ನಾಯಕ ಸಮುದಾಯಕ್ಕೆ ಅನ್ಯಾಯ: ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆರೋಪ

ಚಿತ್ರದುರ್ಗ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಮೀಸಲಾತಿಯನ್ನು ಬದಲಾವಣೆ ಮಾಡಿದ್ದರಿಂದ ನಾಯಕ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘1995ರ ಬಳಿಕ ನಗರಸಭೆಯ ಮೀಸಲಾತಿ 9 ಬಾರಿ ಬದಲಾಗಿದೆ. ಎರಡು ದಶಕದ ಬಳಿಕ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು. ನಾಯಕ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಲು ಪಕ್ಷ ಉತ್ಸುಕವಾಗಿತ್ತು. ಬಿಜೆಪಿಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ಮೀಸಲಾತಿ ಬದಲಾಯಿಸಲಾಗಿದೆ’ ಎಂದು ದೂರಿದರು.
‘ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್–ಜೆಡಿಸ್ ಮೈತ್ರಿ ಪಕ್ಷ ಅಧಿಕಾರ ಹಿಡಿಯಲು ವಾಮ ಮಾರ್ಗದಲ್ಲಿ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವರ ಮೇಲೆ ಆಡಳಿತಾರೂಢ ಪಕ್ಷದ ಸ್ಥಳೀಯ ಮುಖಂಡರು ಒತ್ತಡ ಹೇರಿ ಮೀಸಲಾತಿ ಬದಲಾಯಿಸಿದ್ದಾರೆ’ ಎಂದರು.
‘ಮೀಸಲು ಬದಲಾವಣೆ ಮಾಡಿದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶವಿದೆ. ನ್ಯಾಯಾಲಯದ ಮೆಟ್ಟಿಲೇರಿ ಕಾಲಾಹರಣ ಮಾಡಲು ಪಕ್ಷಕ್ಕೆ ಇಷ್ಟವಿಲ್ಲ. ವಿರೋಧ ಪಕ್ಷಗಳ ಹುನ್ನಾರವನ್ನು ಸಕಾರಾತ್ಮಕವಾಗಿ ಸ್ವೀಕರಿಸಲಿದ್ದೇವೆ. ಅಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿದ್ದು, ಶೀಘ್ರವೇ ಅಧಿಕಾರಕ್ಕೆ ಬರಲಿದ್ದೇವೆ’ ಎಂದು ಹೇಳಿದರು.
‘ನಗರಸಭೆಯಲ್ಲಿ ಬಿಜೆಪಿ 17 ಸದಸ್ಯ ಬಲ ಹೊಂದಿದೆ. ಪಕ್ಷೇತರರಾಗಿ ಆಯ್ಕೆಯಾದ 20ನೇ ವಾರ್ಡ್ನ ಅನಿತಾ, 24ನೇ ವಾರ್ಡ್ನ ಮೊಹಮ್ಮದ್ ದಾವೂದ್ ಹಾಗೂ 6ನೇ ವಾರ್ಡ್ನ ಮಂಜುಳಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. 3ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಗೀತಾ ವೆಂಕಟೇಶ್ ಕೂಡ ಬೆಂಬಲ ಸೂಚಿಸಲು ಸಮ್ಮತಿಸಿದ್ದಾರೆ. ಹೀಗಾಗಿ, ಬಿಜೆಪಿಯೇ ನಗರಸಭೆ ಅಧಿಕಾರ ಹಿಡಿಯುತ್ತದೆ’ ಎಂದು ಪಕ್ಷದ ಸಾಮರ್ಥ್ಯವನ್ನು ಬಿಚ್ಚಿಟ್ಟರು.
‘ಕಾಂಗ್ರೆಸ್–ಜೆಡಿಎಸ್ ಮೈತ್ರಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮತದಾರರು ಬಿಜೆಪಿಗೆ ಅತಿಹೆಚ್ಚು ಸ್ಥಾನ ನೀಡಿದ್ದಾರೆ. ಹತ್ತಾರು ವರ್ಷ ಆಳ್ವಿಕೆ ನಡೆಸಿ ನಗರವನ್ನು ಹಾಳು ಮಾಡಿದವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ’ ಎಂದು ಕುಟುಕಿದರು.
‘ಪ್ರವರ್ಗ 3ಬಿಗೆ ನಿಗದಿಯಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಅಭ್ಯರ್ಥಿಗಳು ಇಲ್ಲ. ಅರ್ಹತೆ ಹೊಂದಿದ ಪಕ್ಷೇತರರು ನಮ್ಮನ್ನು ಸಂಪರ್ಕಿಸಿಲ್ಲ. ಉಪಾಧ್ಯಕ್ಷೆ ಸ್ಥಾನಕ್ಕೆ ಅರ್ಹತೆ ಹೊಂದಿದವರ ಬೆಂಬಲವನ್ನು ನಾವು ಕೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ನಗರಸಭೆ ಸದಸ್ಯರಾಗಿ ಆಯ್ಕೆಯಾದ ಕೆ.ಬಿ.ಸುರೇಶ್, ಲಕ್ಷ್ಮಮ್ಮ, ಭಾಗ್ಯಮ್ಮ, ನಾಗಮ್ಮ, ತಿಪ್ಪಮ್ಮ, ಭಾಸ್ಕರ್, ಹರೀಶ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.