ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಗಣೇಶೋತ್ಸವ ಸಂಭ್ರಮಕ್ಕೆ ಕೋವಿಡ್ ಅಡ್ಡಿ

ವೇದವಂದಿತ ಆದಿಪೂಜಿತ ಗಣಪನ ತಯಾರಕರಿಗೆ ಎರಡು ವರ್ಷಗಳಿಂದ ಸಂಕಷ್ಟ
Last Updated 6 ಸೆಪ್ಟೆಂಬರ್ 2021, 7:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಗಣೇಶೋತ್ಸವ ಬಂತೆಂದರೆ ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮ. ಗಲ್ಲಿ ಗಲ್ಲಿಗಳಲ್ಲೂ ವಿಘ್ನನಿವಾರಕ ವಿಘ್ನೇಶ್ವರನ ಪ್ರತಿಷ್ಠಾಪನೆಗೆ ಎಲ್ಲಿಲ್ಲದ ಉತ್ಸಾಹ. ಹದಿನೈದು ದಿನ ಮುಂಚಿತವಾಗಿಯೇ ಪೆಂಡಾಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿತ್ತು. ಆದರೆ, ಕೋವಿಡ್ ನಂತರ ಹಿಂದಿನ ವರ್ಷದಂತೆ ಈ ಬಾರಿಯೂ ಸಾರ್ವಜನಿಕ ಉತ್ಸವ ಕಳೆಗುಂದಿದೆ. ಎಲ್ಲಿಯೂ ಸಡಗರವಾಗಲಿ, ಉತ್ಸಾಹವಾಗಲಿ ಕಂಡುಬರುತ್ತಿಲ್ಲ.

ಕೋವಿಡ್ ಮೂರನೇ ಅಲೆಯ ನಿರೀಕ್ಷೆ ಇರುವ ಕಾರಣ ಸಾರ್ವಜನಿಕ ಗಣೇಶೋತ್ಸವದ ಮೇಲೆ ಈ ಬಾರಿಯೂ ಸರ್ಕಾರವು ಕಠಿಣ ನಿರ್ಬಂಧ ವಿಧಿಸುವ ಸಾಧ್ಯತೆ ಹೆಚ್ಚಿದೆ. ಸರ್ಕಾರ ಒಂದು ವೇಳೆ ಅನುಮತಿ ನೀಡಿದರೂ ನಿಯಮ ಪಾಲಿಸಿ ಮೊದಲಿನಂತೆ ಉತ್ಸವ ಆಚರಿಸುವುದು ಸುಲಭದ ಮಾತಲ್ಲ. ಹೀಗಾಗಿ ಹಲವು ಸಮಿತಿಯವರು ಆಚರಣೆ ಕೈಗೊಳ್ಳಬೇಕೇ ಕೈಬಿಡಬೇಕೇ ಎಂಬ ಗೊಂದಲಕ್ಕೆ ಒಳಗಾಗಿದ್ದು, ಈವರೆಗೂ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ.

ಬೃಹದಾಕಾರದ ವಿಗ್ರಹಗಳಿಗೆ ಈವರೆಗೂ ಬೇಡಿಕೆ ಕಂಡುಬಂದಿಲ್ಲ. ತಯಾರಕರು ಕೂಡ ದೊಡ್ಡ ಗಣಪತಿ ಮೂರ್ತಿ ತಯಾರಿಸಿಲ್ಲ. ವೇದವಂದಿತ ಆದಿಪೂಜಿತ ಗಣಪನ ತಯಾರಕರು ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಮಿಯಾನ ಅಂಗಡಿಗಳ ಮಾಲೀಕರು, ಹಬ್ಬದ ವೇಳೆ ಆಲಂಕಾರಿಕ ವಸ್ತುಗಳು ಸೇರಿ ವಿವಿಧ ಪರಿಕರಗಳ ಮಾರಾಟಗಾರರಿಗೂ ತೊಂದರೆ ಉಂಟಾಗಿದೆ. ಕಣ್ಣಿಗೆ ಕಾಣದ ಕೊರೊನಾ ಸೋಂಕಿನಿಂದಾಗಿ ವ್ಯಾಪಾರ, ವಹಿವಾಟು ಸರಿಯಾಗಿ ನಡೆಯದೇ ಜೀವನ ನಿರ್ವಹಿಸಲು ಪರ್ಯಾಯ ಮಾರ್ಗವೂ ಸಿಗದೇ ಪರದಾಡುತ್ತಿದ್ದಾರೆ.

ಶಾಸ್ತ್ರ, ಸಂಪ್ರದಾಯದ ಕಾರಣಕ್ಕೆ ಸರಳವಾಗಿ ಆಚರಿಸಲು ಮುಂದಾಗುವವರಿಗಾಗಿ ವಿಗ್ರಹ ತಯಾರಕರು ಮನೆಗಳಲ್ಲಿ ಪೂಜಿಸಲು ಸಾಧ್ಯವಾಗುವಂಥ ಸಣ್ಣ ವಿಗ್ರಹಗಳನ್ನು ಮಾತ್ರ ಸಿದ್ಧಪಡಿಸುತ್ತಿದ್ದಾರೆ. ಜತೆಗೆ ಪರಿಸರಸ್ನೇಹಿ ಮಣ್ಣಿನ ಗಣಪನ ವಿಗ್ರಹಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಅಂತಹ ವಿಗ್ರಹಗಳನ್ನೇ ತಯಾರಿಸಲು ಹಲವರು ಮುಂದಾಗಿದ್ದಾರೆ.

ಕೋವಿಡ್‌ಗೂ ಮುನ್ನ ಹಬ್ಬಕ್ಕೆ ಆರು ತಿಂಗಳು ಮುಂಚಿನಿಂದಲೇ ವಿಗ್ರಹ ತಯಾರಿಕೆಯಲ್ಲಿ ತೊಡಗುತ್ತಿದ್ದರು. ಈ ರೀತಿಯ ಉತ್ಸಾಹ ಜಿಲ್ಲೆಯ ಯಾವ ತಯಾರಕರ ಬಳಿಯೂ ಈಗ ಇಲ್ಲ. ಗ್ರಾಹಕರು ಬಿಟ್ಟು ಹೋಗಬಾರದು ಎಂಬ ದೃಷ್ಟಿಯಿಂದ 1, 2, 3 ಅಡಿಯ ಗಣಪತಿಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಈ ಬಾರಿಯೂ ಗಣೇಶನ ಮೇಲೆ ಭಾರ ಹಾಕಿ ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ಕೆ.ಎನ್‌. ಗುರುಮೂರ್ತಿ ಮತ್ತು ಕೆ.ಎನ್‌.ವೀರೇಶ್‌ ಎಂಬ ಸಹೋದರರು ಚಿತ್ರದುರ್ಗ ನಗರದಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸುತ್ತಾರೆ. ಇದು ಅವರ ಕುಲಕಸುಬೂ ಹೌದು. ಇಡೀ ಕುಟುಂಬದ ಆರು ಮಂದಿ ವಿಗ್ರಹ ಮಾರಾಟದ ಮೇಲೆ ಜೀವನ ಅವಲಂಬಿಸಿದ್ದಾರೆ. ಪ್ರತಿವರ್ಷ ಎಲ್ಲರೂ ಸೇರಿ ದೊಡ್ಡ ಗಾತ್ರದ 100ಕ್ಕೂ ಹೆಚ್ಚು ಮತ್ತು ಸಣ್ಣ ಗಾತ್ರದ 500ಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದರು. ಕೋವಿಡ್ ನಂತರ ದೊಡ್ಡ ಗಾತ್ರದ ಗಣಪತಿ ತಯಾರಿಸುವುದನ್ನೇ ಬಿಟ್ಟಿದ್ದಾರೆ.

‘ಎಚ್‌.ಡಿ. ಪುರದಿಂದ ಮಣ್ಣನ್ನು ತಂದು ಹದಗೊಳಿಸಿ ಮೂರ್ತಿ ತಯಾರಿಸುವ ಕೆಲಸದಲ್ಲಿ ಕುಟುಂಬದ ಸದಸ್ಯರೆಲ್ಲರೂ ಭಾಗಿಯಾಗುತ್ತೇವೆ. 300ಕ್ಕೂ ಹೆಚ್ಚು ಗಣಪನ ಮೂರ್ತಿ ತಯಾರಿಸಿದ್ದೇವೆ. ನಮ್ಮ ಕುಟುಂಬವು 35 ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದೆ. ಕುಟುಂಬಕ್ಕೆ ಆದಾಯ ಮೂಲವಾದ ಈ ಉದ್ಯೋಗವು ಕೊರೊನಾ ಕಾರಣದಿಂದ ಸೊರಗಿದೆ’ ಎನ್ನುತ್ತಾರೆ ಗುರುಮೂರ್ತಿ.

‘ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪನಿಗೆ ಬೇಡಿಕೆ ಕುಂದಿಲ್ಲ. ಆದರೆ, ಮೂರ್ತಿಗಳ ಮುಂಗಡ ಕಾಯ್ದಿರಿಸುವಿಕೆ ಈ ಮೊದಲಿನಂತೆ ಇಲ್ಲ. ಹಬ್ಬದ ದಿನವೇ ಮೂರ್ತಿಗಳು ಮಾರಾಟ ಆಗುತ್ತವೆಯೋ ಉಳಿಯುತ್ತವೆಯೋ ಎಂಬುದು ಖಚಿತವಾಗಲಿದೆ. ಸಂಪ್ರದಾಯದಂತೆ ಮೂರ್ತಿ ತಯಾರಿಕೆ ಮುಂದುವರಿಸಲಾಗಿದೆ. ಆದರೆ, 2019ರಲ್ಲಿ ಇದ್ದಂತಹ ಉತ್ಸಾಹ ಜನರಲ್ಲಿಲ್ಲ’ ಎನ್ನುತ್ತಾರೆ ಮೂರ್ತಿ ತಯಾರಕ ರಾಮಗಿರಿ ಸಿದ್ದೇಶ್‌.

₹ 300ರಿಂದ₹ 30 ಸಾವಿರದವರೆಗೂ 1ರಿಂದ 10 ಅಡಿವರೆಗಿನ ಗಣೇಶನ ವಿಗ್ರಹ ಈ ಮುಂಚೆ ತಯಾರಿಸುತ್ತಿದ್ದೆವು. ಆ ವೇಳೆ ತಯಾರಿಸಲು₹ 1 ಲಕ್ಷ ಖರ್ಚಾಗುತ್ತಿತ್ತು. ಒಂದೆರಡು ಲಕ್ಷ ಲಾಭ ಕಾಣುತ್ತಿದ್ದೆವು. ಕೋವಿಡ್ ನಂತರ ಹತ್ತಿಪ್ಪತ್ತು ಸಾವಿರ ಲಾಭವಾದರೆ ಅದೇ ಹೆಚ್ಚು. ಈ ವರ್ಷ ಯಾವ ತಯಾರಕರಿಗೂ ಅಧಿಕ ಲಾಭವಾಗದು’ ಎನ್ನುತ್ತಾರೆಅವರು.

......‌

ಉಳಿದ ಶೇ 50ರಷ್ಟು ಗಣೇಶ ಮೂರ್ತಿಗಳು

ಹಿರಿಯೂರು ನಗರದಲ್ಲಿ ಹಿಂದಿನ ವರ್ಷ ತಯಾರಿಸಿರುವ ಗಣೇಶ ಮೂರ್ತಿಗಳೇ ಶೇ 50ರಷ್ಟು ಹಾಗೇ ಉಳಿದಿವೆ. ಹೀಗಾಗಿ ಅಲ್ಲಿನ ತಯಾರಕರಲ್ಲೂ ಮೊದಲಿನಂತೆ ಹೆಚ್ಚಿನ ಉತ್ಸಾಹ ಇಲ್ಲವಾಗಿದೆ. ಅನೇಕ ತಯಾರಕರು ಕೋವಿಡ್‌ನಿಂದಾಗಿ ಕಂಗಾಲಾಗಿದ್ದಾರೆ.

50ನೇ ವರ್ಷದ ಸುವರ್ಣ ಮಹೋತ್ಸವಕ್ಕಾಗಿ ಕಾಯುತ್ತಿರುವ ಇಲ್ಲಿಯ ಶಕ್ತಿ ಗಣಪತಿ ಪೂಜಾ ಸಮಿತಿ ಪ್ರತಿಷ್ಠಾಪಿಸುವ ಗಣೇಶೋತ್ಸವ ಕಾರ್ಯಕ್ರಮವನ್ನು ಈ ಬಾರಿ ಹೇಗೆ ಆಚರಿಸಬೇಕು ಎಂಬ ಗೊಂದಲ ಸಮಿತಿಯವರಲ್ಲಿದೆ. ಹೀಗಾಗಿ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.

ಇನ್ನು ಚಳ್ಳಕೆರೆ ಮತ್ತು ಮೊಳಕಾಲ್ಮುರು ಭಾಗದಲ್ಲಿ ಇದೇ ಅವಧಿಯಲ್ಲಿ ಗೌರಸಂದ್ರ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಬರುವುದರಿಂದ ಈ ಭಾಗದ ಹೆಚ್ಚಿನ ಜನ ಗಣಪತಿ ಹಬ್ಬ ಆಚರಿಸುವುದಿಲ್ಲ.

..............

ಮಣ್ಣಿನ ಗಣಪ ಮಾರಾಟಕ್ಕೆ ಸಿದ್ಧ

ಸಾಂತೇನಹಳ್ಳಿ ಸಂದೇಶ್‌ ಗೌಡ

ಹೊಳಲ್ಕೆರೆ: ಪಟ್ಟಣದ ಈಶ್ವರಪ್ಪ ಎಂಬುವರ ಮನೆಯಲ್ಲಿ 400 ಗಣಪತಿ ಮೂರ್ತಿಗಳನ್ನು ತಯಾರಿಸಿದ್ದು, ಮಾರಾಟಕ್ಕೆ ಸಿದ್ಧವಾಗಿವೆ. ವಿವಿಧ ಭಂಗಿಗಳ ವಿಗ್ರಹಗಳು ತಯಾರಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

‘ನಮ್ಮ ತಾತನ ಕಾಲದಿಂದ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ. ನಾವು ಮಣ್ಣಿನ ಮೂರ್ತಿಗಳನ್ನು ಮಾತ್ರ ತಯಾರಿಸುತ್ತೇವೆ. ಸಣ್ಣ ಮೂರ್ತಿಗಳಿಗೆ ಇಲ್ಲಿನ ಕೆರೆಯ ಮಣ್ಣು ಬಳಸುತ್ತೇವೆ. ಎತ್ತರದ ಮೂರ್ತಿಗಳಿಗೆ ಶಿವಮೊಗ್ಗ ಸಮೀಪದ ಹಾರನಹಳ್ಳಿ, ಕುಂಸಿ ಕಡೆಯಿಂದ ಮಣ್ಣು ತರಿಸುತ್ತೇವೆ. ಅಲ್ಲಿನ ಮಣ್ಣು ಹೆಚ್ಚು ಜಿಗುಟಾಗಿದ್ದು, ಬಿಗಿಯಾಗಿ ಹಿಡಿಯುತ್ತದೆ. ಹಿಂದೆಲ್ಲಾ 10 ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸಿದ್ದೇವೆ. ಈಗ 4 ಅಡಿ ಎತ್ತರದ ಗಣೇಶನ ಮೂರ್ತಿಗಳನ್ನು ತಯಾರಿಸಲು ಅನುಮತಿ ನೀಡಲಾಗಿದೆ’ ಎನ್ನುತ್ತಾರೆ ಈಶ್ವರಪ್ಪ.

‘ಈಗ ಮಾರುಕಟ್ಟೆಯಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ನಾವು ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತೇವೆ. ವಾಟರ್ ಪೇಂಟ್ ಬಳಸುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಬಣ್ಣ ಹಚ್ಚದೇ ಇರುವ ನೈಸರ್ಗಿಕ ಗಣಪತಿಗಳನ್ನೂ ತಯಾರಿಸುತ್ತೇವೆ. ಈ ಗಣಪತಿ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಜತೆಗೆ ಗೌರಿ ಮೂರ್ತಿಗಳನ್ನೂ ತಯಾರಿಸುತ್ತೇವೆ’ ಎನ್ನುತ್ತಾರೆ ಕಲಾವಿದ ಜಗದೀಶ್ ಕುಂಬಾರ್ ಹಾಗೂ ಪತ್ನಿ ಶೀಲಾ.

.............

ಮೂರ್ತಿ ತಯಾರಕರಿಗೆ ಕೊರೊನಾ ಕರಿನೆರಳು

ಎಸ್. ಸುರೇಶ್ ನೀರಗುಂದ

ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಗೌರಿಗಣೇಶ ಮೂರ್ತಿ ತಯಾರಕರಿಗೆ ಈ ಬಾರಿಯೂ ಕೋವಿಡ್ ಕರಿನೆರಳು ಕವಿದಿದೆ.

ಹಿಂದೆಲ್ಲಾ ಗೌರಿಗಣೇಶ ಚತುರ್ಥಿಗೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಒಂದು ತಿಂಗಳು ಮುಂಚಿತವಾಗಿಯೇ ತಮಗೆ ಬೇಕಾದ ಶೈಲಿಯ ಗಣಪತಿ ಮಾಡಿಕೊಡುವಂತೆ ಮುಂಗಡವಾಗಿ ಹಣ ಕೊಟ್ಟು ಮೂರ್ತಿ ತಯಾರಕರ ಬಳಿ ಬುಕ್ ಮಾಡುತ್ತಿದ್ದರು.

ಆದರೆ, ಕೊರೊನಾ ಬಂದಾಗಿಂದ ಸೋಂಕು ನಿಯಂತ್ರಣಕ್ಕಾಗಿ ಅದ್ದೂರಿ ಗಣೇಶ ಉತ್ಸವ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಇದರಿಂದ ಗಣಪತಿ ಪ್ರತಿಷ್ಠಾಪಿಸಲು ಜನರು ಒಲವು ತೋರಿಸುತ್ತಿಲ್ಲ. ಗಣೇಶ ಮೂರ್ತಿಗೆ ಮುಂಗಡ ಬುಕ್ ಮಾಡಲು ಬರುತ್ತಿಲ್ಲ. ಇದರಿಂದಾಗಿ ಶೇ 50ಕ್ಕಿಂತ ಅಧಿಕ ಪ್ರಮಾಣದಲ್ಲಿ ಗಣಪತಿ ಮೂರ್ತಿ ತಯಾರಿ ಕೆಲಸ ಕುಸಿತವಾಗಿದೆ. ಇದರಿಂದ ಗಣಪತಿ ಮೂರ್ತಿ ತಯಾರಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಪಟ್ಟಣದ ಗಾಂಧಿ ವೃತ್ತ ಸಮೀಪದ ಮಳಿಗೆಯೊಂದರಲ್ಲಿ 20 ವರ್ಷಗಳಿಂದ ಮಣ್ಣಿನ ಗಣಪತಿ ಮೂರ್ತಿ ತಯಾರಿಸುತ್ತಿರುವ ಕಲಾವಿದ ಸಿ.ಕೆ. ತ್ಯಾಗರಾಜಾಚಾರ್ಯ.

ಮೂರು ತಿಂಗಳ ಹಿಂದೆಯೇ ಕೆರೆಯಿಂದ ಮಣ್ಣು ತಂದು ಅದನ್ನು ಹದ ಮಾಡಿದ್ದೇನೆ. ಈ ಮಣ್ಣಿಗೆ ತೆಂಗಿನನಾರು ಬಳಸಿ ಅರ್ಧ ಅಡಿಯಿಂದ 4 ಅಡಿ ವರೆಗಿನ ಸಿದ್ಧಿವಿನಾಯಕ, ಲಂಬೋದರ, ಮಹಾಗಣಪತಿ, ಶಕ್ತಿಗಣಪತಿ, ವರಸಿದ್ಧಿವಿನಾಯಕ, ಗೌರಮ್ಮ ಸೇರಿ ಸುಮಾರು 100 ಗಣಪತಿ ಮೂರ್ತಿ ತಯಾರಿಸಲಾಗಿದೆ. ₹ 50ರಿಂದ ₹ 5,000ರವರೆಗೆ ಮಾರಾಟ ಮಾಡಲಾಗುವುದು. ಆದರೆ, ಹಿಂದಿನಂತೆ ಖರೀದಿಗೆ ಮುಂದೆ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.‌

....

ದೊಡ್ಡ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡಿದರೆ ಮಾತ್ರ ಲಾಭ ಬರುತ್ತದೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಸಣ್ಣ ವಿಗ್ರಹಗಳಿಂದ ಹೆಚ್ಚಿನ ಲಾಭ ಇಲ್ಲ. ಹಿಂದಿಗಿಂತಲೂ ಶೇ 80ರಷ್ಟು ವ್ಯಾಪಾರ ಕುಸಿದಿದೆ. ಮುಂಗಡ ಕಾಯ್ದಿರಿಸುವಿಕೆ ಕಡಿಮೆಯಾಗಿದೆ.

–ಸಿದ್ದೇಶ್, ಮೂರ್ತಿ ತಯಾರಕ

....

ಕುಂಬಾರಿಕೆ ಮೂಲ ವೃತ್ತಿ. ಪ್ಲಾಸ್ಟಿಕ್ ಬಂದ ನಂತರ ಕಸುಬಿಗೆ ಬೇಡಿಕೆ ಕುಸಿದಿದೆ. ಹೀಗಾಗಿ ಗಣಪತಿ ತಯಾರಿಕೆ ವೃತ್ತಿ ಅವಲಂಬಿಸಿದ್ದೇವೆ. ಅದರಲ್ಲೂ ಪರಿಸರಸ್ನೇಹಿ ಗಣಪತಿಗೆ ಒತ್ತು ನೀಡುತ್ತಿದ್ದೇವೆ. ಹೀಗಿದ್ದರೂ ಅರಿಶಿಣ ಗಣಪ ಎನ್ನುತ್ತಿದ್ದಾರೆ. ಮಣ್ಣಿನ ಗಣಪ ತಯಾರಕರ ಜೀವನ ಹೇಗೆ?

–ವೀರೇಶ್, ಮೂರ್ತಿ ತಯಾರಕ

...

ಗೌರಿ–ಗಣೇಶ ಮಹೋತ್ಸವ ಸಂಬಂಧ ಅದ್ದೂರಿಯಾದ ಗಣಪತಿ ಪ್ರತಿಷ್ಠಾಪಿಸಲು ಅವಕಾಶ ಕೊಡುವುದಿಲ್ಲ ಎಂದು 3 ತಿಂಗಳಿನಿಂದ ಸರ್ಕಾರ ಹೇಳುತ್ತಿದೆ. ಹಬ್ಬ 4 ದಿನ ಇರುವಾಗ ಕೂರಿಸಲು ಅವಕಾಶ ಕಲ್ಪಿಸಿದರೆ ಮೂರ್ತಿ ತಯಾರಿ ಮಾಡಿಕೊಡಲು ಸಾಧ್ಯವಾಗುವುದಿಲ್ಲ.

– ಸಿ.ಕೆ. ತ್ಯಾಗರಾಜಾಚಾರ್ಯ, ಮೂರ್ತಿ ತಯಾರಕ, ಹೊಸದುರ್ಗ

....

ಪ್ರತಿ ಆಚರಣೆಯಲ್ಲೂ ವಿವಿಧ ಕಸುಬುದಾರರ, ಕಲಾವಿದರ ಜೀವನ ಅಡಗಿರುತ್ತದೆ. ಆದರೆ, ಕೋವಿಡ್‌ನಿಂದ ಆಚರಣೆಗಳಿಗೆ ಅಡ್ಡಿಯಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಗಣಪತಿ ಮೂರ್ತಿ ತಯಾರಕರ ಜೀವನವೂ ಸಂಕಷ್ಟದಲ್ಲಿದೆ.

- ಜಗದೀಶ್ ಕುಂಬಾರ್, ಮೂರ್ತಿ ತಯಾರಕ, ಹೊಳಲ್ಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT