ಶನಿವಾರ, ಅಕ್ಟೋಬರ್ 16, 2021
29 °C
ಹಿಂದೂ ಮಹಾಗಣಪತಿ ಶೋಭಾಯಾತ್ರೆ, ಡಿಜೆ ಬಳಕೆಗೆ ಅವಕಾಶ ನೀಡದ

ಎರಡೇ ಗಂಟೆಯೊಳಗೆ ಮಹಾಗಣಪತಿ ವಿಸರ್ಜಿಸಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅ. 2ರಂದು ನಡೆಯಲಿದೆ. ಪ್ರತಿ ವರ್ಷ 12 ತಾಸು ತೆಗೆದುಕೊಳ್ಳುತ್ತಿದ್ದ ಈ ಕಾರ್ಯಕ್ರಮಕ್ಕೆ ಈ ಬಾರಿ ಕೇವಲ 2 ಗಂಟೆಯೊಳಗೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಅವಕಾಶ ನೀಡಿದ್ದಾರೆ.

ಪ್ರಮುಖ ಮಾರ್ಗಗಳಲ್ಲಿ ಮಹಾಗಣಪತಿ ಮೂರ್ತಿ ಸಾಗಲಿದ್ದು, ಪ್ರತಿಷ್ಠಾಪನಾ ಸ್ಥಳದಿಂದ ಎಷ್ಟು ಗಂಟೆಗೆ ಕರೆದೊಯ್ಯಬೇಕು. ಯಾವ ಸಮಯ ಸೂಕ್ತ ಎಂಬ ಗೊಂದಲ ಉತ್ಸವ ಸಮಿತಿಯ ಪದಾಧಿಕಾರಿಗಳಲ್ಲಿ ನಿರ್ಮಾಣವಾಗಿದೆ.

‘ಅಂದು ಬೃಹತ್ ಶೋಭಾಯಾತ್ರೆ ಇರುವುದಿಲ್ಲ. ಡಿಜೆಗೂ ಅವಕಾಶ ನೀಡಿಲ್ಲ. ಸಮಿತಿಯವರು 10 ಕಲಾ ತಂಡಗಳಿಗೆ ಅನುಮತಿ ಕೋರಿದ್ದರು. ಆದರೆ, ನಾಲ್ಕು ಕಲಾ ತಂಡಗಳಿಗೆ ಮಾತ್ರ ಅವಕಾಶ ನೀಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮದಕರಿನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಬಿ.ಡಿ. ರಸ್ತೆ, ಪ್ರವಾಸಿ ಮಂದಿರ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಕನಕ ವೃತ್ತ ತಲುಪಲಿದೆ. ಅಲ್ಲಿಯವರೆಗೂ ಮಾತ್ರ ಗಣಪತಿ ನೋಡಲು ಭಕ್ತರಿಗೆ ಅವಕಾಶವಿದೆ. ಅಲ್ಲಿಂದ ವಿಸರ್ಜನೆ ಆಗುವ ಸ್ಥಳವಾದ ಚಂದ್ರವಳ್ಳಿ ಮಾರ್ಗ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ’ ಎಂದು ಹೇಳಿದರು.

‘ಪ್ರತಿಷ್ಠಾಪನಾ ಸ್ಥಳದಿಂದ ಹೊರಟು ವಿಸರ್ಜನೆ ಆಗುವವರೆಗೂ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಈಗಾಗಲೇ ಸಮಿತಿಗೆ ಸೂಚಿಸಲಾಗಿದೆ. ಜನದಟ್ಟಣೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರದೆಯೇ ಮನೆಯಲ್ಲಿ ಸುರಕ್ಷಿತರಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಿ. ಅಂದು ಪ್ರಸಾರ ಆಗಲಿರುವ ಕಾರ್ಯಕ್ರಮವನ್ನು ಇರುವ ಸ್ಥಳದಿಂದಲೇ ಲೈವ್‌ ಮೂಲಕ ವೀಕ್ಷಿಸಿ, ಭಕ್ತಿ ಸಮರ್ಪಿಸಿ’ ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ.

‘ಕೋವಿಡ್‌ ಸಂಬಂಧ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲೆಯ ಹಲವು ಗ್ರಾಮಗಳ ಗ್ರಾಮಸ್ಥರು ಮುಂದೆ ಬರುತ್ತಿಲ್ಲ. ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಉಚಿತವಾಗಿ ನೀಡುತ್ತಿದೆ. ತಪ್ಪದೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ’ ಎಂದು ಮನವಿ ಮಾಡಿದ್ದಾರೆ.

ದಸರಾ: ಮಾರ್ಗಸೂಚಿ ಪಾಲಿಸಿ

‘ನಾಡಹಬ್ಬ ದಸರಾ ಮಹೋತ್ಸವ ಅ. 7ರಿಂದ ಆರಂಭವಾಗಿ 15ರವರೆಗೆ ನಡೆಯಲಿದೆ. ಈ ವೇಳೆ ಕೂಡ ಕೋವಿಡ್ ನಿಯಂತ್ರಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ದಸರಾ ಹಬ್ಬವನ್ನು ಅತ್ಯಂತ ಸರಳ ಮತ್ತು ಭಕ್ತಿಪೂರ್ವಕವಾಗಿ ಮನೆಗಳಲ್ಲಿ ಆಚರಿಸಬೇಕು’ ಎಂದು ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.

‘ಹಬ್ಬದ ಅಂಗವಾಗಿ ಜಿಲ್ಲೆಯ ಯಾವುದೇ ಸ್ಥಳದಲ್ಲೂ ಒಮ್ಮೆಗೆ 400ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಕೆ ಜತೆಗೆ ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಬೇಕು. ಆಚರಣೆ ವೇಳೆ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಕಾಪಾಡಬೇಕು’ ಎಂದು ಅವರು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು