ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳಸೇತುವೆಗೆ ವಿಜಾಪುರ ರೈತರ ಒತ್ತಾಯ

Last Updated 4 ನವೆಂಬರ್ 2020, 16:06 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ವಿಜಾಪುರ ಗ್ರಾಮ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಬುಧವಾರ ಧರಣಿ ನಡೆಸಿದರು.

ಹೆದ್ದಾರಿ ಸಮೀಪ ಹಮ್ಮಿಕೊಂಡಿದ್ದ ಧರಣಿಯಲ್ಲಿ ವಿಜಾ‍ಪುರ ಗ್ರಾಮದ ರೈತ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ವಿಜಾಪುರ ಸಮೀಪದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು. ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಅವರು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ‘ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಜಮೀನಿಗೆ ತೆರಳಲು ತೊಂದರೆ ಉಂಟಾಗುತ್ತಿದೆ. ಜಾನುವಾರು ಮೇಯಿಸಲು ಸಾಧ್ಯವಾಗುತ್ತಿಲ್ಲ. ರೈತರು ಜೀವಭಯದಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹೆದ್ದಾರಿ ಹಾದು ಹೋಗುವ ಗ್ರಾಮಗಳ ಬಳಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಗ್ರಾಮ ಸಭೆ ಕರೆದು ಚರ್ಚಿಸಬೇಕು. ಆದರೆ, ಅಧಿಕಾರಿಗಳು ತಮ್ಮ ಇಷ್ಟದಂತೆ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿದ ವಿಜಾಪುರ ಗ್ರಾಮದ ರೈತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಮಾಜಘಾತುಕರ ವಿರುದ್ಧ ದಾಖಲಿಸುವ ಪ್ರಕರಣವನ್ನು ರೈತರ ವಿರುದ್ಧ ದಾಖಲಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದವರು ಕೂಡ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಬೆಳೆ ನಾಶವಾಗಿ ರೈತರು ಸಾಯುತ್ತಿದ್ದಾರೆ. ರೈತರ ಸ್ಥಿತಿಯನ್ನು ಅರಿಯುವ ಕನಿಷ್ಠ ಕಾಳಜಿಯೂ ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ಕಿಡಿ ಕಾರಿದರು.

ಬೇಡರೆಡ್ಡಿಹಳ್ಳಿ ಬಸವರೆಡ್ಡಿ , ರಾಜ್ಯ ರೈತದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‍ಬಾಬು, ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ, ರೈತ ಮುಖಂಡರಾದ ಕೊಟ್ರಬಸಪ್ಪ, ಎಂ.ಬಿ.ತಿಪ್ಪೇಸ್ವಾಮಿ ಇದ್ದರು.

***

ದೇಶಕ್ಕೆ ಅನ್ನ ನೀಡುವ ರೈತ ಹೊಲದಲ್ಲಿ ದುಡಿದು ಸಾಲಗಾರನಾಗಿದ್ದಾನೆ. ರೈತರನ್ನು ದರೋಡೆ ಮಾಡುವವರು ಕುಬೇರರಾಗುತ್ತಿದ್ದಾರೆ.

–ಕೆ.ಪಿ.ಭೂತಯ್ಯ,ರೈತ ಸಂಘದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT