ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗದ ಪೂರಕ ನಾಲೆ ಕನಸು

ಧರ್ಮಪುರ: ಸ್ವಾತಂತ್ರ್ಯ ಪೂರ್ವದಿಂದ ನಾಲೆಗಾಗಿ ಗ್ರಾಮಸ್ಥರ ಕನವರಿಕೆ
Last Updated 18 ಡಿಸೆಂಬರ್ 2020, 2:07 IST
ಅಕ್ಷರ ಗಾತ್ರ

ಧರ್ಮಪುರ: ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೇಡಿಕೆ ಇದ್ದ ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಯೋಜನೆ ಸ್ವಾತಂತ್ರ್ಯ ನಂತರವೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಫಲಪ್ರದವಾಗಿಲ್ಲ.

ಪ್ರತಿ ಚುನಾವಣೆಯಲ್ಲೂ ರಾಜಕೀಯ ನಾಯಕರು ನೀಡುವ ಎರಡು ಆಶ್ವಾಸನೆಗಳೆಂದರೆ ಐತಿಹಾಸಿಕ ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಹಾಗೂ ಧರ್ಮಪುರ ತಾಲ್ಲೂಕು ಕೇಂದ್ರವನ್ನಾಗಿ ಮಾಡುವುದು. ಆದರೆ, ಎರಡು ಬೇಡಿಕೆಗಳೂ ಈವರೆಗೆ ಈಡೇರಿಲ್ಲ.

ಧರ್ಮಪುರ ಹೋಬಳಿಯಲ್ಲಿ 10 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಪಂಚಾಯಿತಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಜತೆಗೆ ಕೊಳವೆ ಬಾವಿ ನೀರಿನಿಂದ ಹೆಚ್ಚಾಗಿರುವ ಫ್ಲೋರೈಡ್ ಅಂಶ ಈ ಭಾಗದ ಜನರಲ್ಲಿ ಶಾಶ್ವತ ಸಮಸ್ಯೆಯಾಗಿಯೇ ಉಳಿದಿದೆ.

ಗಡಿ ಹೋಬಳಿಯಾಗಿರುವ ಧರ್ಮಪುರದಿಂದ ಆಂಧ್ರಪ್ರದೇಶದ ಅಮರಾಪುರಂಗೆ ಸಂಪರ್ಕ ಕಲ್ಪಿಸುವ ಖಂಡೇನಹಳ್ಳಿ, ಮದ್ದಿಹಳ್ಳಿ, ಕರಿಯಜ್ಜನ ಪಾಳ್ಯ, ಹೊಸಕೆರೆ, ಬೇತೂರು, ಬೇತೂರು ಪಾಳ್ಯ ರಸ್ತೆಗಳು ಕೆಲವು ಕಡೆ ದುರಸ್ತಿ ಕಾಣದೆ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ.

ಧರ್ಮಪುರದಲ್ಲಿ ಹತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಶೌಚಾಲಯ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಬೆನಕನಹಳ್ಳಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ನಾಲ್ಕೈದು ವರ್ಷಗಳಿಂದ ದುರಸ್ತಿ ಕಾಣದೆ ಯಂತ್ರದ ಬಿಡಿ ಭಾಗಗಳು ತುಕ್ಕು ಹಿಡಿಯಲಾರಂಭಿಸಿವೆ. ರಸ್ತೆಗಳ ಡಾಂಬರೀಕರಣ ಕಾಣದೆ ಜಾಲಿ ಗಿಡಗಳು ಆಕ್ರಮಿಸಿವೆ. ಹೋಬಳಿಯ ಅರಳೀಕೆರೆ, ಬೆನಕನಹಳ್ಳಿ, ಕಂಬತ್ತನಹಳ್ಳಿ, ಬೆಟ್ಟಗೊಂಡನಹಳ್ಳಿ, ವೇಣುಕಲ್ಲುಗುಡ್ಡ, ಹೊಂಬಳದಟ್ಟಿ, ಬುರುಡುಕುಂಟೆ ಗ್ರಾಮಗಳಲ್ಲಿ ಬಸ್ ಸಂಚಾರ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಆರೇಳು ಕಿ.ಮೀ.ದೂರ ನಡೆದುಕೊಂಡೇ ಬರಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಸಲ್ಲಿಸಿದ ಮನವಿಗಳಿಗೆ ಪುರಸ್ಕಾರವೇ ಸಿಕ್ಕಿಲ್ಲ.

ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿಯ ಸಕ್ಕರ, ಮದ್ದಿಹಳ್ಳಿ, ಕರಿಯಜ್ಜನ ಪಾಳ್ಯ, ಧರ್ಮಪುರ ಗ್ರಾಮ ಪಂಚಾಯಿತಿಯ ಕೃಷ್ಣಾಪುರ, ಧರ್ಮಪುರ, ಶ್ರವಣಗೆರೆ, ಬೆನಕನಹಳ್ಳಿ, ಹರಿಯಬ್ಬೆ ಗ್ರಾಮ ಪಂಚಾಯಿತಿಯ ಹರಿಯಬ್ಬೆ, ಮುಂಗುಸವಳ್ಳಿ, ಸೂಗೂರು, ಈಶ್ವರಗೆರೆ ಗ್ರಾಮ ಪಂಚಾಯಿತಿಯ ಹೂವಿನಹೊಳೆ, ವೇಣುಕಲ್ಲುಗುಡ್ಡ, ದೇವರಕೊಟ್ಟ, ಅಬ್ಬಿನಹೊಳೆ ಗ್ರಾಮ ಪಂಚಾಯಿತಿಯ ಗೂಳ್ಯ, ಹೊಸಹಳ್ಳಿ, ಚಿಲ್ಲಹಳ್ಳಿ, ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಬ್ಯಾಡರಹಳ್ಳಿ ಮೊದಲಾದ ಕಡೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

‘ಪ್ರತಿ ಪಂಚಾಯಿತಿಯಲ್ಲೂ ಕಂದಾಯ ವಸೂಲಿ ನಡೆಯುತ್ತದೆ. ಆದರೆ, ನಿರ್ವಹಣೆ ಸರಿ ಇಲ್ಲ’ ಎಂದು ವೀರೇಶ್ ಮತ್ತು ಷರೀಫ್ ಖಾನ್ ದೂರುತ್ತಾರೆ.

ಧರ್ಮಪುರ ಕೆರೆಗೆ ಪೂರಕ ನಾಲೆ ಆಗಬೇಕು. ಆ ಮೂಲಕ ಕುಡಿಯುವ ನೀರಿನ ಸಮಸ್ಯೆ ದೂರವಾಗಬೇಕು. ಗಡಿ ಗ್ರಾಮಗಳಲ್ಲಿ ರಸ್ತೆಗಳ ಸಂಪರ್ಕ, ಬಸ್ ಸಂಚಾರ ಮತ್ತು ವಸತಿ ರಹಿತರಿಗೆ ವಸತಿ ಸೌಲಭ್ಯ ಒದಗಿಸಬೇಕು.

ಎ.ಶಿವಮೂರ್ತಿ, ಬೆನಕನಹಳ್ಳಿ ಗ್ರಾಮಸ್ಥ

ಅನೇಕ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಮಿಷನ್ ವ್ಯವಸ್ಥೆ ಇದ್ದು, ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಉತ್ತಮ ಪ್ರತಿನಿಧಿಗಳ ಆಯ್ಕೆ ಮಾಡುವ ಮೂಲಕ ಭ್ರಷ್ಟಾಚಾರ ತೊಲಗಬೇಕು.

ಕೆ.ಎನ್.ನಾಗರಾಜ, ಮದ್ದಿಹಳ್ಳಿ ಗ್ರಾಮಸ್ಥ

ಗ್ರಾಮದಲ್ಲಿ ಶುಚಿತ್ವ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಅಭಿವೃದ್ಧಿ ಆಗಬೇಕು. ತುಂಗಭದ್ರಾ ಹಿನ್ನೀರಿನ ಮೂಲಕ ಹೋಬಳಿಯ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು.

ದೇವೀರಮ್ಮ, ಹಲಗಲದ್ದಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT