’ ಎಂದು ಪ್ರತ್ಯಕ್ಷದರ್ಶಿ ರೈತರಾದ ತಿಪ್ಪೇಸ್ವಾಮಿ, ನಾರಾಯಣ ನಾಯ್ಕ್ ಹೇಳುತ್ತಾರೆ.

ವಿದ್ಯುತ್ ಅರ್ಥಿಂಗ್ ಸಮಸ್ಯೆ ಶಂಕೆ:

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಶಾಖಾಧಿಕಾರಿ ಧನಂಜಯ, ‘ಸುಮಾರು 11ಕೆವಿ ಸಾಮಾರ್ಥ್ಯದ ವಿದ್ಯುತ್ ತಂತಿಗಳು ಕಂಬದಲ್ಲಿ ಹಾದುಹೋಗಿದ್ದು, ಒಂದು ತಂತಿ ಕಂಬದ ಕಬ್ಬಿಣದ ರಾಡ್‍ನ ಮೇಲೆ ಬಿದ್ದಿದೆ. ಇದರಿಂದ ಭೂಮಿಯಲ್ಲಿ ವಿದ್ಯುತ್ ಅರ್ಥಿಂಗ್ ಸಿಗದಿದ್ದಾಗ ಕಂಬದ ತಳದಲ್ಲಿ ವಿದ್ಯುತ್‍ ಶಾಖ ತಗುಲಿ ಮಣ್ಣುಕಲ್ಲು, ಕಬ್ಬಿಣದ ಸರಳು, ಸಿಮೆಂಟ್ ಸೇರಿ ಕೆಲವಸ್ತುಗಳು ಸುಟ್ಟು ಕರಕಲಾಗಿ ಮೇಲಕ್ಕೆ ಚಿಮ್ಮಿವೆಯೇ ಹೊರತು ಲಾವಾರಸವಲ್ಲ’ ಎನ್ನುತ್ತಾರೆ.

ಸರ್ಕಲ್ ಇನ್‌ಸ್ಪೆಕ್ಟರ್‌ ಎನ್. ತಿಮ್ಮಣ್ಣ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಟಿ.ಎಂ. ಮೋಹನ್‍ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ‘ಸುಟ್ಟ ಅವಶೇಷಗಳನ್ನು ಸಂಗ್ರಹಿಸಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ವರದಿ ಬರುವವರೆಗೂ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !