ಬುಧವಾರ, ಮೇ 25, 2022
29 °C

ಹಿರಿಯೂರು: ವಾಣಿವಿಲಾಸಕ್ಕೆ 10 ಟಿಎಂಸಿ ಅಡಿ ನೀರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸಕ್ಕೆ 10 ಟಿಎಂಸಿ ಅಡಿ ನೀರಿಗೆ ಒತ್ತಾಯಿಸಿ ತಾಲ್ಲೂಕು ಕಚೇರಿ ಎದುರು ರೈತರು ನಡೆಸುತ್ತಿರುವ ಧರಣಿ 57ನೇ ದಿನಕ್ಕೆ ಕಾಲಿಟ್ಟಿದೆ.

ಬೇಡಿಕೆ ಸರ್ಕಾರ ಸ್ಪಂದಿಸದ ಕಾರಣಕ್ಕೆ ಇದೇ ತಿಂಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತಾಲ್ಲೂಕಿಗೆ ಬರುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಸೋಮವಾರ ನಡೆದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಘದ ತಾಲ್ಲೂಕು ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ ಮಾತನಾಡಿ, ‘ಮುಖ್ಯಮಂತ್ರಿ ಬರುವುದಕ್ಕೂ ಮೊದಲು ನಮ್ಮ ಹೋರಾಟದ ಬಗ್ಗೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಟ್ಟು, ಹೋರಾಟದ ಸ್ಥಳಕ್ಕೆ ಅಥವಾ ಬೇರೆ ಯಾವುದಾದರೂ ಸ್ಥಳದಲ್ಲಿ ರೈತ ಮುಖಂಡರ ಜೊತೆ ಸಿಎಂ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಭೇಟಿಗೆ ಅವಕಾಶ ಮಾಡಿಕೊಡದಿದ್ದರೆ ಕಪ್ಪು ಬಾವುಟ ಪ್ರದರ್ಶಿಸಿ, ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಲ್ಲೂಕಿನಲ್ಲಿರುವ 33 ಗ್ರಾಮ ಪಂಚಾಯಿತಿಗಳವರು ವಿಶೇಷ ಸಭೆ ಕರೆದು, ವಾಣಿವಿಲಾಸಕ್ಕೆ 10 ಟಿಎಂಸಿ ಅಡಿ ನೀರು, ಸಕ್ಕರೆ ಕಾರ್ಖಾನೆ ಪುನಾರಂಭ, ಧರ್ಮಪುರ ಹೋಬಳಿ ಕೆರೆಗಳಿಗೆ ನೀರು ಭರ್ತಿ ಮಾಡುವುದು, ತಾಲ್ಲೂಕಿನ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಕೆ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳಿಸಲಾಗುವುದು ಎಂದರು.

ಜೂನ್ ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರೈತ ಸಂಘದ ರಾಜ್ಯಾಧ್ಯಕ್ಷರನ್ನು ಆಹ್ವಾನಿಸಿ ತಾಲ್ಲೂಕು ಮಟ್ಟದ ಸಮಾವೇಶ, ಆಗಸ್ಟ್ ಮೊದಲ ವಾರದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ರೈತ ಮುಖಂಡರನ್ನು ಕರೆಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

2023ರ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಬೆಂಬಲದೊಂದಿಗೆ ಆಮ್ ಆದ್ಮಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವ ಬಗ್ಗೆ ಚರ್ಚಿಸಿ ನಿರ್ಣಯಕ್ಕೆ ಬರಲು ಒಪ್ಪಿಗೆ ನೀಡಲಾಯಿತು.

ಆಲೂರು ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ವೈ. ಶಿವಣ್ಣ ರಂಗಸ್ವಾಮಿ, ತಿಮ್ಮಾರೆಡ್ಡಿ, ದೇವೇಂದ್ರಪ್ಪ, ನಾಗರಾಜ್, ವಿರೂಪಾಕ್ಷಪ್ಪ, ರಂಗನಾಥಗೌಡ, ಸಣ್ಣ ಕರಿಯಪ್ಪ, ಶಿವಣ್ಣ, ಹೊಸಕೆರೆರಮೇಶ್, ಕಾಂತರಾಜ್, ಕೆಂಚಪ್ಪ, ರಾಜಣ್ಣ, ರಾಮಕೃಷ್ಣ, ತಿಮ್ಮಣ್ಣ ಇದ್ದರು.

ತಹಶೀಲ್ದಾರ್ ಚಂದ್ರಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.