ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ಮಹಾ ರಥೋತ್ಸವ ನಾಳೆ

ಕಾಯಕಯೋಗಿ ಜಾತ್ರೆಗೆ ಸಕಲ ಸಿದ್ಧತೆ, ಎಲ್ಲೆಡೆ ಸಂಭ್ರಮ
Published 25 ಮಾರ್ಚ್ 2024, 14:03 IST
Last Updated 25 ಮಾರ್ಚ್ 2024, 14:03 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆ ಅಂಗವಾಗಿ ಮಾರ್ಚ್ 26ರಂದು ಮಧ್ಯಾಹ್ನ 3ಕ್ಕೆ ದೊಡ್ಡ ರಥೋತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಸಿದ್ಧತೆಗಳು ಭರದಿಂದ ಸಾಗಿವೆ.

ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷಾಂತರ ಭಕ್ತರು ಪಟ್ಟಣಕ್ಕೆ ಬರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 

7 ಜನ ಡಿವೈಎಸ್ಪಿ, 16 ಮಂದಿ ಸಿಪಿಐ, 52 ಜನ ಪಿಎಸ್ಐ, 82 ಜನ ಎಎಸ್‌ಐ, 211 ಮಂದಿ ಹೆಡ್‌ಕಾನ್‌ಸ್ಟೆಬಲ್, 418 ಮಹಿಳಾ ಮತ್ತು ಪುರುಷ ಕಾನ್‌ಸ್ಟೆಬಲ್‌, 3 ಕೆಎಸ್‌ಆರ್‌ಪಿ ತುಕಡಿ, 6 ಡಿಎಆರ್ ಪಡೆ, 550 ಗೃಹ ರಕ್ಷಕ ದಳದ ಸಿಬ್ಬಂದಿ, 2 ಫೈರ್‌ ಡೆಂಟರ್, 1 ಟೈಗರ್ ವಾಹನ, 1 ವಜ್ರ ವಾಹನ, 3 ಕ್ಯೂಆರ್‌ಟಿ ವಾಹನ, 3 ಇಂಟರ್ ಸೆಪ್ಟರ್‌ಗಳನ್ನು ನಿಯೋಜಿಸಲಾಗಿದೆ.

7 ಕಡೆ ಚೆಕ್‌ಪೋಸ್ಟ್‌ ಹಾಗೂ 24 ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. 46 ಸಿ.ಸಿ.ಟಿವಿ ಕ್ಯಾಮೆರಾ, 4 ವಾಚ್ ಟವರ್ ತೆರೆಯಲಾಗಿದೆ. ರಥೋತ್ಸವದ ವೇಳೆ ಎತ್ತರದ ಪ್ರದೇಶದಿಂದ ಡ್ರೋನ್ ಮೂಲಕ ವಿಡಿಯೊ ಚಿತ್ರೀಕರಣ ನಡೆಯಲಿದೆ.

ಜಾತ್ರೆಯಲ್ಲಿ ಜನರ ಆರೋಗ್ಯ ತಪಾಸಣೆಗೆಂದು 20 ವೈದ್ಯರು, 4 ಪ್ರಥಮ ಚಿಕಿತ್ಸಾ ಕೇಂದ್ರಗಳು, 7 ಜನ ಔಷಧ ವಿತರಕರು, 6 ಜನ ಆಹಾರ ಪರಿವೀಕ್ಷಕರು, ಶೂಶ್ರೂಷಕಿಯರು, 4 ಆಂಬುಲೆನ್ಸ್ ಸೇರಿದಂತೆ ಒಟ್ಟು 170ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಕುಡಿಯುವ ನೀರು ಸರಬರಾಜಿಗೆ ಸಮೀಪದಲ್ಲಿರುವ 7 ರೈತರ ಜಮೀನುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳ ಎಲ್ಲ ಗ್ರಾಮ ಪಂಚಾಯಿತಿಯಿಂದ ಒಂದೊಂದು ಟ್ಯಾಂಕರ್ ನೀಡಲು ಸೂಚಿಸಲಾಗಿದೆ. ಶಿವಮೊಗ್ಗದ ಹಾಲು ಒಕ್ಕೂಟದಿಂದ 30 ಸಾವಿರ ಲೀಟರ್ ಸಾಮರ್ಥ್ಯದ 6 ಲಾರಿ ಟ್ಯಾಂಕರ್ ಸೇರಿ 50ಕ್ಕೂ ಹೆಚ್ಚು ನೀರಿನ ಟ್ಯಾಂಕರ್‌ಗಳ ಮೂಲಕ ಕಂದಾಯ ಅಧಿಕಾರಿಗಳ ಉಸ್ತುವಾರಿಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. 

ಸ್ವಚ್ಛತೆಗೆ ಕ್ರಮ:

ಪಟ್ಟಣ ಪಂಚಾಯಿತಿಯ ಸಹಯೋಗದಲ್ಲಿ ಅಗತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. 8 ಕಡೆ ಮೊಬೈಲ್‌ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಒಳಮಠದ ದೇವಾಲಯದ ಮುಂಭಾಗ ಹಾಗೂ ತೇರು ಬೀದಿಯಲ್ಲಿನ ರಸ್ತೆಯ ಅಕ್ಕ-ಪಕ್ಕದಲ್ಲಿರುವ ಚಪ್ಪರಗಳನ್ನು ತೆರವುಗೊಳಿಸಿ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ.

ಮುಕ್ತಿ ಬಾವುಟ ಹರಾಜಿಗೆ ಒಪ್ಪಂದ ಪತ್ರ:

ಜಾತ್ರೆಯ ಕೇಂದ್ರಬಿಂದು ರಥೋತ್ಸವ. ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ವರ್ಷ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸ್ಥಳದಲ್ಲಿ ಹಾಜರಿರಬೇಕು. ಹಾಗೇ ಮುಕ್ತಿ ಬಾವುಟ ಪಡೆದವರು ಒಂದು ವರ್ಷದಲ್ಲಿ ಹಣ ಪಾವತಿಸಬೇಕು. ಅದಕ್ಕಾಗಿ ಒಪ್ಪಂದ ಪತ್ರ ನೀಡಬೇಕು ಎಂದು ದೇವಾಲಯದ ಇಒ ಎಚ್. ಗಂಗಾಧರಪ್ಪ ತಿಳಿಸಿದ್ದಾರೆ.

ರಥಕ್ಕೆ ಮಿಣಿ (ಹಗ್ಗ)ಯನ್ನು ಕಟ್ಟುತ್ತಿರುವುದು
ರಥಕ್ಕೆ ಮಿಣಿ (ಹಗ್ಗ)ಯನ್ನು ಕಟ್ಟುತ್ತಿರುವುದು
ಒಳಮಠದ ಆವರಣದಲ್ಲಿ ನಿರ್ಮಿಸಿರುವ ಪೆಂಡಾಲ್
ಒಳಮಠದ ಆವರಣದಲ್ಲಿ ನಿರ್ಮಿಸಿರುವ ಪೆಂಡಾಲ್

ಪಾದಯಾತ್ರೆಯಲ್ಲಿ ಬರುತ್ತಿರುವ ಭಕ್ತರು

ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಚಿತ್ರದುರ್ಗ ಚಳ್ಳಕೆರೆ ಜಗಳೂರು ಭರಮಸಾಗರ ದಾವಣಗೆರೆ ಕೊಟ್ಟೂರು ಆಂಧ್ರಪ್ರದೇಶದ ಕಲ್ಯಾಣದುರ್ಗ ರಾಯದುರ್ಗ ಅನಂತಪುರ ಜಿಲ್ಲೆಯಿಂದ ಸಾವಿರಾರು ಭಕ್ತರು ಬರಿಗಾಲಿನಲ್ಲಿ ಪಾದಯಾತ್ರೆಯ ಮೂಲಕ ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT